ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೋಕ್ ಕುಮಾರ್‌ ವಿರುದ್ಧ ಹೂಡಿರುವ ಪ್ರಕರಣದಲ್ಲಿ ಫೈಟರ್ ರವಿಗೆ ಹೈಕೋರ್ಟ್ ನೋಟಿಸ್

₹ 1ಕೋಟಿ ಬೇಡಿಕೆ ಆರೋಪ: ಅಲೋಕ್‌ ಕುಮಾರ್‌ ಅರ್ಜಿ
Last Updated 20 ಮಾರ್ಚ್ 2023, 19:01 IST
ಅಕ್ಷರ ಗಾತ್ರ

ಬೆಂಗಳೂರು: ‘ಭ್ರಷ್ಟಾಚಾರ ಆರೋಪದಡಿ ನನ್ನ ವಿರುದ್ಧ ಬಿ.ಎಂ‌‌.ಮಲ್ಲಿಕಾರ್ಜುನ ಅಲಿಯಾಸ್‌ ರವಿ ಯಾನೆ ಫೈಟರ್‌ ರವಿ ಹೂಡಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕು’ ಎಂದು ಕೋರಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಫೈಟರ್‌ ರವಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಅಲೋಕ್‌ ಕುಮಾರ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಲೋಕ್‌ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್‌ ಜೆ.ಚೌಟ, ‘ಅರ್ಜಿದಾರರ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ. ತನಿಖಾಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ಬಿ ರಿಪೋರ್ಟ್ ಎಂದು ನಮೂದಾಗಿದೆ. ಆದರೆ, ವಿಶೇಷ ನ್ಯಾಯಾಲಯವು ಕೇವಲ ಫಿರ್ಯಾದುದಾರನ ದೂರು ಮತ್ತು ಪ್ರತಿಭಟನಾ ಅರ್ಜಿಯನ್ನು ಆಧರಿಸಿ ಸಂಜ್ಞೇಯ ಅಪರಾಧದಡಿ ವಿಚಾರಣೆಗೆ ಮುಂದಾಗಿದೆ. ಆದ್ದರಿಂದ ಪ್ರಕರಣವನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿ ಬಿ.ಎಂ‌‌.ಮಲ್ಲಿಕಾರ್ಜುನ ಅಲಿಯಾಸ್‌ ರವಿ ಯಾನೆ ಫೈಟರ್‌ ರವಿ (44) ಬಿ‌ನ್ ಎನ್‌. ಮಲ್ಲಯ್ಯಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ. ಅಲೋಕ್‌ ಕುಮಾರ್ ಪರ ವಕೀಲ ಎಸ್.ಸುನಿಲ್‌ ಕುಮಾರ್‌ ವಕಾಲತ್ತು ವಹಿಸಿದ್ದಾರೆ.

ಪ್ರಕರಣವೇನು?: ‘ಫೈಟರ್‌ ರವಿ ವಿರುದ್ಧ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆ ವ್ಯಾಪ್ತಿ‌ಯಲ್ಲಿ 2014ರಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಆಗಿನ ಉತ್ತರ ವಲಯದ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ₹ 1 ಕೋಟಿ ಲಂಚಕ್ಕೆ ಬೇಡಿಕೆ ಇರಿಸಿದ್ದರು’ ಎಂಬುದು ಆರೋಪ.

ಈ ಕುರಿತಂತೆ ರವಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆ– ಕಲಂ 7,13 (ಡಿ) ಮತ್ತು 13 (2)ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ತನಿಖೆಯ ನಂತರ ನ್ಯಾಯಾಲಯಕ್ಕೆ
‘ಬಿ’ ರಿಪೋರ್ಟ್ ಸಲ್ಲಿಸಲಾಗಿತ್ತು. ಆದರೆ, ಸಿಟಿ ಸಿವಿಲ್‌ ಕೋರ್ಟ್‌ನ ಲೋಕಾಯುಕ್ತ ವಿಶೇಷ ನ್ಯಾಯಾಲಯ ’ಬಿ’ ರಿಪೋರ್ಟ್‌ ಅನ್ನು ತಿರಸ್ಕರಿಸಿತ್ತು.

ಅಂತೆಯೇ; ಅಲೋಕ್ ಕುಮಾರ್, ಎಸಿಪಿ ಧನೇಶ್ ರಾವ್ ಮತ್ತಿತರರ ವಿರುದ್ಧದ ಆರೋಪಗಳನ್ನು ಸಂಜ್ಞೇಯ ಅಪರಾಧ ಎಂದು ತೀರ್ಮಾನಿಸಿ ಫೈಟರ್ ರವಿಯ ಸ್ವಯಂ ಹೇಳಿಕೆ ದಾಖಲಿಸುವ ಕ್ರಮಕ್ಕೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಅಲೋಕ್
ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT