ಸೋಮವಾರ, ಅಕ್ಟೋಬರ್ 18, 2021
24 °C

ಕರಾವಳಿ, ಮಲೆನಾಡಿನಲ್ಲಿ ಬಿರುಸಿನ ಮಳೆ- ಬುಧವಾರವೂ ಮುಂದುವರಿಯುವ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರಾವಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಂಗಳವಾರ ಧಾರಾಕಾರ ಮಳೆ ಸುರಿದಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ಬಿರುಸುಗೊಂಡಿದೆ. ಬುಧವಾರವೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 3.4 ಸೆಂ.ಮೀ. ಮಳೆಯಾಗಿದೆ. ನೇತ್ರಾವತಿ ಹಾಗೂ ಮುಂಡಾಜೆ ಬಳಿ ಮೃತ್ಯುಂಜಯ ನದಿಯ ನೀರಿನ ಹರಿವು ಹೆಚ್ಚಾಗಿದೆ. 24 ಗಂಟೆಗಳಲ್ಲಿ ಜಿಲ್ಲೆಯ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ 4.8 ಸೆಂ.ಮೀ, ಮಂಗಳೂರು ತಾಲ್ಲೂಕಿನಲ್ಲಿ 4.2 ಸೆಂ.ಮೀ. ಮಳೆ ದಾಖಲಾಗಿದೆ.

ಉಡುಪಿ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗಿದ್ದು, ಕಾರ್ಕಳ ತಾಲ್ಲೂಕಿನ ಕಸಬಾದಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ. ಕಾಪು ತಾಲ್ಲೂಕಿನಲ್ಲಿ 3.8, ಉಡುಪಿ ತಾಲ್ಲೂಕಿನಲ್ಲಿ 2.1, ಬ್ರಹ್ಮಾವರ, ಬೈಂದೂರು ತಾಲ್ಲೂಕಿನಲ್ಲಿ ತಲಾ 2.7 ಸೆಂ.ಮೀ. ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ– ಬಾಳೆಹೊನ್ನೂರು ಮಾರ್ಗದಲ್ಲಿ ಸಂಚಾರಕ್ಕೆ ತೊಡಕಾಗಿದೆ. ಖಾಂಡ್ಯ ಹೋಬಳಿಯ ಬಿದಿರೆ ಗ್ರಾಮದಲ್ಲಿ ಮನೆಯೊಂದರ ಚಾವಣಿ ಕುಸಿದಿದೆ. ಕೊಪ್ಪ, ಎನ್‌.ಆರ್‌. ಪುರ, ಬೀರೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಜಿಲ್ಲೆಯಲ್ಲಿ ಕೊಟ್ಟಿಗೆಹಾರ, ಕಳಸ, ಮೂಡಿಗೆರೆ ಭಾಗದಲ್ಲಿ ಸಾಧಾರಣವಾಗಿ ಸುರಿದಿದೆ. ಹೊಸಕೆರೆ– 6, ಬಿಳ್ಳೂರು– 5.4, ಜಾವಳಿ– 4.8, ಕೆರೆಕಟ್ಟೆ– 3.8 ಸೆಂ.ಮೀ ಮಳೆಯಾಗಿದೆ.

ಮೈಸೂರು ಭಾಗದಲ್ಲೂ ಧಾರಾಕಾರ ಮಳೆ

(ಮೈಸೂರು ವರದಿ): ಕೊಡಗು, ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಕೊಡಗಿನ ಮಡಿಕೇರಿ, ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಮಂಗಳವಾರ ಮಧ್ಯಾಹ್ನದಿಂದ ನಿರಂತರ ಮಳೆಯಾಗುತ್ತಿದೆ.  

ಮಂಡ್ಯ ಜಿಲ್ಲೆ ನಾಗಮಂಗಲದ ಬೆಳ್ಳೂರು ಹೋಬಳಿಯ ನೆಲ್ಲಿಗೆರೆ, ಬೆಳ್ಳೂರು ಪಟ್ಟಣ, ನಾಗತೀಹಳ್ಳಿ, ಕದಬಹಳ್ಳಿ, ಬೆಳ್ಳೂರು ಕ್ರಾಸ್, ಬಿ.ಜಿ.ನಗರ ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗಿದೆ. ಬೆಳ್ಳೂರು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಕಂಡುಬಂತು.

ಹಾಸನ ಜಿಲ್ಲೆ ಅರಸೀಕೆರೆ, ಹಿರೀಸಾವೆ, ನುಗ್ಗೇಹಳ್ಳಿಯಲ್ಲಿ ಧಾರಾಕಾರ, ಹೆತ್ತೂರು, ಶ್ರವಣಬೆಳಗೊಳ, ಚನ್ನರಾಯಪಟ್ಟಣದಲ್ಲಿ ಸಾಧಾರಣ ಮಳೆಯಾಗಿದೆ. ಕೊಣನೂರು ಹೋಬಳಿ ಕಾಳೇನಹಳ್ಳಿಯಲ್ಲಿ ತೋಟಗಳಿಗೆ ನೀರು ನುಗ್ಗಿ ವೀಳ್ಯೆದೆಲೆ ಬಳ್ಳಿ, ಬಾಳೆ ಬೆಳೆಗೆ ಹಾನಿಯಾಗಿದೆ.

20ಕ್ಕೂ ಹೆಚ್ಚು ಮನೆಗಳಿಗೆ ಹಾನಿ

(ದಾವಣಗೆರೆ ವರದಿ): ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಉತ್ತಮ ಮಳೆ ಸುರಿದಿದೆ. ಗುಡುಗು, ಸಿಡಿಲು ಸಹಿತ ಬಿರುಸಿನ ಮಳೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಕೋಣಂದೂರು, ಆನವಟ್ಟಿಯಲ್ಲಿ ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸದುರ್ಗ ತಾಲ್ಲೂಕಿನ ಕೆಲವೆಡೆ ಮಳೆಯಾಗಿದೆ. ಪಾಪೇನಹಳ್ಳಿ ಬಳಿ ಸುಮಾರು ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಬ್ರಿಡ್ಜ್‌ ಕಂ ಬ್ಯಾರೇಜ್‌, ಮಳೆನೀರ ರಭಸಕ್ಕೆ ಕೊರಕಲು ಬಿದ್ದಿದೆ.

ಹಿರಿಯೂರು ತಾಲ್ಲೂಕಿನಲ್ಲಿ ರಾತ್ರಿ ಬಿರುಮಳೆಯಾಗಿದೆ. ಚಳ್ಳಕೆರೆ ನಗರದಲ್ಲಿ 8 ಮಾಳಿಗೆ ಮನೆಗಳು ಪೂರ್ಣ ಪ್ರಮಾಣದಲ್ಲಿ ಕುಸಿದುಬಿದ್ದಿವೆ. ತಾಲ್ಲೂಕಿನಾದ್ಯಂತ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ವಿದ್ಯುತ್ ತಗುಲಿ ಪೇಂಟರ್‌ ಸಾವು

ಬೆಂಗಳೂರು: ನಗರದಲ್ಲಿ ಸೋಮವಾರ ಇಡೀ ರಾತ್ರಿ ಮಳೆ ಸುರಿದಿದೆ. ಕೆ.ಪಿ.ಅಗ್ರಹಾರ ಬಡಾವಣೆಯಲ್ಲಿ ಮನೆಗೆ ನುಗ್ಗಿದ್ದ ನೀರು ತೆರವು ವೇಳೆ ವಿದ್ಯುತ್ ತಗುಲಿ, ಪೇಂಟರ್‌ ವೆಂಕಟೇಶ್ (56) ಮೃತಪಟ್ಟಿದ್ದಾರೆ.

‘ವೆಂಕಟೇಶ್ ಮತ್ತು ಟೈಲರಿಂಗ್ ಕೆಲಸ ಮಾಡುವ ಪತ್ನಿ ವಾಸವಿದ್ದರು. ಇಬ್ಬರೂ ಕೆಲಸಕ್ಕೆ ಹೋದರೆ, ರಾತ್ರಿಯೇ ಮರಳುತ್ತಿದ್ದರು. ಸೋಮವಾರ ರಾತ್ರಿ ಮಳೆ ನೀರು ಮನೆಗೂ ಆವರಿಸಿತ್ತು. ದಂಪತಿ ರಾತ್ರಿ ಮನೆಗೆ ಮರಳಿದಾಗ ವಿದ್ಯುತ್‌ ಇರಲಿಲ್ಲ. ಮೊಬೈಲ್ ದೀಪದ ಬೆಳಕಿನಲ್ಲಿ ನೀರು ತೆರವು ಮಾಡಲಾರಂಭಿಸಿದ್ದರು.’

‘ಒಂದು ಹಂತದಲ್ಲಿ ವಿದ್ಯುತ್ ಸಂಪರ್ಕ ಬಂದಿದ್ದು, ವಿದ್ಯುತ್ ದೀಪ ಆನ್‌ ಮಾಡಲು ವೆಂಕಟೇಶ್ ಅವರು ಸ್ವಿಚ್ ಬೋರ್ಡ್‌ನ ಬಟನ್‌ ಒತ್ತಿದಾಗ ಅವಘಡ ಸಂಭವಿಸಿದೆ. ಪತ್ನಿ, ಸಹಾಯಕ್ಕಾಗಿ ಚೀರಾಡಿದ್ದರು. ಸ್ಥಳೀಯರು ಬರುವಷ್ಟರಲ್ಲಿ ವೆಂಕಟೇಶ್ ಮೃತಪಟ್ಟಿದ್ದರು’ ಎಂದೂ ಪೊಲೀಸರು ತಿಳಿಸಿದರು.

ರಸ್ತೆಗೆ ಉರುಳಿದ ಬಂಡೆ

ತುಮಕೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು ಸೋಮವಾರ ರಾತ್ರಿಯೂ ಜೋರು ಮಳೆಯಾಗಿದ್ದು ದೇವರಾಯನದುರ್ಗದ ಬೆಟ್ಟದಲ್ಲಿ ರಸ್ತೆಗೆ ಎರಡು ಬೃಹತ್ ಬಂಡೆಗಳು ಉರುಳಿವೆ.

ಬೆಟ್ಟದ ಮೇಲಿನ ಚೆಕ್ ಪೋಸ್ಟ್ ಸಮೀಪ ಬಂಡೆಗಳು ಉರುಳಿದ್ದು, ದೇವರಾಯನದುರ್ಗದಲ್ಲಿರುವ ಯೋಗನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆ ಬಂದ್‌ ಆಗಿತ್ತು.

ಪ್ರವಾಸಿಗರು, ಭಕ್ತರಿಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ದೇವಾಲಯದ ಅರ್ಚಕರಿಗೆ ಮಾತ್ರ ಬೆಟ್ಟಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗಿತ್ತು.

ಕಾರ್ಯಾಚರಣೆ ಆರಂಭವಾಗಿದ್ದು, ಸಂಜೆ ವೇಳೆಗೆ ಬಹುತೇಕ ತೆರವು ಮಾಡಲಾಗಿತ್ತು. ಯಾವುದೇ ಅನಾಹುತ ಸಂಭವಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು