ಸೋಮವಾರ, ಜನವರಿ 25, 2021
15 °C
₹25 ಸಾವಿರ ದಂಡ; ತನಿಖೆ ಮುಂದುವರಿಸಲು ಹೈಕೋರ್ಟ್ ನಿರ್ದೇಶನ

ಬಿಎಸ್‌ವೈಗೆ ಮತ್ತೊಂದು ಭೂಕಂಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಕ್ರಮ ಡಿನೋಟಿಫೈ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ದೂರು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಗಂಗೇನಹಳ್ಳಿಯ ಮಠದಹಳ್ಳಿ ಬಡಾವಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸ್ವಾಧೀನಪಡಿಸಿಕೊಂಡಿದ್ದ 1 ಎಕರೆ 11 ಗುಂಟೆ ಜಮೀನನ್ನು 2010ರಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಿದ್ದರು ಎಂಬುದು ಯಡಿಯೂರಪ್ಪ ವಿರುದ್ಧ ಇರುವ ಆರೋಪ.

1976–77ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯಲ್ಲಿ 1 ಎಕರೆ 11 ಗುಂಟೆಯನ್ನು ಡಿನೋಟಿಫೈ ಮಾಡುವಂತೆ 2007ರಲ್ಲಿ ರಾಜಶೇಖರಯ್ಯ ಎಂಬುವರು ಅರ್ಜಿ ಸಲ್ಲಿಸಿದ್ದರು. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಡಿನೋಟಿಫೈ ಪ್ರಸ್ತಾಪವಾಗಿದ್ದರೂ ಪ್ರಕ್ರಿಯೆ ‍ಪೂರ್ಣಗೊಂಡಿರಲಿಲ್ಲ. ಯಡಿಯೂರಪ್ಪ  ಮುಖ್ಯಮಂತ್ರಿ ಆದ ಕೂಡಲೇ ಡಿನೋಟಿಫಿಕೇಷನ್ ಆದೇಶ ಹೊರಡಿಸಿದರು. ನಂತರ ಆ ಭೂಮಿ ಎಚ್‌.ಡಿ. ಕುಮಾರಸ್ವಾಮಿ ಅವರ ಅತ್ತೆ ವಿಮಲಾ ಅವರಿಗೆ ವರ್ಗಾವಣೆ ಆಯಿತು. ಬಳಿಕ ಅವರ ಮಗ ಟಿ.ಎಸ್. ಚನ್ನಪ್ಪ ಅವರ ಹೆಸರಿಗೆ ವರ್ಗಾವಣೆ ಆಗಿದೆ.

ಈ ಡಿನೋಟಿಫೈ ಅಕ್ರಮ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ ಅವರು 2015ರಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ ರದ್ದುಪಡಿಸುವಂತೆ ಬಿ.ಎಸ್. ಯಡಿಯೂರಪ್ಪ ತಕರಾರು ಅರ್ಜಿಯನ್ನು 2017ರಲ್ಲಿ ಸಲ್ಲಿಸಿದ್ದರು. ಅರ್ಜಿ ವಜಾಗೊಳಿಸಿದ ಪೀಠ, ಯಡಿಯೂರಪ್ಪ ಅವರಿಗೆ ₹25 ಸಾವಿರ ದಂಡ ವಿಧಿಸಿದೆ. ಪ್ರಕರಣದ ತನಿಖೆ ಮುಂದುವರಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ.

ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರು ಕಲಬುರ್ಗಿ ಪೀಠದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿದರು.

‘ದೂರು ದಾಖಲಿಸಲು ಪೂರ್ವಾನುಮತಿ ಪಡೆದಿಲ್ಲ. ಹೀಗಾಗಿ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಯಡಿಯೂರಪ್ಪ ಕೋರಿದ್ದರು. ‘ದೂರು ದಾಖಲಿಸಲು ಪೂರ್ವಾನುಮತಿ ಅಗತ್ಯವಿಲ್ಲ’ ಎಂದು ಪೀಠ ತಿಳಿಸಿತು.

ಕಾಡುತ್ತಿರುವ ಅಕ್ರಮ ಡಿನೋಟಿಫೈ?

ಬೆಳ್ಳಂದೂರು ಹಾಗೂ ದೇವರಬೀಸನಹಳ್ಳಿಯಲ್ಲಿ ಐಟಿ ಕಾರಿಡಾರ್‌ಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಶಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಿದ ಆರೋಪದ ಸಂಬಂಧವೂ ಯಡಿಯೂರಪ್ಪ ವಿರುದ್ಧ  2015ರಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್‌ 2020 ಡಿ.22 ರಂದು ವಜಾಗೊಳಿಸಿತ್ತು. ಈಗ ಮಠದಹಳ್ಳಿ ಡಿನೋಟಿಫೈ ಪ್ರಕರಣದ ತನಿಖೆಯನ್ನೂ ಯಡಿಯೂರಪ್ಪ ಎದುರಿಸಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು