ಭಾನುವಾರ, ಮೇ 22, 2022
23 °C

ಮೈಸೂರು ಭಾಗದಲ್ಲಿ ಧಾರಾಕಾರ ಮಳೆ; ಸಿಡಿಲು ಬಡಿದು ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆ ಸೇರಿದಂತೆ ಮಂಡ್ಯ, ಹಾಸನ, ಚಾಮರಾಜನಗರ, ಕೊಡಗಿನ ವಿವಿಧೆಡೆ ಬುಧವಾರ ಸಂಜೆ ಬಿರುಗಾಳಿ, ಗುಡುಗು–ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆ ಸುರಿಯಿತು. ಸಿಡಿಲು ಬಡಿದು ಮೂವರು ಮೃತಪಟ್ಟಿದ್ದು, ಎತ್ತು ಸಾವನ್ನಪ್ಪಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಸವನಪುರ ಗೇಟ್‌ ಬಳಿ ಬುಧವಾರ ಸಂಜೆ ಸಿಡಿಲು ಬಡಿದು ಅದೇ ಗ್ರಾಮದ ಉದಯ್‌ ಶಂಕರ್ (20) ಮತ್ತು ಸೋಸಲಗೆರೆ ಗ್ರಾಮದ ದರ್ಶನ್‌ (18) ಮೃತಪಟ್ಟರು. ರಕ್ಷಣೆ ಪಡೆಯಲು ಅವರು ಬಸ್‌ ತಂಗುದಾಣದಲ್ಲಿ ನಿಂತಿದ್ದರು.

ಹಳೇಬೀಡು ಸಮೀಪದ ಸಾಣೇನಹಳ್ಳಿಯ ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದ ಕಾಂತರಾಜು (54) ಸಿಡಿಲು ಬಡಿದು ಮೃತಪಟ್ಟರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಮಠದ ಹೊನ್ನಾಯಕನಹಳ್ಳಿಯ ಶಿವ ಲಿಂಗೇಗೌಡ ಅವರ, ಸುಮಾರು ₹ 60 ಸಾವಿರ ಮೌಲ್ಯದ ಎತ್ತು ಸಿಡಿಲು ಬಡಿದು ಮೃತಪಟ್ಟಿತು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪೂನಾಡಹಳ್ಳಿ ಗೇಟ್‌ ಹತ್ತಿರ ಬಿ.ಎಂ.ರಸ್ತೆಯಲ್ಲಿ ಬಿರುಗಾಳಿಗೆ ಮರವೊಂದು ತಂತಿ ಮೇಲೆ ಬಿದ್ದು, ವಿದ್ಯುತ್‌ ಕಂಬವೂ ನೆಲಕಚ್ಚಿತು. ಬೆಟ್ಟದಪುರ, ಹುಣಸೂರು, ತಿ.ನರಸೀಪುರ, ಬಿಳಿಕೆರೆ, ಧರ್ಮಾ‍ಪುರ, ಕೆ.ಆರ್.ನಗರ ಹಾಗೂ ಸಾಲಿಗ್ರಾಮದಲ್ಲಿ ಸಾಧಾರಣ ಮಳೆಯಾಯಿತು. ಚೆನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಯಲ್ಲಿ ಹತ್ತಾರು ಮನೆಗಳ ಹೆಂಚು, ಶೀಟ್‌ಗಳು ಹಾರಿ ಹೋದವು. ಹಾಸನ ನಗರದಲ್ಲಿ ಕೆಲವೇ ನಿಮಿಷಗಳಲ್ಲಿ ಚರಂಡಿಗಳು ಉಕ್ಕಿ ಹರಿದವು. ಹೊಳೆನರಸೀಪುರದಲ್ಲಿ 20 ನಿಮಿಷ ಮಳೆ ಸುರಿಯಿತು. ಅರಕಲಗೂಡು ಪಟ್ಟಣದಲ್ಲಿ ಮಳೆ ಯಾಯಿತು.

ಮಂಡ್ಯ ಜಿಲ್ಲೆಯ ಹಲವೆಡೆ ಇಳಿಜಾರಿನ ಪ್ರದೇಶಗಳ ರಸ್ತೆಗಳಿಗೆ ನೀರು ನುಗ್ಗಿ ಜನ ಓಡಾಡಲು ಆಗದೆ ಪರದಾಡಿದರು. ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ, ಮದ್ದೂರು, ಮಳವಳ್ಳಿ ತಾಲ್ಲೂಕಿನಲ್ಲೂ ಧಾರಾಕಾರ ಮಳೆ ಸುರಿಯಿತು.

ಚಾಮರಾಜನಗರ ಜಿಲ್ಲೆಯ ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಮಳೆಯಾಯಿತು. ಕೊಡಗು ಜಿಲ್ಲೆಯಲ್ಲೂ ಮಳೆಯಾಗಿದೆ.

ಆಲಿಕಲ್ಲು ಮಳೆ- ಉರುಳಿದ ಮರ, ಕಂಬ
ಬೆಂಗಳೂರು:
ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬುಧವಾರ ಸಂಜೆ ಸುರಿದ ಮುಂಗಾರುಪೂರ್ವ ಮಳೆ ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪನ್ನೆರೆಯಿತು. 

ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇದ್ದು ಸಂಜೆ ಜೋರಾದ ಗಾಳಿ ಮತ್ತು ಗುಡುಗು ಸಹಿತ ಮಳೆ ಸುರಿಯಿತು. ಬೆಂಗಳೂರು ಗ್ರಾಮಾಂತರ ಭಾಗದ ಕೆಲವು ಭಾಗಗಳ ಆಲಿಕಲ್ಲು ಮಳೆ ಸುರಿದಿದೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಮಳೆ, ಗಾಳಿಯ ರಭಸಕ್ಕೆ ಮರ ಮತ್ತು ವಿದ್ಯುತ್‌ ಕಂಬಗಳು ನೆಲಕಚ್ಚಿವೆ. ಕೆಲವು ಕಡೆ ತೆಂಗಿನ ಮರಗಳಿಗೆ ಸಿಡಿಲು ಬಡಿದು ಸುಟ್ಟು ಭಸ್ಮವಾಗಿದ್ದು, ವಿದ್ಯುತ್‌ ಟ್ರಾನ್ಸಫಾರ್ಮರ್‌ ಹಾನಿಗೀಡಾಗಿವೆ.

ಕರಾವಳಿಯಲ್ಲಿ ಮಳೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ತಾಲ್ಲೂಕಿನಲ್ಲಿ ಗುರುವಾರ ಗುಡುಗು ಸಹಿತ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಂಜೆ ಸಾಮಾನ್ಯ ಮಳೆಯಾಗಿದೆ.

ಬಂಟ್ವಾಳ ತಾಲ್ಲೂಕಿನ ಮಾಣಿ ಗ್ರಾಮದ ಶೀನ ಮೂಲ್ಯ ಎಂಬುವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಪರಿಕರ ಸುಟ್ಟು ಹೋಗಿದೆ. ಮಂಚಿ ಗ್ರಾಮದ ಕೇಪಳಗುರಿ ಜಯಶ್ರೀ ಮಂಜುನಾಥ ಆಚಾರ್ಯ ಎಂಬುವರ ಮನೆಯ ಗೋಡೆ ಮತ್ತು ಹೆಂಚು ಹಾನಿಯಾಗಿದೆ. ಕುಕ್ಕಾಜೆ ನಿವಾಸಿ ಆಯಿಷಾ ಎಂಬುವರ ಮನೆ ಹಾನಿಗೀಡಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ಪಿಲ್ಯದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿಗೆ ಆಹುತಿಯಾಗಿದೆ. ಸುಳ್ಯ ಪಂಜದ ಕೃಷ್ಣನಗರ ಎಂಬಲ್ಲಿ ಮರದ ಕೊಂಬೆ ವಿದ್ಯುತ್ ತಂತಿ ಮೇಲೆ ಬಿದ್ದು ಹಾನಿ ಸಂಭವಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು