ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಗಲಭೆ: ವಾಟ್ಸ್‌ಆ್ಯ‌ಪ್‌ ಸ್ಟೇಟಸ್‌ನಲ್ಲಿ ಏನಿತ್ತು?

Last Updated 18 ಏಪ್ರಿಲ್ 2022, 2:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಯುವಕನೊಬ್ಬ ವಾಟ್ಸ್ಆ್ಯಪ್‌ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ವಿವಾದಾತ್ಮಕ ವಿಡಿಯೊದಿಂದಾಗಿ ಶನಿವಾರ ರಾತ್ರಿ ಬಿಗುವಿನ ಸ್ಥಿತಿ ತಲೆದೋರಿದ್ದ ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಗಲಭೆಯು ಇಡೀ ನಗರವನ್ನು ಉದ್ವಿಗ್ನ ಗೊಳಿಸಿದೆ. ಮೇಲ್ನೋಟಕ್ಕೆ ಪರಿಸ್ಥಿತಿ ತಣ್ಣಗಾದಂತೆ ಕಂಡರೂ ಬಿಗುವಿನ ಸ್ಥಿತಿಯೇ ಇದೆ.

ವಾಟ್ಸ್‌ಆ್ಯ‌ಪ್‌ ಸ್ಟೇಟಸ್‌ನಲ್ಲಿ ಏನಿತ್ತು?
ಮಸೀದಿ ಮೇಲೆ ಭಗವಾಧ್ವಜ ಹಾರಿಸುತ್ತಿರುವಂತೆ ಕಾಣುವ ಎಡಿಟ್ ಮಾಡಿದ ಅನಿಮೇಟೆಡ್‌ ವಿಡಿಯೊವನ್ನು ಆನಂದನಗರದ ದ್ವಿತೀಯ ಪಿಯು ವಿದ್ಯಾರ್ಥಿ ಅಭಿಷೇಕ ಹಿರೇಮಠ ತನ್ನ ವಾಟ್ಸ್‌ಆ್ಯ‌ಪ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ.

‘ಹಿಂದೂ ಸಾಮ್ರಾಟ್‌, ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆವು, ಜೈ ಶ್ರೀರಾಮ್’ ಎಂಬ ಬರಹ ಅದರಲ್ಲಿತ್ತು. ಇದು ವೈರಲ್ ಆಗಿತ್ತು.ಈ ಬಗ್ಗೆ ತಬೀಬ್ ಲ್ಯಾಂಡ್‌ನ ಮೊಹಮ್ಮದ್‌ ಅಜರ್‌ ಬೇಲೇರಿ ಶನಿವಾರ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿತ್ತು. ಗಲಭೆ ವಿಷಯ ತಿಳಿಯುತ್ತಿದ್ದಂತೆ, ಆರೋಪಿಯ ಕುಟುಂಬದವರು, ಯಾರ ಸಂಪರ್ಕಕ್ಕೂ ಸಿಗದಂತೆ ಆನಂದನಗರದಲ್ಲಿರುವ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.

ಅಭಿಷೇಕ ಹಿರೇಮಠ
ಅಭಿಷೇಕ ಹಿರೇಮಠ

‘ಪೂರ್ವನಿಯೋಜಿತ ಕೃತ್ಯ’
‘ಕಲ್ಲು ತೂರಾಟ ನಡೆಸುವಾಗ ಇಂಡಿ ಪಂಪ್ ವೃತ್ತದ ಹೈಮಾಸ್ಟ್ ವಿದ್ಯುತ್ ದೀಪ ಆರಿಸಲಾಗಿತ್ತು. ಕೆಲ ಹೊತ್ತಿನ ನಂತರ ಬೆಳಗಿಸಲಾಯಿತು. ಪೊಲೀಸರು, ಸಾರ್ವಜನಿಕರು ಸೇರಿದಂತೆ, ಶಾಂತಿ ಕಾಯ್ದುಕೊಳ್ಳುವಂತೆ ಮನವಿ ಮಾಡುತ್ತಿದ್ದ ಮುಸ್ಲಿಂ ಮುಖಂಡರಿಗೂ ಕಲ್ಲೇಟುಗಳು ಬಿದ್ದಿವೆ. ಈ ಗಲಭೆ ಪೂರ್ವನಿಯೋಜಿತವಾಗಿದೆ’ ಎಂದು ಹುಬ್ಬಳ್ಳಿ ಅಂಜುಮನ್ ಎ ಸಂಸ್ಥೆ ಅಧ್ಯಕ್ಷ ಯೂಸುಫ್ ಸವಣೂರ ಪ್ರತಿಕ್ರಿಯಿಸಿದರು.

‘20ರಿಂದ 25 ವರ್ಷದೊಳಗಿನ ಯುವಕರೇ ಹೆಚ್ಚಾಗಿದ್ದರು. ಎರಡು ಟ್ರಾಕ್ಟರ್‌ನಷ್ಟು ಕಲ್ಲುಗಳು ಎಲ್ಲಿಂದ ಬಂದವು? ಪವಿತ್ರ ರಂಜಾನ್ ಮಾಸದಲ್ಲೇ ಈ ಅಹಿತಕರ ಘಟನೆ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಎಲ್ಲರೂ ಸೌಹಾರ್ದ ಕಾಪಾಡಬೇಕು’ ಎಂದು ಮನವಿ ಮಾಡಿದರು.

‘ಗಲಭೆಗೂ ಎಐಎಂಐಎಂ ಪಕ್ಷಕ್ಕೂ ಸಂಬಂಧವಿಲ್ಲ’
ಪಾಲಿಕೆಯ ಸದಸ್ಯೆಯ ಪತಿ ಇರ್ಫಾನ್ ನಾಲತವಾಡ ಬಂಧನಕ್ಕೆ ಸಂಬಂಧಿಸಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಐಎಂಐಎಂ ಪಕ್ಷದ ಧಾರವಾಡ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ, ‘ಗಲಭೆಗೂ, ಪಕ್ಷಕ್ಕೂ ಸಂಬಂಧವಿಲ್ಲ. ಉದ್ರಿಕ್ತ ಯುವಕರಿಗೆ ತಿಳಿಹೇಳುತ್ತಿದ್ದ ಇರ್ಫಾನ್‌ ಅವರ ಬಂಧನವನ್ನೇ ನೆಪವಾಗಿಟ್ಟುಕೊಂಡು, ಘಟನೆಗೆ ಪಕ್ಷವೇ ಕಾರಣ ಎಂದು ಬಿಂಬಿಸಲಾಗುತ್ತಿದೆ. ಇದರ ಹಿಂದೆ ದುರುದ್ದೇಶವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT