ಬುಧವಾರ, ಜೂನ್ 29, 2022
27 °C

ಗೃಹ ಸಚಿವರಿಂದ ಬಿಜೆಪಿ ಪ್ರಭಾವಿಗಳ ರಕ್ಷಣೆ: ರಾಮಲಿಂಗಾ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದಲ್ಲಿ ಬಿಜೆಪಿಯ ಪ್ರಭಾವಿ ನಾಯಕರು ಶಾಮೀಲಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರೆಲ್ಲರನ್ನೂ ರಕ್ಷಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಜತೆ ಆ ಪಕ್ಷದ ಪ್ರಭಾವಿ ನಾಯಕರೂ ಶಾಮೀಲಾಗಿರುವುದರಿಂದ ಪ್ರಮುಖ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ದಿವ್ಯಾ ಅವರನ್ನು ಬಂಧಿಸಲಾಗದ ಪೊಲೀಸರು ಇನ್ನೂ ದೊಡ್ಡವರನ್ನು ಹಿಡಿದು ತರುತ್ತಾರೆಯೆ ಎಂದು ಪ್ರಶ್ನಿಸಿದರು.

ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರಕ್ಕೆ ಅನುಮತಿ ನೀಡಿದವರು ಯಾರು ಎಂಬುದು ಬಹಿರಂಗವಾಗಬೇಕು. ಪರೀಕ್ಷಾ ಕೇಂದ್ರ ತೆರೆಯುವಂತೆ ಅಲ್ಲಿನ ಸಂಸದರು ಶಿಫಾರಸು ಪತ್ರ ನೀಡಿದ್ದರು ಎಂಬ ಮಾಹಿತಿ ಇದೆ. ಅದು ನಿಜವೇ ಎಂಬುದೂ ಗೊತ್ತಾಗಬೇಕು. ಈ ವಿಚಾರಗಳ ಕುರಿತು ಗೃಹ ಸಚಿವರು ಸ್ಪಷ್ಟವಾದ ಮಾಹಿತಿ ನೀಡಬೇಕಿತ್ತು. ಆದರೆ, ಈಗ ಅವರ ಪಾತ್ರದ ಬಗ್ಗೆಯೇ ಅನುಮಾನ ಮೂಡುತ್ತಿದೆ ಎಂದರು.

ಅಕ್ರಮ ನಡೆದಿರುವುದು ಪತ್ತೆಯಾದ ಬಳಿಕವೂ ಪೊಲೀಸ್‌ ಇಲಾಖೆಯ ನೇಮಕಾತಿ ಮತ್ತು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನು ಬದಲಾವಣೆ ಮಾಡಿಲ್ಲ. ತಕ್ಷಣವೇ ಎಡಿಜಿಪಿ ವಿರುದ್ಧ ಕ್ರಮ ಜರುಗಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಬೇಕು ಎಂದು ರಾಮಲಿಂಗಾ ರೆಡ್ಡಿ ಆಗ್ರಹಿಸಿದರು.

ಚವ್ಹಾಣ ವಿಚಾರಣೆ ಏಕಿಲ್ಲ?: ‘ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮೊದಲು ಪತ್ರ ಬರೆದವರು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ. ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ನೋಟಿಸ್‌ ನೀಡಿರುವ ಸಿಐಡಿ ಅಧಿಕಾರಿಗಳು, ಚವ್ಹಾಣ್‌ ಅವರ ವಿಚಾರಣೆಯನ್ನು ಏಕೆ ನಡೆಸಿಲ್ಲ’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು