ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಆಲಿಕಲ್ಲು ಸಹಿತ ಭಾರಿ ಮಳೆ

ಮುಂಡಗೋಡ, ಭರಮಸಾಗರದಲ್ಲಿ ಸಿಡಿಲು ಬಡಿದು ಮನೆಗೆ ಹಾನಿ
Last Updated 28 ಮಾರ್ಚ್ 2021, 19:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಉತ್ತರ ಕನ್ನಡ, ಚಿತ್ರದುರ್ಗ, ಮಂಡ್ಯ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾನುವಾರ ಆಲಿಕಲ್ಲು, ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಭಾನುವಾರ ಗುಡುಗು, ಆಲಿಕಲ್ಲಿನೊಂದಿಗೆ ಬಿರುಸಿನ ಮಳೆಯಾಗಿದ್ದು, ವಿಜಯಪುರ ಜಿಲ್ಲೆಯ ಕೂಡ್ಲಗಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ.

ಮುಂಡಗೋಡದಲ್ಲಿ ಅರ್ಧ ಗಂಟೆ ಆಲಿಕಲ್ಲು ಮಳೆಯಾಗಿದೆ. ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿಯಾಗಿದೆ. ಯಲ್ಲಾಪುರ, ಹಳಿಯಾಳ, ಶಿರಸಿಯಲ್ಲಿ ಕೆಲ ಸಮಯ ಭಾರಿ ಮಳೆಯಾಗಿದೆ.

ಕರಾವಳಿ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿಯಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗಿದೆ. ಮಂಗಳೂರು ತಾಲ್ಲೂಕಿನ ಉಳ್ಳಾಲ, ಕೋಟೇಶ್ವರದಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಹಾಗೂ ಕೊಪ್ಪದಲ್ಲಿ ಸುಮಾರು ಅರ್ಧ ಗಂಟೆ ಮಳೆ ಸುರಿಯಿತು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಭರಮಸಾಗರ, ಚಿಕ್ಕಜಾಜೂರಿನಲ್ಲಿ ಗುಡುಗು ಮಳೆಯಾಗಿದೆ.ಸಿರಿಗೆರೆಯಲ್ಲಿಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಆಲಿಕಲ್ಲು ಮಳೆಯಿಂದ ಅಡಿಕೆ ಹೊಂಬಾಳೆ, ಮಾವಿನ ಹೂವು, ತರಕಾರಿ ಬೆಳೆಗಳಿಗೆ ಹಾನಿ
ಯಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಭರಮಸಾಗರದ ವಿನಾಯಕ ಚಿತ್ರಮಂದಿರದ ಬಳಿಯ ಅಲ್ಲಾಬಕ್ಷ್ ಎಂಬುವವರ ಮನೆಯ ಮೇಲಂತಸ್ತಿನ ಒಂದು ಭಾಗಕ್ಕೆ ಸಿಡಿಲು ಬಡಿದಿದೆ. ಕಟ್ಟಡದ ಸ್ವಲ್ಪ ಭಾಗ ಉದುರಿ ಬಿದ್ದಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕು, ಉಚ್ಚಂಗಿದುರ್ಗ, ತ್ಯಾವಣಿಗೆ, ಸಂತೇಬೆನ್ನೂರಿನಲ್ಲಿ ಗಾಳಿ ಜೋರಾಗಿತ್ತು. ಗುಡುಗು ಸಹಿತ ಹಗುರ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೆ ಗುಡುಗು ಸಹಿತ ಮಳೆ ಸುರಿಯಿತು. ಶಿವಮೊಗ್ಗ ಸೇರಿ ಶಿಕಾರಿಪುರ, ತೀರ್ಥಹಳ್ಳಿ, ರಿಪ್ಪನ್‌ಪೇಟ್, ಕೋಣಂದೂರು ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆ.

ಮಂಡ್ಯ ಜಿಲ್ಲೆಯ ಹಲವೆಡೆ ಭಾನುವಾರ ಮಧ್ಯಾಹ್ನ ಗುಡುಗು, ಗಾಳಿ ಸಹಿತ ಸುಮಾರು ಅರ್ಧ ತಾಸು ಭಾರಿ ಮಳೆ ಸುರಿಯಿತು. ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮ ಹಾಗೂ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ನಗರ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಸಂಜೆ 20 ನಿಮಿಷ ಗಾಳಿ ಸಹಿತ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT