ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ರೇವಣ್ಣಗೆ ಹೈಕೋರ್ಟ್‌ ಎಚ್ಚರಿಕೆ

Last Updated 19 ಅಕ್ಟೋಬರ್ 2022, 21:28 IST
ಅಕ್ಷರ ಗಾತ್ರ

ಬೆಂಗಳೂರು: ವಿಚಾರಣೆ ವೇಳೆ ಅನುಮತಿ ಇಲ್ಲದೆ, ಶಿಷ್ಟಾಚಾರ ಉಲ್ಲಂಘಿಸಿ ವಕೀಲರ ಜೊತೆ ಔಪಚಾರಿಕವಾಗಿ ಮಾತನಾಡಲು ಮುಂದಾದ‌ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ‘ನಿಮ್ಮ‌ ಮಿತಿಯನ್ನು ಅರ್ಥ ಮಾಡಿಕೊಳ್ಳಿ. ಇದು ಕೋರ್ಟ್. ಹೊರಗೆ ಮಾತನಾಡಿದಂತೆ ಇಲ್ಲಿ ಮಾತನಾಡಲು ಹೋಗಬೇಡಿ’ ಎಂದು ಎಚ್ಚರಿಸಿತು.

‘ಪ್ರಜ್ವಲ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು‘ ಎಂದು ಕೋರಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡ ಅಭ್ಯರ್ಥಿ ಎ.ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕಟಕಟೆಯಲ್ಲಿ ಹಾಕಲಾಗಿದ್ದ ಕುರ್ಚಿಯಲ್ಲಿ ಕುಳಿತು ವಕೀಲ ಕೇಶವ ರೆಡ್ಡಿ ಅವರು ಕೇಳಿದ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರಿಸಿದ ಪ್ರಜ್ವಲ್‌ ರೇವಣ್ಣ, ನಿಖರ ಉತ್ತರ ನೀಡಿ ಸುಮ್ಮನಾಗುವ ಬದಲಿಗೆ ಹೆಚ್ಚಿನ ವಿವರಣೆ ನೀಡಲು ಮುಂದಾಗುತ್ತಿದ್ದು ದನ್ನು ಮತ್ತು ವಿಚಾರಣೆ ಮುಗಿದ ನಂತರ ವಕೀಲರ ಜೊತೆ ಲೋಕಾಭಿರಾಮ ಸ್ವರೂಪದಲ್ಲಿ ಮಾತನಾಡಲು ಮುಂದಾದುದಕ್ಕೆ ಗರಂ ಆದ ನ್ಯಾಯಮೂರ್ತಿಗಳು, ಕೋರ್ಟ್‌ನಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಟು ಮಾತುಗಳಲ್ಲೇ ತಿಳಿಸಿಕೊಟ್ಟರು.

ಮುಖ್ಯ ವಿಚಾರಣೆ: ‘ಚುನಾವಣೆಯಲ್ಲಿ ನಿಮ್ಮ ಪರ ಪ್ರಚಾರ ಮಾಡಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್‌ನಲ್ಲಿ ಕಡೂರಿಗೆ ಬಂದಿದ್ದು ನಿಜವೇ, ಈ ಪ್ರಯಾಣದ ಖರ್ಚು ವೆಚ್ಚವನ್ನು ನೀವು ಆಯೋಗದ ಮುಂದೆ ವಿವರಿಸಿದ್ದೀರಾ’ ಎಂಬ ಪ್ರಶ್ನೆಗೆ, ‘ಹೌದು, ಅವರು ಹೆಲಿಕಾಪ್ಟರ್‌ನಲ್ಲಿ ಬಂದದ್ದು ನಿಜ. ಅವರಿಬ್ಬರೂ ಸ್ಟಾರ್ ಕ್ಯಾಂಪೇನರ್‌. ಆಯೋಗದ ನಿಯಮಗಳ ಪ್ರಕಾರ ಸ್ಟಾರ್ ಕ್ಯಾಂಪೇನರ್‌ ಅವರ ಖರ್ಚು ವೆಚ್ಚಗಳನ್ನು ನಮೂದು ಮಾಡ ಬೇಕಾಗಿಲ್ಲ’ ಎಂದು ಉತ್ತರಿಸಿದರು.

‘ಲಕ್ಸುರಿ ಕಾರುಗಳು, ಆಟೊ ರಿಕ್ಷಾ ಗಳು ಹಾಗೂ ಇತರೆ ವಾಹನಗಳಲ್ಲಿ ಜನರನ್ನು ಕಟ್ಟಿಕೊಂಡು ಭಾರಿ ಮೊತ್ತದ ಹಣ ವ್ಯಯಿಸಿ ಭರ್ಜರಿ ಪ್ರಚಾರ ನಡೆಸಿದ್ದೀರಿ. ಈ ಪ್ರಚಾರ ಕಾರ್ಯಗಳ ಖರ್ಚು ವೆಚ್ಚವನ್ನು ತೋರಿಸಿಲ್ಲ ಎಂದು ಅರ್ಜಿದಾರರು ಆಪಾದಿಸಿದ್ದಾರೆ. ಇದು ನಿಜವೇ’ ಎಂಬ ಪ್ರಶ್ನೆಗೆ, ‘ಇಲ್ಲಾ, ಇದು ಸುಳ್ಳು. ನಾನು ಈ ಕುರಿತ ಖರ್ಚು ವೆಚ್ಚಗಳನ್ನೆಲ್ಲಾ ಆಯೋಗಕ್ಕೆ ವಿವರಿಸಿದ್ದೇನೆ. ಅಂತೆಯೇ, ಆಯೋಗವು ನಾನು ನೀಡಿದ ವಿವರಣೆಯನ್ನು ಒಪ್ಪಿಕೊಂಡಿದೆ’ ಎಂದರು.

‘ಟಿವಿ ಚಾನೆಲ್, ಮುದ್ರಣ ಮಾಧ್ಯಮಗಳಲ್ಲಿ ನಿಮ್ಮ ಪ್ರಚಾರದ ಜಾಹೀರಾತುಗಳನ್ನು ಪ್ರಕಟಿಸಿದ್ದೀರಿ. ಇದರ ಖರ್ಚು ವೆಚ್ಚ ತೋರಿಸಿಲ್ಲ ಎಂದು ಆಪಾದಿಸಲಾಗಿದೆ ನಿಜವೇ’ ಎಂಬ ಪ್ರಶ್ನೆಗೆ, ‘ಜಾಹೀರಾತು ನೀಡುವಂತೆ ಯಾರಿಗೂ ಮೌಖಿಕವಾಗಿ ಅಥವಾ ಲಿಖಿತವಾಗಿ ಅಧಿಕಾರ ಕೊಟ್ಟಿರಲಿಲ್ಲ’ ಎಂದರು.

‘ನೀವು ಕಾನೂನು ಬಾಹಿರವಾಗಿ ಮತಪಡೆದು ಆಯ್ಕೆಯಾಗಿದ್ದೀರಿ. ಆದ್ದರಿಂದ, ನಿಮ್ಮ ಗೆಲುವನ್ನು ಅನೂರ್ಜಿತಗೊಳಿಸಿ ನನ್ನನ್ನೇ ಗೆದ್ದ ಅಭ್ಯರ್ಥಿ ಎಂದು ಘೋಷಿಸುವಂತೆ ಅರ್ಜಿದಾರರು ಕೋರಿದ್ದಾರೆ. ಇದಕ್ಕೆ ಏನನ್ನುತ್ತೀರಿ’ ಎಂಬ ಪ್ರಶ್ನೆಗೆ, ‘ನಾನು 1.45 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇನೆ. ಆಯೋಗವು ನನಗೆ ಗೆದ್ದ ಅಭ್ಯರ್ಥಿ ಎಂದು ಪ್ರಮಾಣ ಪತ್ರ ನೀಡಿದೆ’ ಎಂದರು.

‘ಈ ಅರ್ಜಿಯಲ್ಲಿ ನಿಮ್ಮ ಮನವಿ ಏನು’ ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಲು ಪ್ರಜ್ವಲ್‌ ರೇವಣ್ಣ ತಡಬಡಾಯಿಸಿದರು. ನಂತರ ಅವರ ಹೇಳಿಕೆ ದಾಖಲಿಸಿಕೊಂಡು, ಪಾಟಿ ಸವಾಲಿಗೆ ತಯಾರಾಗುವಂತೆ ತಿಳಿಸಲಾಯಿತು. ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಲಾಗಿದೆ.

ಪ್ರಕರಣದ ಹಿನ್ನೆಲೆ: ’2019ರ ಲೋಕ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಚುನಾವಣಾ ಅಕ್ರಮ ಎಸಗಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿಯ ಕುರಿತು ನಿಖರ ಮಾಹಿತಿ ನೀಡಿಲ್ಲ. ಖರ್ಚು–ವೆಚ್ಚಗಳನ್ನು ನ್ಯಾಯೋ ಚಿತವಾಗಿ ಸಲ್ಲಿಸಿಲ್ಲ. ಆದ್ದರಿಂದ, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ನನ್ನನ್ನೇ ಗೆದ್ದ ಅಭ್ಯರ್ಥಿ ಎಂದು ಘೋಷಿಸಬೇಕು’ ಎಂದು ಅರ್ಜಿದಾರರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT