ಮಂಗಳವಾರ, ಸೆಪ್ಟೆಂಬರ್ 21, 2021
21 °C
ರಾಜ್ಯ ವೃತ್ತಿಶಿಕ್ಷಣ ಪರಿಷತ್ ಅನುಮೋದನೆ

ಐಟಿಐಗೆ 6 ಹೊಸ ಕೋರ್ಸ್‌ ಸೇರ್ಪಡೆ: ಪ್ರಸಕ್ತ ವರ್ಷವೇ ಪ್ರವೇಶಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟಾಟಾ ಕಂಪನಿಯ ಸಹಯೋಗದಲ್ಲಿ ರಾಜ್ಯದ 150 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಉನ್ನತೀಕರಿಸಲಾಗುತ್ತಿದ್ದು, ಈ ಕಾರ್ಯಕ್ರಮದ ಅಡಿಯಲ್ಲಿ ಐಟಿಐಗೆ 6 ಹೊಸ ಕೋರ್ಸ್‌ಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ರಾಜ್ಯ ವೃತ್ತಿಶಿಕ್ಷಣ ಪರಿಷತ್ (ಎಸ್.ವಿ.ಸಿ.ಟಿ.) ಅನುಮೋದನೆ ನೀಡಿದೆ.

ಉನ್ನತ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಗಳವಾರ ಈ ನಿರ್ಧಾರ ಕೈಗೊಳ್ಳಲಾಗಿದೆ.

‘ಇದು 150 ಐಟಿಐಗಳಿಗೂ ಅನ್ವಯವಾಗಲಿದ್ದು, ಪ್ರಸಕ್ತ ಸಾಲಿನಿಂದಲೇ ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.  

‘ಹೊಸ ಕೋರ್ಸ್‌ಗಳಿಗೆ ರಾಷ್ಟ್ರೀಯ ವೃತ್ತಿಶಿಕ್ಷಣ ತರಬೇತಿ ಪರಿಷತ್ (ಎನ್.ಸಿ.ವಿ.ಇ.ಟಿ.) ಮಾನ್ಯತೆ ಸಿಗಬೇಕಿದೆ. ಇವುಗಳ ಪಠ್ಯಕ್ರಮಕ್ಕೆ ನವದೆಹಲಿಯ ತರಬೇತಿ ಮಹಾನಿರ್ದೇಶನಾಲಯದಿಂದ (ಡಿ.ಜಿ.ಟಿ.) ಅನುಮೋದನೆ ಪಡೆಯಬೇಕಿದೆ.  ಪಠ್ಯಕ್ರಮವನ್ನು ಈಗಾಗಲೇ ಡಿ.ಜಿ.ಟಿ.ಗೆ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಎನ್.ಸಿ.ವಿ.ಇ.ಟಿ.ಯಿಂದ ಮಾನ್ಯತೆ ಪಡೆಯುವ ಷರತ್ತಿಗೆ ಒಳಪಟ್ಟು ಈ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದೂ ಹೇಳಿದ್ದಾರೆ. 

‘23 ಅಲ್ಪಾವಧಿ (3 ತಿಂಗಳು) ಸರ್ಟಿಫೈಡ್‌ ಕೋರ್ಸ್‌ಗಳ ಆರಂಭಕ್ಕೂ ಎಸ್.ವಿ.ಸಿ.ಟಿ.ಯು ಅನುಮೋದನೆ ನೀಡಿದೆ’ ಎಂದು ತಿಳಿಸಿದ್ದಾರೆ.

ಕೌಶಲಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತ ಕೆ.ಹರೀಶ್ ಕುಮಾರ್ ಇದ್ದರು.

ಯಾವ್ಯಾವ ಕೋರ್ಸ್‌ಗಳ ಸೇರ್ಪಡೆ: ಕೋರ್ಸ್‌ ಅವಧಿ
ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ - 2 ವರ್ಷ
ಬೇಸಿಕ್ಸ್ ಆಫ್ ಡಿಸೈನ್‌ ಆ್ಯಂಡ್‌ ವರ್ಚುವಲ್‌ ವೆರಿಫಿಕೇಷನ್ - 2 ವರ್ಷ
ಅಡ್ವಾನ್ಸ್ಡ್ ಮ್ಯಾನ್ಯುಫ್ಯಾಕ್ಚರಿಂಗ್‌ - 1 ವರ್ಷ
ಆರ್ಟಿಸಾನ್ ಯೂಸಿಂಗ್ ಅಡ್ವಾನ್ಸ್ಡ್ ಟೂಲ್ಸ್ - 1 ವರ್ಷ
ಇಂಡಸ್ಟ್ರಿಯಲ್ ರೊಬೊಟಿಕ್ಸ್ ಆ್ಯಂಡ್‌ ಡಿಜಿಟಲ್ ಮ್ಯಾನ್ಯುಫ್ಯಾಕ್ಚರ್‌ - 1 ವರ್ಷ
ಮ್ಯಾನ್ಯುಫ್ಯಾಕ್ಚರಿಂಗ್‌ ಪ್ರೊಸೆಸ್ ಕಂಟ್ರೋಲ್ ಆಟೋಮೇಷನ್ - 1 ವರ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು