ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗದ ಮಳೆ: ಏಳು ಸಾವು, ಮತ್ತಷ್ಟು ಮುಳುಗಿದ ಬೆಂಗಳೂರು ‘ಪೂರ್ವ’

ಮತ್ತಷ್ಟು ಮುಳುಗಿದ ಬೆಂಗಳೂರು ‘ಪೂರ್ವ’ l ವಿವಿಧೆಡೆ ಮುಂದುವರಿದ ಅಬ್ಬರ
Last Updated 6 ಸೆಪ್ಟೆಂಬರ್ 2022, 18:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮಂಗಳವಾರವೂ ಇತ್ತು. ಈ ಸಂಬಂಧಿ ಅವಘಡಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಬಳ್ಳಾರಿ, ವಿಜಯನಗರದಲ್ಲಿ 55 ಮನೆಗಳು, ಧಾರವಾಡ ಜಿಲ್ಲೆಯಲ್ಲಿ 107 ಮನೆಗಳಿಗೆ ಹಾನಿಯಾಗಿದೆ.

ರಸ್ತೆ, ಜಮೀನು, ತಗ್ಗು ಪ್ರದೇಶ ಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಜೊತೆಗೆ ನಿವಾಸಿಗಳು, ಸಂತ್ರಸ್ತರ ಕಷ್ಟಗಳು ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ಸಂಜೆ ಮತ್ತು ರಾತ್ರಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಐ.ಟಿ ಉದ್ಯಮ ಕೇಂದ್ರೀತ ಪ್ರದೇಶಗಳು ಸೇರಿ ಹೆಚ್ಚಿನ ಕಡೆ ರಸ್ತೆಗಳು ಜಲಾವೃತವಾಗಿವೆ.

ಬೆಂಗಳೂರಿನಲ್ಲಿ ಬಹುತೇಕ ಎಲ್ಲ ಪ್ರದೇಶದಲ್ಲಿ ಸೋಮವಾರ ಹಾಗೂ ಮಂಗಳವಾರ ರಾತ್ರಿಯೂ ಮಳೆ ಮುಂದುವರಿದಿದೆ. ಪೂರ್ವ ಭಾಗದ ಬಡಾವಣೆಗಳು ಕೆರೆಗಳಾಗಿದ್ದರೆ, ರಸ್ತೆಗಳು ಹೊಳೆಗಳ ರೂಪ ತಾಳಿವೆ. ಮಹದೇವಪುರ ವಲಯದಲ್ಲಿ 10 ಸೆಂ.ಮೀ ಮಳೆಯಾಗಿದ್ದು, ಬಡಾವಣೆ ಗಳು ಹಾಗೂ ರಸ್ತೆಗಳಲ್ಲಿ ನೀರಿನ ಮಟ್ಟ ಏರುತ್ತಲೇ ಇದೆ.

ಐಟಿ ಕಂಪನಿಗಳು ಬಹುತೇಕ ವರ್ಕ್‌ ಫ್ರಂ ಹೋಂ ವ್ಯವಸ್ಥೆ ಆರಂಭಿಸಿವೆ. ಸರ್ಜಾ ಪುರ ರಸ್ತೆ, ವರ್ತೂರು, ಬೆಳ್ಳಂದೂರು ಪ್ರದೇಶಗಳಲ್ಲಿ ಮಳೆ ಮಧ್ಯೆಯೇ ಬಿಬಿಎಂಪಿ ಸಿಬ್ಬಂದಿ ರಾಜಕಾಲುವೆ ತೆರವು ಮಾಡಿ ನೀರು ಹರಿಸಲು ಯತ್ನಿಸು ತ್ತಿದ್ದಾರೆ. ಗದಗ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಾಮ ರಾಜನಗರ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಬಳಿ ಭೂಕುಸಿತವಾಗಿದ್ದು, ದೊಡ್ಡಬಳ್ಳಾಪುರ ಮತ್ತು ಚಿಕ್ಕ ಬಳ್ಳಾಪುರ ನಡುವಿನ ಸಂಚಾರ ವ್ಯತ್ಯಯವಾಗಿದೆ.

ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ ಕೆಸ್ತೂರು ಮತ್ತುಬಾಗಲಕೋಟೆ ಜಿಲ್ಲೆ ಇಳಕಲ್‌ ತಾಲ್ಲೂಕಿನ ದಮ್ಮೂರಯಲ್ಲಿ ತಲಾ ಒಬ್ಬ ರೈತ ಹಾಗೂ ಹನೂರು ತಾಲ್ಲೂಕಿನ ಮಿಣ್ಯಂನಲ್ಲಿ ಕುರಿಗಾಹಿ ಸಿಡಿಲು ಬಡಿದು ಸತ್ತಿದ್ದಾರೆ. ಶಿವ ಮೊಗ್ಗದ ಮಲವಗೊಪ್ಪದಲ್ಲಿ ಗೋಡೆ ಕುಸಿದು ಗೌರಮ್ಮ (60), ಹಾವೇರಿ ಜಿಲ್ಲೆಯ ಶಿಶುವಿನಹಾಳ ಗ್ರಾಮದಲ್ಲಿ ಮನೆ ಕುಸಿದು ಯುವಕ ನೊಬ್ಬ ಮಂಗಳವಾರ ಮೃತಪಟ್ಟಿ ದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್‌ ನಲ್ಲಿ ಸೋಮವಾರ ರಾತ್ರಿ ಮಳೆ ಸುರಿಯುವ ವೇಳೆ ವಿದ್ಯುತ್ ತಗುಲಿ ಅಖಿಲಾ ಎಂಬುವರು ಮೃತಪಟ್ಟಿ ದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ದಲ್ಲಿ ಭದ್ರತೆಗೆ ನಿಯೋಜನೆ ಗೊಂಡು ಕೊಚ್ಚಿಹೋಗಿದ್ದ ಇಬ್ಬರು ಪೊಲೀಸರ ಪೈಕಿ ನಿಂಗಪ್ಪ ಅವರ ಶವ ಪತ್ತೆ ಯಾಗಿದ್ದು, ಮಹೇಶ ವಕ್ಕರದ ಅವರ ಪತ್ತೆಗೆ ಶೋಧ ನಡೆದಿದೆ. ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿಯಲ್ಲಿ ಮಹಿಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಪತ್ತೆ ಕಾರ್ಯ ನಡೆದಿದೆ.

ಬೆಂಗಳೂರು ಮುಳುಗಿಲ್ಲ; ಹಾಗೆ ಬಿಂಬಿಸುವ ಅವಶ್ಯವಿಲ್ಲ– ಮುಖ್ಯಮಂತ್ರಿ

ಮೈಸೂರು: ‘ಮಳೆ ನಮ್ಮನ್ನು ಕೇಳಿ ಬರುತ್ತದೆಯೇ? 80 ವರ್ಷಗಳಲ್ಲಿ ಆಗದಿರು ವಷ್ಟು ಒಮ್ಮೆಲೇ ಸುರಿದಿದೆ. ಇಡೀ ಬೆಂಗಳೂರು ಮುಳುಗಿ ಹೋಗಿಲ್ಲ. ಎಲ್ಲವೂ ಮುಳುಗಿದೆ ಎಂದು ಬಿಂಬಿಸುವ ಅವಶ್ಯಕತೆಯೂ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿರಂತರ ಮಳೆಯಿಂದಾಗಿ ಬೆಂಗಳೂರಿನ ಎಂಟು ವಲಯಗಳಲ್ಲಿ ಎರಡರಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಬೊಮ್ಮನಹಳ್ಳಿ ವಲಯ ನಿಯಂತ್ರಣದಲ್ಲಿದೆ. ಮಹದೇವಪುರ ವಲಯದ 69 ಕೆರೆ ಸೇರಿಬೆಂಗಳೂರಿನಲ್ಲಿ 164 ಕೆರೆಗಳು ತುಂಬಿವೆ’ ಎಂದರು.

‘ಇಂಥ ಮಳೆಗೆ ಯಾವ ಚರಂಡಿಗಳನ್ನೂ ವಿನ್ಯಾಸ ಮಾಡಲಾಗಿರುವುದಿಲ್ಲ. ದೊಡ್ಡ ಪ್ರಮಾಣದ ಒತ್ತುವರಿ ಹಾಗೂ ಚರಂಡಿ ಬ್ಲಾಕ್ ಆಗಿ ನೀರು ಸಂಗ್ರಹವಾಗಿದೆ. ಐಟಿ ಪಾರ್ಕ್‌ ಎದುರು ನೀರು ನಿಂತಿದೆ. ಕೆಲವಡೆ ಚರಂಡಿ ಮುಚ್ಚಿ ಕಟ್ಟಿದ್ದಾರೆ. ಕೆಲವೆಡೆ ಬ್ಲಾಕ್ ಆಗಿದೆ‘ ಎಂದರು.

‘ಬಹಳ ದೊಡ್ಡ ಸವಾಲಿದೆ. ಯಾರೇ ಒತ್ತುವರಿ ಮಾಡಿದ್ದರೂ ತೆರವಿಗೆ ಸೂಚಿಸಿದ್ದೇನೆ. ನಾನೇ ಮೇಲ್ವಿಚಾರಣೆ ನಡೆಸುತ್ತಿದ್ದೇನೆ. ವಿರೋಧ ಪಕ್ಷದವರು ಮಳೆ ವಿಚಾರದಲ್ಲೂ ರಾಜಕಾರಣ ಮಾಡುತ್ತಿರುವುದು ದುರ್ದೈವ. ಎಲ್ಲರೂ ಒಗ್ಗಟ್ಟಾಗಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾದ ಸಂದರ್ಭವಿದು. ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು. ಹೀಗಿದ್ದರೂ ರಾಜಕಾರಣ ಮಾಡುವುದು ಸಣ್ಣತನದ ಪ್ರವೃತ್ತಿ’ ಎಂದು ಟೀಕಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT