ಭಾನುವಾರ, ಆಗಸ್ಟ್ 14, 2022
27 °C
ಮುಂದುವರಿದ ಮುಂಗಾರಿನ ಆರ್ಭಟ l ಹಲವೆಡೆ ಕಿರುಸೇತುವೆಗಳು ಮುಳುಗಿ ಸಂಪರ್ಕ ಕಡಿತ

ಉತ್ತರ ಕರ್ನಾಟಕದ ಹಲವೆಡೆ ಧಾರಾಕಾರ ಮಳೆ: ಜಲಾಶಯಗಳ ಒಳಹರಿವು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುರುವಾರ ಧಾರಾಕಾರ ಮಳೆಯಾಗಿದೆ. ಕರಾವಳಿಯಲ್ಲಿ ಮಳೆಯ ಅಬ್ಬರ ತುಸು ಕಡಿಮೆಯಾಗಿದೆ. ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ.

ರಾಜ್ಯದ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಭದ್ರಾ ಜಲಾಶಯದ ನೀರಿನ ಮಟ್ಟ ಒಂದೇ ದಿನ 1.40 ಟಿಎಂಸಿ ಅಡಿ, ಲಿಂಗನಮಕ್ಕಿ ಜಲಾಶಯದ ಮಟ್ಟ 1.65 ಟಿಎಂಸಿ ಅಡಿಗೆ ಏರಿಕೆಯಾಗಿದೆ.

ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸತತ ಮಳೆ ಆಗುತ್ತಿರುವುದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ ಹಾಗೂ ಹಿರಣ್ಯಕೇಶಿ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ ಆಗುತ್ತಿದೆ.

ಘಟಪ್ರಭಾ ನದಿಗೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ನಲ್ಲಿ ನಿರ್ಮಿಸಿರುವ ರಾಜಾ ಲಖಮಗೌಡ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, 17,114 ಕ್ಯುಸೆಕ್ ನೀರು ಸೇರುತ್ತಿದೆ. ಮಲಪ್ರಭಾ ನದಿಗೆ ಸವದತ್ತಿ ತಾಲ್ಲೂಕಿನ ನವಿಲು ತೀರ್ಥ ಬಳಿ ನಿರ್ಮಿಸಿರುವ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. 877 ಕ್ಯುಸೆಕ್ ಒಳಹರಿವು ಇತ್ತು.

ಉಡುಪಿ ಜಿಲ್ಲೆಯಲ್ಲಿ ಗಾಳಿಯ ಅಬ್ಬರ ಹೆಚ್ಚಾಗಿದ್ದು, ಸಮುದ್ರ ಪ್ರಕ್ಷುಬ್ಧಗೊಂಡಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ರಸ್ತೆ ಸಂಪರ್ಕ ಕಡಿತ (ಹುಬ್ಬಳ್ಳಿ ವರದಿ): ಧಾರವಾಡ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುರುವಾರ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಕಿರು ಸೇತುವೆಗಳು ಮುಳುಗಿವೆ, ರಸ್ತೆ ಸಂಪರ್ಕ ಕಡಿತಗೊಂಡಿವೆ.

ಕಾರವಾರ ಜಿಲ್ಲೆಯ ಮಲೆನಾಡು ತಾಲ್ಲೂಕುಗಳಲ್ಲಿ ಜೋರಾಗಿ ಮಳೆಯಾಯಿತು.  ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ  ಮುಂದುವರಿದಿದ್ದು 9 ಕಡೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹುಕ್ಕೇರಿ ತಾಲ್ಲೂಕಿನಲ್ಲಿ 5 ಬ್ರಿಜ್ ಕಂ ಬ್ಯಾರೇಜ್ ಮುಳುಗಡೆಯಾಗಿವೆ.

ನಿರಂತರ ಮಳೆ (ಶಿವಮೊಗ್ಗ ವರದಿ): ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ಉತ್ತಮ ಮಳೆಯಾಗಿದೆ. ತುಂಗಾ, ಭದ್ರಾ ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬರುತ್ತಿದೆ. ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜುವಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿ ಮೇಲೆ ತೆಂಗಿನ ಮರ ಬಿದ್ದು ಲಾರಿ ಜಖಂಗೊಂಡಿದೆ. ಹೊಸನಗರ ತಾಲ್ಲೂಕಿನ ಬಾಳೆಬರೆ ಜಲಪಾತ ಸೇರಿ ಸಣ್ಣಪುಟ್ಟ ಜಲಪಾತಗಳಲ್ಲಿ ನೀರು ಧುಮ್ಮಿಕ್ಕುತ್ತಿದೆ. ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ.  

ಕಡಿಮೆಯಾದ ಅಬ್ಬರ (ಮಂಗಳೂರು ವರದಿ): ಕರಾವಳಿಯಲ್ಲಿ ಮಳೆಯ ಅಬ್ಬರ ತುಸು ಕಡಿಮೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದೆ. ಹೇಮಾವತಿ, ಭದ್ರಾ, ತುಂಗಾ ನದಿಗಳಲ್ಲಿ ಹರಿವಿನ ಪ್ರಮಾಣ ಜಾಸ್ತಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣ ಹಾಗೂ 7 ಮನೆಗಳಿಗೆ ಭಾಗಶಃ ಹಾನಿಯಾಗಿದೆ.  ಹೆಬ್ರಿಯ ನಾಡ್ಪಾಲು ಗ್ರಾಮದಲ್ಲಿ  150 ಅಡಿಕೆ ಮರಗಳಿಗೆ ಹಾನಿಯಾಗಿದೆ.

ಜನಜೀವನ ಅಸ್ತವ್ಯಸ್ತ (ಮೈಸೂರು ವರದಿ): ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಾವೇರಿ ನದಿಯೂ ಸೇರಿದಂತೆ ಹಳ್ಳಕೊಳ್ಳಗಳಲ್ಲಿ ನೀರಿನಮಟ್ಟ ಏರಿಕೆಯಾಗಿದೆ. ಮೈಸೂರು, ಮಂಡ್ಯ ಜಿಲ್ಲೆಯ ಹಲವೆಡೆ ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗಿದೆ.

ವಿರಾಜಪೇಟೆಯ ಅರಸುನಗರ, ಮಲೆತಿರಿಕೆಬೆಟ್ಟ, ಅಯ್ಯಪ್ಪ ಬೆಟ್ಟ, ನೆಹರೂ ನಗರದಲ್ಲಿ ಅಪಾಯ ಸ್ಥಳದಲ್ಲಿ ನೆಲೆಸಿರುವ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೆಲವು ಕಡೆ ಮರ ಹಾಗೂ ಕಂಬಗಳು ಧರೆಗುರುಳಿವೆ. ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಣಗೇರಿ ಗ್ರಾಮದ ಅಂಗನವಾಡಿ ಕೇಂದ್ರದ ಶೀಟ್‌ಗಳು ಹಾರಿ ಹೋಗಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು