ಶನಿವಾರ, ಅಕ್ಟೋಬರ್ 16, 2021
29 °C
ಧಾರವಾಡ, ಬಾಗಲಕೋಟೆಯಲ್ಲಿ ಸಿಡಿಲು ಬಡಿದು ಇಬ್ಬರ ಸಾವು

ಹುಬ್ಬಳ್ಳಿ: ಗುಡುಗು ಸಹಿತ ರಭಸದ ಮಳೆ, ಮೈಸೂರಿನಲ್ಲಿ ಮನೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿನಗರ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಹಲವೆಡೆ ಸೋಮವಾರ ಗುಡುಗು ಸಹಿತ ರಭಸದ ಮಳೆಯಾಗಿದೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಸೈದಾಪುರ ಗ್ರಾಮದ ರೈತ ಸಂಗಪ್ಪ ವಾರದ (48) ಹಾಗೂ ಬಾಗಲಕೋಟೆ ಜಿಲ್ಲೆಯ ಕೆರೂರಿನ ಮುಷ್ಟಿಗೇರಿ ಗ್ರಾಮದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ಯುವಕ ಮಹೇಶ ದ್ಯಾಮಣ್ಣ ಜುಂಜನಗೌಡ್ರ (18) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಅಳ್ನಾವರ ತಾಲ್ಲೂಕಿನ ಕಂಬಾರಗಣವಿ ಗ್ರಾಮದ ಹೊರ ವಲಯದಲ್ಲಿ ಕೆಳ ಮಟ್ಟದಲ್ಲಿ ಕಟ್ಟಲಾದ ಕೀರು ಸೇತುವೆ ಸಂಪೂರ್ಣ ಜಲಾವೃತವಾಗಿ ರಸ್ತೆ ಸಂಚಾರ ಬಂದ್‌ ಆಗಿದೆ. ಅಣ್ಣಿಗೇರಿ ಪಟ್ಟಣದಲ್ಲಿ ನಿರಂತರ ಮಳೆಗೆ ಬಡಾವಣೆಗಳ ಮನೆಗೆ, ಪುರಸಭೆಯ ವಾಣಿಜ್ಯ ಮಳಿಗೆಯೊಳಗೆ ಚರಂಡಿ ನೀರು ನುಗ್ಗಿ ಪಡಿತರ ವಿತರಣಾ ಕೇಂದ್ರ, ಹೋಟೆಲ್‌, ಸ್ಟುಡಿಯೋಗಳಲ್ಲಿದ್ದ ಅನೇಕ ವಸ್ತುಗಳು ಹಾಳಾಗಿವೆ.

ಏಕಾಏಕಿ ಸುರಿದ ಭರ್ಜರಿ ಮಳೆಗೆ ಹುಬ್ಬಳ್ಳಿ ನಗರದ ಕೆಲವು ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿತ್ತು. ಉಣಕಲ್‌ನ ಶ್ರೀನಗರ ಕ್ರಾಸ್‌ನ ಹು–ಧಾ ಮುಖ್ಯ ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. 

ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಭಾರಿ ಗಾಳಿ–ಮಳೆಗೆ ಹಲವೆಡೆ ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಹಾಗೂ ಸೋಮವಾರ ಸುರಿದ ಮಳೆಗೆ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಆಗಾಗ ಗುಡುಗು ಸಹಿತ ಜೋರು ಮಳೆಯಾಯಿತು. ನಿಪ್ಪಾಣಿ, ಹುಕ್ಕೇರಿ, ಗೋಕಾಕ, ಸವದತ್ತಿ, ಹಿರೇಬಾಗೇವಾಡಿಯಲ್ಲಿ ಮಳೆಯಾಗಿದೆ.

ಮಲೆನಾಡಿನ ವಿವಿಧೆಡೆ ಮಳೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ವಿವಿಧೆಡೆ ರಭಸವಾಗಿ ಮಳೆ ಸುರಿದಿದೆ.

ಬಾಳೆಹೊನ್ನೂರು ಸಮೀಪ ಮಹಲ್‌ಗೋಡಿನಲ್ಲಿ ಹಳ್ಳ ತುಂಬಿ, ಸೇತುವೆಯ ಮೇಲೆ ನೀರು ಹರಿಯುತ್ತಿದೆ. ವಾಹನ ಸಂಚಾರಕ್ಕೆ ಭಾರೀ ಅಡಚಣೆಯಾಗಿದೆ. ಪ್ರಯಾಸಿಗರೊಬ್ಬರು ಸೇತುವೆ ದಾಟಲು ಯತ್ನಿಸಿ, ಕೆಲಹೊತ್ತು ನೀರಿನಲ್ಲಿ ಸಿಲುಕಿಕೊಂಡರು. ಸ್ಥಳೀಯರು ಅವರನ್ನು ರಕ್ಷಣೆ ಮಾಡಿದ್ದಾರೆ.

ಕಳಸ, ಕೊಟ್ಟಿಗೆಹಾರ, ಮೂಡಿಗೆರೆ, ಬಾಳೆಹೊನ್ನೂರು, ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಭದ್ರಾ ನದಿಯ ಹರಿವಿನಲ್ಲಿ ತುಸು ಹೆಚ್ಚಳವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ನಗರ ಸೇರಿದಂತೆ ಬೆಳ್ತಂಗಡಿ, ಉಜಿರೆಯಲ್ಲೂ ಉತ್ತಮ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ, ಹಿರಿಯೂರು, ಚಿಕ್ಕಜಾಜೂಜೂರು ಭಾಗಗಳಲ್ಲಿ ಮಳೆ ಸುರಿಯಿತು.

ಮೈಸೂರಲ್ಲಿ ಮನೆ ಕುಸಿತ

ಮೈಸೂರು: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಗರದ ಇಟ್ಟಿಗೆಗೂಡಿನಲ್ಲಿ ಸೋಮವಾರ ಸಂಜೆ ಎರಡು ಅಂತಸ್ತಿನ ಮನೆ ಕುಸಿದಿದೆ.

ತಾರಸಿಯ ಒಂದು ಪಾರ್ಶ್ವ ಕುಸಿಯುತ್ತಿದ್ದಂತೆ ಪಾಲಿಕೆಯ ನಿಯಂತ್ರಣ ಕಚೇರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ರಕ್ಷಣಾ ತಂಡ ಅಭಯ್ 1ರ ಸಿಬ್ಬಂದಿ, ಮನೆಯೊಳಗೆ ಸಿಲುಕಿದ್ದ ಪೂಜಾಮಣಿ ಹಾಗೂ ರಾಣಿಯಮ್ಮ ಅವರನ್ನು ರಕ್ಷಿಸಿ ಹೊರಕ್ಕೆ ಕರೆ ತಂದರು. ಜಿಲ್ಲೆಯ ಬೆಟ್ಟದಪುರ ಹೋಬಳಿಯಲ್ಲಿ ಜೋರು ಮಳೆಯಾಯಿತು.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ, ನಾಗಮಂಗಲದಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ. ಕೆ.ಆರ್‌.ಪೇಟೆಯ ಮುಖ್ಯ ರಸ್ತೆಯಲ್ಲಿ ರೈತರೊಬ್ಬರು ಆಯುಧಪೂಜೆಯ ಪ್ರಯುಕ್ತ ಮಾರಾಟ ಮಾಡಲು ತಂದಿದ್ದ ಬೂದುಗುಂಬಳ ಕಾಯಿ ಮಳೆಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು