ಮಂಗಳವಾರ, ಜೂನ್ 22, 2021
27 °C

ವ್ಯಾಪಕ ಮಳೆ | ಉಕ್ಕಿದ ನದಿಗಳು: ‘ಉತ್ತರ’ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ/ ಕಲಬುರ್ಗಿ: ದಕ್ಷಿಣ ಮಹಾರಾಷ್ಟ್ರದ ಕೃಷ್ಣಾ ಕೊಳ್ಳ ಹಾಗೂ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ರಾಜ್ಯದಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ.

ಇದರಿಂದ ವರ್ಷದ ಅಂತರದಲ್ಲಿಯೇ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಗದಗ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ. ಕಳೆದ ವರ್ಷದ ನೆರೆ ಹಾನಿಯ ಸಂಕಷ್ಟದಿಂದ ಇನ್ನೂ ಚೇತರಿಸಿಕೊಳ್ಳದ ನದಿ ಪಾತ್ರಗಳ ಲಕ್ಷಾಂತರ ಜನ–ಜನುವಾರುಗಳಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 55,958 ಕ್ಯುಸೆಕ್ ಸೇರಿದಂತೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 1.21 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಈ ಪ್ರಮಾಣ 2.75 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ನದಿ ತೀರದ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದೆ. ವಿಜಯಪುರದ ಆಲಮಟ್ಟಿ ಜಲಾಶಯದಿಂದ 2.5 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಟ್ಟಿದ್ದು, ನಿಡಗುಂದಿ ತಾಲ್ಲೂಕಿನ ಅರಳದಿನ್ನಿ, ಯಲಗೂರ ಗ್ರಾಮದಲ್ಲಿ ಬೆಳೆ ಜಲಾವೃತವಾಗಿದೆ. ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯ ಸಂಪೂರ್ಣ ತುಂಬಿರುವುದರಿಂದ ಸೋಮವಾರ ಹತ್ತು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.

23 ಗ್ರಾಮಗಳಲ್ಲಿ ಪ್ರವಾಹ ಭೀತಿ: ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.37 ಲಕ್ಷ ನೀರು ಹರಿಸಲಾಗುತ್ತಿರುವ ಕಾರಣ ಶಹಾಪುರ ಮತ್ತು ವಡಗೇರಾ ತಾಲ್ಲೂಕುಗಳ ಕೌಳೂರು (ಎಂ), ಟೊಣ್ಣೂರು, ಗೌಡೂರು, ಯಕ್ಷಂತಿ ಸೇರಿದಂತೆ ಒಟ್ಟು 23 ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ನದಿಯಲ್ಲಿ ಇಳಿಯದಂತೆ ಮತ್ತು ಜಾಗೃತರಾಗಿ ಇರುವಂತೆ ತಾಲ್ಲೂಕು ಆಡಳಿತದ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಇನ್ನೂ ಜನರ ಓಡಾಟ ಮತ್ತು ವಾಹನಗಳ ಸಂಚಾರ ಆರಂಭವಾಗಿಲ್ಲ. ನಡುಗಡ್ಡೆ ಪ್ರದೇಶದಲ್ಲಿ ಪ್ರವಾಹ ಭೀತಿ ಇದೆ.

ಸಾವಿರಾರು ಎಕರೆ ಬೆಳೆಗೆ ಹಾನಿ
ಬೆಳಗಾವಿಯ ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ 40 ಸಾವಿರ, ಹಿರಣ್ಯಕೇಶಿಯಿಂದ 13 ಸಾವಿರ, ಬಳ್ಳಾರಿ ನಾಲೆಯಿಂದ 9 ಸಾವಿರ ಜೊತೆಗೆ ಬೇರೆ ಬೇರೆ ಹಳ್ಳ–ಕೊಳ್ಳಗಳಿಂದ ಬರುವ ನೀರು ಸೇರಿ 70 ಸಾವಿರ ಕ್ಯುಸೆಕ್ ನೀರು ನದಿಯಲ್ಲಿ ಹರಿದುಬರುತ್ತಿದೆ. ಇದರಿಂದ ಬೆಳಗಾವಿ ಜಿಲ್ಲೆ ಗೋಕಾಕ‌ ಪಟ್ಟಣದ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನಲ್ಲಿ ನದಿಯ ಆಸುಪಾಸಿನಲ್ಲಿ ಬರುವ ಸಾವಿರಾರು ಎಕರೆ ಹೊಲಗಳಲ್ಲಿ ಬೆಳೆದು ನಿಂತ ಪೈರು ಜಲಾವೃತವಾಗಿದೆ. ನದಿಯಲ್ಲಿ ನೀರಿನ ಮಟ್ಟ ಪ್ರತಿ ಗಂಟೆಗೂ ಹೆಚ್ಚಳವಾಗುತ್ತಿದೆ. ಅಪಾಯದ ಪ್ರದೇಶಗಳಲ್ಲಿ ನೆಲೆಸಿರುವವರನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಜಿಲ್ಲಾಡಳಿತ ಕೈಗೊಂಡಿದೆ. 

ಬೆಳಗಾವಿ ಜಿಲ್ಲೆಯ ಸವದತ್ತಿಯ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 26,864 ಕ್ಯುಸೆಕ್ ನೀರು ಹರಿಯಬಿಡಲಾಗಿದೆ. ರಾಮದುರ್ಗ, ಗದಗ ಜಿಲ್ಲೆಯ ನರಗುಂದ, ರೋಣ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಹುನಗುಂದ ತಾಲ್ಲೂಕುಗಳಲ್ಲಿ ನದಿ ಉಕ್ಕೇರಿ ಹರಿಯುತ್ತಿದೆ. ರೋಣ ತಾಲ್ಲೂಕಿನ ಮೆಣಸಗಿ ಬಳಿ ಬೆಣ್ಣೆಹಳ್ಳದಿಂದ ಭಾರಿ ಪ್ರಮಾಣದಲ್ಲಿ ನೀರು ಮಲಪ್ರಭಾ ನದಿ ಸೇರುತ್ತಿದೆ. ಇದರಿಂದ ಹೊಳೆ ಆಲೂರು ಪಟ್ಟಣ ಜಲಾವೃತವಾಗುವ ಭೀತಿ ಎದುರಾಗಿದೆ.

ತೆಪ್ಪ ಮುಳುಗಿ ನಾಲ್ವರು ನಾಪತ್ತೆ
ಶಕ್ತಿನಗರ (ರಾಯಚೂರು ಜಿಲ್ಲೆ): ಪೆದ್ದಕುರಂ (ಕುರ್ವಕುಲ) ಗ್ರಾಮ ಸಮೀಪದ ಕೃಷ್ಣಾನದಿಯಲ್ಲಿ ಸೋಮವಾರ ಸಂಜೆ ತೆಪ್ಪ ಮುಳುಗಿ ಬಾಲಕಿ ಸೇರಿ ನಾಲ್ವರು ನಾಪತ್ತೆಯಾಗಿದ್ದಾರೆ.

ತೆಲಂಗಾಣ ರಾಜ್ಯದ ಮಖ್ತಲ್‌ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಪಾಡುವಿನಲ್ಲಿ ಸಂತೆ ಮುಗಿಸಿಕೊಂಡು 13 ಮಂದಿ ತೆಪ್ಪದಲ್ಲಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. 9 ಜನರನ್ನು ರಕ್ಷಿಸಲಾಗಿದೆ.

‘ಎಲ್ಲರೂ ರಾಯಚೂರು ತಾಲ್ಲೂಕಿನ ಗಡಿಪ್ರದೇಶದ ಪೆದ್ದಕುರಂ ಗ್ರಾಮದವರಾಗಿದ್ದು, ಬಾಲಕಿ ಮತ್ತು ಮೂವರು ಮಹಿಳೆಯರು ಕಾಣೆಯಾಗಿದ್ದಾರೆ. ಅವರಿಗಾಗಿ ಶೋಧ ಮುಂದುವರೆದಿದೆ. ಎನ್‌ಡಿಆರ್‌ಎಫ್‌ ತಂಡ ಮತ್ತು ಯಾಪಲದಿನ್ನಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ತಹಶೀಲ್ದಾರ ಡಾ.ಹಂಪಣ್ಣ ಸಜ್ಜನ ತಿಳಿಸಿದರು.

ದೇವಸ್ಥಾನ, ಸೇತುವೆಗಳು ಜಲಾವೃತ
ಕೃಷ್ಣಾ ನದಿಗೆ ಬಂದ ಮಹಾಪೂರದಿಂದಾಗಿ ಸೋಮವಾರ ಬೆಳಗಾವಿಯ ರಾಯಬಾಗ ತಾಲ್ಲೂಕು ಕುಡಚಿ ಬಳಿಯ ಸೇತುವೆ ಜಲಾವೃತವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಖಾನಾಪುರದ ಘಟ್ಟ ಪ್ರದೇಶಗಳಲ್ಲಿ ಪಾಂಡರಿ ಹಾಗೂ ಮಲಪ್ರಭಾ ನದಿಗಳು ಮೈದುಂಬಿ ಹರಿಯುತ್ತಿವೆ. ಪಾಂಡರಿ ನದಿಯ ಸೆಳೆತಕ್ಕೆ ತಾಲ್ಲೂಕಿನ ಶಿವಠಾಣ ರೈಲ್ವೆ ನಿಲ್ದಾಣದ ಬಳಿ ಭೂ ಕುಸಿತ ಉಂಟಾಗಿದೆ.

ಲೋಂಡಾ ಗ್ರಾಮದ ಸಾತನಾಳಿ ಬಳಿಯ ಸಂಕ (ತೂಗು ಸೇತುವೆ) ಜಲಾವೃತವಾಗಿದ್ದು, ಅಕ್ಕಪಕ್ಕದ ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

ರಾಮದುರ್ಗ– ಸುರೇಬಾನ ಸೇತುವೆ ಜಲಾವೃತವಾಗಿದೆ. ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲಿ ಬ್ಯಾಂಕ್‌, ಮನೆಯೊಳಗೆ ನೀರು ನುಗ್ಗಿದೆ. ಎಂ.ಕೆ.ಹುಬ್ಬಳ್ಳಿ ಬಳಿಯ ಮಲಪ್ರಭಾ ನದಿದಂಡೆಯ ಮೇಲಿರುವ ಶರಣೆ ಗಂಗಾಬಿಕಾ ಐಕ್ಯಮಂಟಪ ಮುಳುಗುವ ಹಂತ ತಲುಪಿದೆ. ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಗೋಕಾಕ ಹೊರವಲಯದ ಲೊಳಸೂರ ಸೇತುವೆ ಮುಳುಗಡೆಯಾಗಿದೆ. ಹಿರಣ್ಯಕೇಶಿ ನದಿ ದಂಡೆಯ ಬಡಕುಂದ್ರಿ ಗ್ರಾಮದ ಹೊಳೆಮ್ಮ ದೇವಸ್ಥಾನ ಮತ್ತು ಕೊಟಬಾಗಿ ಗ್ರಾಮದ ದುರ್ಗಾದೇವಿ ಮಂದಿರ ಜಲಾವೃತವಾಗಿವೆ.

    ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು