ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಮಳೆಯ ಆರ್ಭಟ: ಪ್ರವಾಹ ಭೀತಿ, ಶಾಲಾ ಕಟ್ಟಡ ಕುಸಿತ

ಜನಜೀವನ ಅಸ್ತವ್ಯಸ್ತ: ಮತ್ತೆ ಉಕ್ಕೇರಿದ ಗಂಗಾವಳಿ: ಅರಬೈಲ್‌ನಲ್ಲಿ ಗುಡ್ಡ ಕುಸಿತ
Last Updated 22 ಜುಲೈ 2021, 17:36 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುರುವಾರ ದಿನವಿಡೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ

ಬುಧವಾರ ಸಂಜೆ ಗಾಳಿ ಸಹಿತ ಸುರಿದ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಕುಂಬಾರವಾಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಾಗೂ ಮುಂಡಗೋಡ ತಾಲ್ಲೂಕಿನ ಹನುಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿದಿವೆ. ಧಾರವಾಡ ತಾಲ್ಲೂಕಿನ ಮುರಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿ ಗೋಡೆ ಕುಸಿದಿದೆ.

ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ ಮುಂದುವರಿದಿದ್ದು, ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಚಿಕ್ಕೋಡಿ ತಾಲ್ಲೂಕಿನ ನದಿ ಜಲಾನಯನ ಪ್ರದೇಶಗಳಲ್ಲಿ 24 ಗಂಟೆಗಳಲ್ಲಿ ಮಳೆಯ ಆರ್ಭಟ ಹೆಚ್ಚಿದೆ. ಕೃಷ್ಣಾ ಮತ್ತು ಉಪನದಿಗಳ ಹರಿವಿನಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದೆ. ರಾಜಾ‍ಪುರ ಬ್ಯಾರೇಜ್‌ನಿಂದ 58ಸಾವಿರ ಕ್ಯುಸೆಕ್ ಮತ್ತು ದೂಧ್‌ಗಂಗಾ ನದಿಯಿಂದ 19,768 ಕ್ಯುಸೆಕ್ ಸೇರಿ 77,768 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರುತ್ತಿದೆ.

ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ 6 ಕೆಳಮಟ್ಟದ ಕಿರು ಸೇತುವೆಗಳು ಜಲಾವೃತ ಸ್ಥಿತಿಯಲ್ಲಿಯೇ ಇವೆ. ಗುರುವಾರ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಕ್ಕೋಳ-ಸಿದ್ನಾಳ ಕಿರು ಸೇತುವೆ ಮುಳುಗಡೆಯಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದು, ಕೃಷ್ಣಾ ನದಿಗೆ ಬಂದು ಸೇರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ನದಿ ತೀರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನ ಕಂಬಾರಗಣವಿ ಕಿರು ಸೇತುವೆ ಮತ್ತೆ ಜಲಾವೃತಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನಲ್ಲಿ ಬುಧವಾರ ರಾತ್ರಿಯಿಂದ ಜೋರಾಗಿ ಮಳೆಯಾಗುತ್ತಿದೆ. ಪಾಂಡರಿ ಹಾಗೂ ಕಾನೇರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಕಾಳಿ ನದಿಯಲ್ಲಿ ಒಳಹರಿವು ಹೆಚ್ಚಾಗಿರುವ ಕಾರಣ ಕದ್ರಾ ಜಲಾಶಯ ಭರ್ತಿಯಾಗಿದೆ. ಎಂಟು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ 40 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು. ಅಂಕೋಲಾ ತಾಲ್ಲೂಕಿನ ಗುಳ್ಳಾಪುರ, ಶೇವ್ಕಾರ ಭಾಗದಲ್ಲಿ ಗಂಗಾವಳಿ ನದಿ ಅಬ್ಬರಿಸುತ್ತಿದ್ದು, ಸಮೀಪದ ತೋಟಗಳು ಜಲಾವೃತವಾಗಿವೆ. ಸಮೀಪದ ಸೇತುವೆಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಪ್ರವಾಹದ ಆತಂಕ ಎದುರಾಗಿದೆ. ಅಂಕೋಲಾ ತಾಲ್ಲೂಕಿನ ಸುಂಕಸಾಳದಲ್ಲಿ ರಾಷ್ಟ್ರೀಯ ಹೆದ್ದಾರಿ 63 ಜಲಾವೃತವಾಗಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ. ಯಲ್ಲಾಪುರ ತಾಲ್ಲೂಕಿನ ಅರಬೈಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಅಪಾರ ಪ್ರಮಾಣದಲ್ಲಿ ಗುಡ್ಡದ ಮಣ್ಣು
ಕುಸಿದಿದೆ. ಇದರಿಂದ ಯಲ್ಲಾಪುರ– ಅಂಕೋಲಾ ನಡುವೆ ಹೆದ್ದಾರಿ ಮೂಲಕ ಸಂಪರ್ಕ ಕಡಿತವಾಗಿದೆ. ಹೊನ್ನಾವರದಲ್ಲಿ ಗಾಳಿ, ಮಳೆಗೆ ಐದು ಮನೆಗಳಿಗೆ ಹಾನಿಯಾ ಗಿದೆ. ಗುಂಡಬಾಳ, ಬಡಗಣಿ ನದಿಗಳು, ಭಾಸ್ಕೇರಿ ಹಳ್ಳ ತುಂಬಿ ಹರಿಯುತ್ತಿದ್ದು, ದಂಡೆಗಳಲ್ಲಿ ಆತಂಕದ ಸ್ಥಿತಿಯಿದೆ.

ಕದ್ರಾ ಭರ್ತಿಯಾಗಿದೆ. ಎಂಟು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ 40 ಸಾವಿರ ಕ್ಯುಸೆಕ್‌ ನೀರನ್ನು ಬಿಡಲಾಗಿದೆ.

ಚಂದ್ರಂಪಳ್ಳಿ ಜಲಾಶಯ ಬಹುತೇಕ ಭರ್ತಿ: ಕಲಬುರ್ಗಿ ಜಿಲ್ಲೆಯಚಿಂಚೋಳಿ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು, ಚಂದ್ರಂಪಳ್ಳಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಭಾಲ್ಕಿ ತಾಲ್ಲೂಕಿನ ಹೊನ್ನಾಳಿ ಸೇತುವೆ ಮೇಲೆ ನೀರು
ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದ ಕಾರಣ, ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹೆಚ್ಚು ನೀರು ಹರಿದುಬರುತ್ತಿದೆ. 1.34 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಬಹುಪಾಲು ಕಡೆ ತೊಗರಿ, ಹೆಸರು, ಉದ್ದು, ಸೋಯಾ ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆ ಹಾನಿಯ ಆತಂಕ ಎದುರಾಗಿದೆ.

ಕಾಫಿನಾಡಿನಲ್ಲಿ ಧಾರಾಕಾರ ಮಳೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರುವಾರ ಮಳೆಯ ಅಬ್ಬರ ಹೆಚ್ಚಾಗಿತ್ತು. ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿದ್ದು, ಮನೆಗಳಿಗೆ ಹಾನಿಯಾಗಿದೆ.

ಅಬ್ಬುಗೂಡಿಗೆ ಬಳಿ ಕಿರು ಸೇತುವೆ ಕುಸಿದು, ಅಬ್ಬುಗೂಡಿಗೆ– ಕಲ್ಲುಗೋಡು ಸಂಪರ್ಕ ಕಡಿತಗೊಂಡಿದೆ. ಅಜ್ಜಂಪುರ ತಾಲ್ಲೂಕಿನ ಅತ್ತಿಘಟ್ಟೆನಲ್ಲಿ 10 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಮನೆ ಪೂರ್ಣ, ಮೂರು ಮನೆಗಳು ಭಾಗಶಃ ಹಾನಿಯಾಗಿವೆ. ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಉಚ್ಚಿಲ–ಬೆಟ್ಟಂಪಾಡಿ ರಸ್ತೆಗೆ ಹಾನಿಯಾಗಿದೆ. ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಗ್ರಾಮದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕೊಚ್ಚಿ ಹೋದ ಸೇತುವೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಕೊಂಡಜ್ಜಿ–ಕಕ್ಕರಗೊಳ್ಳ ಸಂಪರ್ಕ ಸೇತುವೆಯೇ ಕೊಚ್ಚಿ ಹೋಗಿದೆ.

ಶಿವಮೊಗ್ಗ ನಗರದಲ್ಲಿ ಬೆಳಿಗ್ಗೆಯಿಂದ ಬಿಡುವು ನೀಡದೆ ಮಳೆ ಸುರಿದಿದ್ದು, ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಾ
ದ್ಯಂತ ಸರಾಸರಿ 48.29 ಮಿ.ಮೀ ಮಳೆಯಾಗಿದೆ. ಹಿನ್ನೀರು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಜಲಾಶಯಗಳ ಒಳಹರಿವು ಹೆಚ್ಚಾಗಿದೆ.

ಹೆದ್ದಾರಿ ಕುಸಿತ: ಶಿರಾಡಿ ಘಾಟ್‌ ಬಂದ್

ಹಾಸನ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ ಬಳಿಯ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ ಉಂಟಾಗಿದೆ. ಹೀಗಾಗಿ, ಶಿರಾಡಿ ಘಾಟ್ ರಸ್ತೆಯನ್ನು ನಾಲ್ಕು ದಿನ ಬಂದ್ ಮಾಡಲಾಗಿದೆ.

ಲಘು ವಾಹನಗಳಿಗೆ ಬಿಸ್ಲೆ ಘಾಟ್‌ ಮತ್ತು ಭಾರಿವಾಹನಗಳನ್ನು
ತಾತ್ಕಾಲಿಕವಾಗಿ ಹಾನುಬಾಳು, ಮೂಡಿಗೆರೆ, ಚಾರ್ಮಾಡಿ ಘಾಟ್‌ ಹಾಗೂ ಮಡಿಕೇರಿ–ಪುತ್ತೂರುಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಸಂಚರಿಸಿದರೆ ರಸ್ತೆ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಕಾವೇರಿ ನದಿ ಮತ್ತೆ ಮೈದುಂಬಿ ಹರಿಯುತ್ತಿದೆ. ಹಾರಂಗಿ ಜಲಾಶಯದ ಒಳಹರಿವು ಏರಿಕೆಯಾಗಿದೆ. ಬಲಮುರಿಯ ಕಿರುಸೇತುವೆ ಮೇಲೆ ಕಾವೇರಿ ನದಿಯ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತವಾಗಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಹೇಮಾ ಎಂಬುವರ ಮನೆ ಚಾವಣಿ ಬುಧವಾರ ರಾತ್ರಿ ಕುಸಿದಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT