ಮಂಗಳವಾರ, ಮೇ 24, 2022
29 °C
ಎಸಿಬಿ ಸಲ್ಲಿಸುವ ದೋಷಾರೋಪ ಪಟ್ಟಿ ಲೋಕಾಯುಕ್ತಕ್ಕೂ ಲಭ್ಯ

ಲೋಕಾಯುಕ್ತ ವಿಚಾರಣೆಗೆ ಹೈಕೋರ್ಟ್ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸಲ್ಲಿಸುವ ದೋಷಾರೋಪ ಪಟ್ಟಿಗಳು ತಮಗೂ ಲಭ್ಯವಾಗುವಂತೆ  ನಿರ್ದೇಶನ ನೀಡಲು ಕೋರಿ ಲೋಕಾಯುಕ್ತ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್‌ ಸಮ್ಮತಿ ಸೂಚಿಸಿದೆ.

ಲೋಕಾಯುಕ್ತ ವಕೀಲರ ಮನವಿಗೆ ನ್ಯಾಯಮೂರ್ತಿ ಅರವಿಂದ್‌ಕುಮಾರ್ ನೇತೃತ್ವದ ವಿಭಾಗೀಯ ಪೀಠ ಭಾಗಶಃ ಅವಕಾಶ ನೀಡಿತು. ‘ಕಾನೂನಿನ ಪ್ರಕಾರ ಇರುವ ಅವಕಾಶದಂತೆ ದೋಷಾರೋಪ ಪಟ್ಟಿ ಆಧರಿಸಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಮುಂದುವರಿಯಬಹುದು. ದೋಷಾರೋಪ ಪಟ್ಟಿ ಪ್ರತಿಯನ್ನು ಲೋಕಾಯುಕ್ತಕ್ಕೆ ಎಸಿಬಿ ಒದಗಿಸಬೇಕು’ ಎಂದು ತಿಳಿಸಿತು. ‌

‘ಲೋಕಾಯುಕ್ತ ಕಾಯ್ದೆಯ ನಿಬಂಧನೆಗಳ ಪ್ರಕಾರ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಸ್ವಯಂ ಪ್ರೇರಿತ ತನಿಖೆ ನಡೆಸಲು ಅಧಿಕಾರ ಇದೆ. ಹೀಗಾಗಿ, ಎಸಿಬಿ ವಿವಿಧ ನ್ಯಾಯಾಲಯಗಳಿಗೆ ಸಲ್ಲಿಸುವ ದೋಷಾರೋಪ ಪಟ್ಟಿಗಳನ್ನು ಲೋಕಾಯುಕ್ತಕ್ಕೂ ವರ್ಗಾಯಿಸುವಂತೆ ನಿರ್ದೇಶನ ನೀಡಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

‘ಸರ್ಕಾರಿ ನೌಕರರ ವಿರುದ್ಧದ ಕ್ರಿಮಿನಲ್ ಪ್ರಕರಣ ಖುಲಾಸೆಯಾಗಿದ್ದರೂ, ಸೇವಾ ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮಗಳ  ಪ್ರಕ್ರಿಯೆ ಆರಂಭಿಸಲು ನಿರ್ಬಂಧವಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶ ಇದೆ. ಆದ್ದರಿಂದ ನ್ಯಾಯಾಲಯಗಳಿಗೆ ಸಲ್ಲಿಸುವ ಎಲ್ಲಾ ದೋಷಾರೋಪ ಪಟ್ಟಿಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ 2017ರಲ್ಲಿ ಎಸಿಬಿಗೆ ಪತ್ರ ಬರೆಯಲಾಗಿತ್ತು. ಎಸಿಬಿ ಆಗಿನ ಮುಖ್ಯಸ್ಥ ಎಂ.ಎನ್.ರೆಡ್ಡಿ ಅವರು ಸರ್ಕಾರದಿಂದ ಈ ರೀತಿಯ ಯಾವುದೇ ನಿರ್ದೇಶನ ಇಲ್ಲ ಎಂದು ಉತ್ತಿರಿಸಿದ್ದರು.’

‘ಎಸಿಬಿ ತೆಗೆದುಕೊಂಡು ನಿಲುವು ಇಲಾಖಾ ಕ್ರಮ ಮುಂದುವರಿಸಲು ಅಡಚಣೆಯಾಗಿದೆ. ಅಲ್ಲದೇ ಲೋಕಾಯುಕ್ತ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಅಡ್ಡಿಯಾಗಿದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. 2016ರಲ್ಲಿ ರಾಜ್ಯ ಸರ್ಕಾರ ರಚನೆ ಮಾಡಿರುವ ಎಸಿಬಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು