ಬೆಂಗಳೂರು: ಶಾಲಾ ಆವರಣದಲ್ಲಿ ಹಾದು ಹೋಗಿರುವ ಎಲ್ಲಾ ವಿದ್ಯುತ್ ಮಾರ್ಗಗಳನ್ನು ಬದಲಿಸುವಂತೆ ರಾಜ್ಯ ಸರ್ಕಾರ ಮತ್ತು ಕೆಪಿಟಿಸಿಎಲ್‌ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತುಮಕೂರು ಜಿಲ್ಲೆಯಲ್ಲಿ ಆ.15ರಂದು ಧ್ವಜ ಹಾರಿಸುವಾಗ ವಿದ್ಯುತ್ ತಗುಲಿ ಬಾಲಕ ಮೃತಪಟ್ಟ ಪ್ರಕರಣದ ಸ್ವಯಂ ಪ್ರೇರಿತ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಕೊಪ್ಪಳ ಜಿಲ್ಲೆಯ ಹಾಸ್ಟೆಲ್‌ನಲ್ಲಿ2019ರಲ್ಲಿ ಧ್ವಜ ಹಾರಿಸುವ ವೇಳೆ ಧ್ವಜ ಕಂಬದ ಮೂಲಕ ವಿದ್ಯುತ್ ಹಾದು ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಪೀಠ, 2021ರ ಆಗಸ್ಟ್ 15ರಂದು ತುಮಕೂರು ಜಿಲ್ಲೆಯ ಕರಿಕೆರೆ ಶಾಲೆಯಲ್ಲಿ ಧ್ವಜಾರೋಹಣ ವೇಳೆ ವಿದ್ಯುತ್ ಸ್ಪರ್ಶಿಸಿ 16 ವರ್ಷದ ಬಾಲಕ ಚಂದನ್ ಮೃತಪಟ್ಟ ಪ್ರಕರಣವನ್ನೂ ವಿಚಾರಣೆಗೆ ಕೈಗೆತ್ತಿಕೊಂಡಿದೆ.
‘ವಿದ್ಯಾರ್ಥಿಗಳೇ ಸ್ವಯಂ ಪ್ರೇರಣೆಯಿಂದ ಧ್ವಜಾರೋಹಣಕ್ಕೆ ಮುಂದಾಗಿದ್ದರು ಎಂದು ತುಮಕೂರು ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ. ಆದರೆ, ಇದನ್ನು ಒಪ್ಪಲಾಗದು. ಸಾಮಾನ್ಯವಾಗಿ ಶಿಕ್ಷಕರ ಸೂಚನೆಯಂತೆ ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಮುಂದಾಗುತ್ತಾರೆ. ಜಿಲ್ಲಾಧಿಕಾರಿ ವರದಿ ಗಮನಿಸಿದರೆ ಅವರು ಶಾಲಾ ಸಿಬ್ಬಂದಿಯ ಪರವಾಗಿ ನಿಂತು ಪ್ರಕರಣ ತಿರುಚಲು ಪ್ರಯತ್ನಿಸುತ್ತಿರುವಂತಿದೆ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
‘ಶಾಲಾ ಆವರಣದಲ್ಲಿ ವಿದ್ಯುತ್ ಮಾರ್ಗಗಳು ಹಾದು ಹೋಗಬಾರದು. ಒಂದು ವೇಳೆ ಈ ರೀತಿಯ ಮಾರ್ಗಗಳಿದ್ದರೆ, ಕೂಡಲೇ ಬದಲಾವಣೆ ಮಾಡಬೇಕು’ ಎಂದು ತಿಳಿಸಿದ ಪೀಠ, ಕೆಪಿಟಿಸಿಎಲ್‌ಗೆ ನೋಟಿಸ್ ನೀಡಲು ಆದೇಶಿಸಿತು.
‘ಮೃತ ಬಾಲಕ ಚಂದನ್ ಕುಟುಂಬಕ್ಕೆ ₹1 ಲಕ್ಷ ಮಾತ್ರ ಪರಿಹಾರ ನೀಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ನೀಡಿದ ಮಾದರಿಯಲ್ಲೇ ₹10 ಲಕ್ಷ ಪರಿಹಾರ ನೀಡಬೇಕು. ಗಾಯಗೊಂಡ ಬಾಲಕನಿಗೂ ಪರಿಹಾರ ನೀಡಬೇಕು’ ಎಂದು ಪೀಠ ನಿರ್ದೇಶನ ನೀಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.