ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿಗೆ ಮಾನವ ಸಾಗಾಟದ ದಂಧೆ ಅವ್ಯಾಹತ

ಊರಿಗೆ ಮರಳಲಾಗದೇ ಸೌದಿಯಲ್ಲಿ ಕಣ್ಣೀರು ಇಡುತ್ತಿರುವ ಹಲವು ಮಹಿಳೆಯರು
Last Updated 22 ಜುಲೈ 2021, 20:08 IST
ಅಕ್ಷರ ಗಾತ್ರ

ದಾವಣಗೆರೆ: ಅಧಿಕೃತ ವೀಸಾದೊಂದಿಗೆ ಸೌದಿ ಅರೇಬಿಯಾಕ್ಕೆ ಹೋಗಿ ನೆಮ್ಮದಿಯ ಜೀವನ ಕಂಡುಕೊಂಡ ಭಾರತೀಯರ ಸಂಖ್ಯೆ ಅಧಿಕ ಇದೆ. ಇದರ ಜತೆಗೆ ಕೆಲಸ ಕೊಡಿಸುವುದಾಗಿ ಹೇಳಿ, ವಿಸಿಟಿಂಗ್‌ ವೀಸಾದಲ್ಲಿ ಕರೆದುಕೊಂಡು ಹೋಗಿ ಗೃಹಬಂಧನದಲ್ಲಿ ಇಡುವ ದಂಧೆಯೂ ಅವ್ಯಾಹತವಾಗಿ ನಡೆದಿದೆ. ಈ ರೀತಿ ಅನಧಿಕೃತವಾಗಿ ಸಿಲುಕಿಕೊಂಡಿರುವವರೆಲ್ಲರೂ ಮಹಿಳೆಯರೇ ಆಗಿದ್ದಾರೆ.

ಕರ್ನಾಟಕದ ದಾವಣಗೆರೆ, ತುಮಕೂರು, ಮೈಸೂರು, ಶ್ರೀರಂಗಪಟ್ಟಣ, ಮಂಡ್ಯ ಹೀಗೆ ನಾನಾ ಕಡೆಗಳಿಂದ ಮಹಿಳೆಯರು ಸೌದಿಗೆ ಹೋಗಿ ಸಿಲುಕಿಕೊಂಡಿದ್ದಾರೆ. ಪಂಜಾಬ್‌, ಉತ್ತರ ಪ್ರದೇಶ, ಬಿಹಾರ ಸಹಿತ ವಿವಿಧ ರಾಜ್ಯಗಳಿಂದಲೂ ಇದೇ ರೀತಿ ಮಹಿಳೆಯರನ್ನು ಸಾಗಾಟ ಮಾಡಲಾಗುತ್ತಿದೆ.

‘ನಾನು ಭಾರತಕ್ಕೆ ಬರುವ ಪ್ರಯತ್ನದಲ್ಲಿ ಗಲಾಟೆ ಆಗಿದ್ದರಿಂದ ನನ್ನನ್ನು ಕಫೀಲ್‌ (ಪ್ರಾಯೋಜಕ) ಮನೆಗೆ ಕರೆತಂದಿದ್ದರು. ಆಗ ಅಲ್ಲಿ ಸಬಿಹಾ ಪರಿಚಯವಾಯಿತು. ಅವರೂ ಸಿಲುಕಿರುವುದು ಗೊತ್ತಾಯಿತು. ಇದಲ್ಲದೇ ಐದಾರು ವರ್ಷಗಳಿಂದ ಸೌದಿಯಿಂದ ಊರಿಗೆ ಮರಳಲಾರದೇ ಸಿಕ್ಕಿಹಾಕಿಕೊಂಡಿರುವ ಹಲವು ಮಹಿಳೆಯರು ಅಲ್ಲಿದ್ದರು. ಅದರಲ್ಲಿ ಮೈಸೂರು, ಮಂಡ್ಯ, ಶ್ರೀರಂಗಪಟ್ಟದವರೂ ಇದ್ದರು. ಬೇರೆ ರಾಜ್ಯದವರೂ ಇದ್ದರು. ಎಲ್ಲರೂ ಬಡತನದಿಂದಾಗಿ ದುಡಿಯಲು ಬಂದವರು. ನನಗೆ ಮತ್ತು ಸಬಿಹಾಗೆ ಹೇಗೋ ಭಾರತಕ್ಕೆ ಮರಳಲು ಅವಕಾಶ ಸಿಕ್ಕಿತು. ಉಳಿದವರು ಇನ್ನೂ ಅಲ್ಲೇ ನರಳುತ್ತಿದ್ದಾರೆ’ ಎಂದು ತಿಂಗಳ ಹಿಂದೆ ಭಾರತಕ್ಕೆ ಮರಳಿದ್ದ ಫೈರೋಜಾಬಾನು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಭಾರತದಿಂದಷ್ಟೇ ಅಲ್ಲ. ಇಂಡೋನೇಷ್ಯಾ, ಬಾಂಗ್ಲಾ ದೇಶದಿಂದಲೂ ಇದೇ ರೀತಿ ಮಹಿಳೆಯರನ್ನು ಸೌದಿಗೆ ಸಾಗಿಸಲಾಗಿದೆ. ವಿಸಿಟಿಂಗ್‌ ವೀಸಾದಲ್ಲಿ ಕರೆದುಕೊಂಡು ಹೋಗಿ ಆಮೇಲೆ ಯಾರದ್ದೋ ಮನೆಯಲ್ಲಿ ಬಿಟ್ಟುಬಿಡುತ್ತಾರೆ. ಮನೆಯ ಒಳಗೇ ಇರುವುದರಿಂದ ವೀಸಾ ಇಲ್ಲದೇ ನೆಲೆಸಿದ್ದಾರೆ ಎಂಬುದು ಕೂಡ ಗೊತ್ತಾಗುವುದಿಲ್ಲ’ ಎಂದು ಸೌದಿಯಲ್ಲಿರುವ ಕನ್ನಡಿಗ ಪಿ.ಎ. ಹಮೀದ್ ಪಡುಬಿದ್ರಿ ವಿವರಿಸಿದ್ದಾರೆ.

‘ನಾನು ಇರುವ ರಿಯಾದ್‌ನಿಂದ ಫೈರೋಜಾಬಾನು, ಸಬಿಹಾ ಸಾವಿರ ಕಿಲೋಮೀಟರ್‌ ದೂರದಲ್ಲಿದ್ದರು. ಉಳಿದವರೂ ಇದೇ ರೀತಿ ಸಾವಿರಾರು ಕಿಲೋಮೀಟರ್‌ ದೂರದಲ್ಲಿ ಇರುವುದರಿಂದ ಪತ್ತೆ ಕಾರ್ಯ ಸುಲಭವಲ್ಲ. ನಾನು, ಯಾಸಿನ್‌ ಕಲಬುರ್ಗಿ, ತ್ರಿಶೂರಿನ ಸಲೀಂ ಹೀಗೆ ಸೌದಿಯಲ್ಲಿರುವ ನಾವು ನಮ್ಮ ಪ್ರಯತ್ನ ಮುಂದುವರಿಸುತ್ತೇವೆ’ ಎನ್ನುತ್ತಾರೆ ಅವರು.

ತುಮಕೂರಿನ ಮಹಿಳೆ ಭಾರತಕ್ಕೆ

ದಾವಣಗೆರೆಯಿಂದ ಹೋಗಿ ಸೌದಿಯಲ್ಲಿ ಸಿಲುಕಿದ್ದ ಫೈರೋಜಾಬಾನು ಒಂದು ತಿಂಗಳ ಹಿಂದೆ ಭಾರತಕ್ಕೆ ಮರಳಿದ್ದರು. ಇದೀಗ ತುಮಕೂರಿನಿಂದ ಮೂರು ವರ್ಷಗಳ ಹಿಂದೆ ಹೋಗಿ ಸೌದಿಯಲ್ಲಿ ಸಿಲುಕಿದ್ದ ಸಬಿಹಾ ಕೂಡ ಗುರುವಾರ ಜೆದ್ದಾದಿಂದ ಹೊರಟು ಕೊಚ್ಚಿನ್‌ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.

ಫೈರೋಜಾಬಾನು ಅವರು ಸೌದಿಯಲ್ಲಿ ಸಿಲುಕಿರುವ ಬಗ್ಗೆ ‘ಪ್ರಜಾವಾಣಿ’ ವರದಿ ಮಾಡಿತ್ತು. ಸೌದಿಯಲ್ಲಿದ್ದ ಹಮೀದ್ ಪಡುಬಿದ್ರಿ prajavani.netನಲ್ಲಿ ಈ ವರದಿ ಓದಿ ಅವರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾಗ ತುಮಕೂರಿನ ಸಬಿಹಾ ಅವರೂ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಇಬ್ಬರನ್ನೂ ಊರಿಗೆ ಕಳುಹಿಸುವ ಹೊತ್ತಿಗೆ ಇಂಥ ಹಲವು ಮಹಿಳೆಯರು ಸಿಲುಕಿಕೊಂಡಿರುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT