ಶುಕ್ರವಾರ, ಜನವರಿ 22, 2021
28 °C
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 27ನೇ ವರ್ಷದ ಆಚರಣೆ

ಹುತ್ತರಿ ಸಂಭ್ರಮ; ಧಾನ್ಯಲಕ್ಷ್ಮಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಕೊಡಗಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಹುತ್ತರಿ ಅಂಗವಾಗಿ ಸೋಮವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 27ನೇ ಸಾರ್ವತ್ರಿಕ ಪುತ್ತರಿ ನಮ್ಮೆಯನ್ನು ಸಮೀಪದ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸಿ.ಎನ್.ಸಿ. ಮುಖ್ಯಸ್ಥ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಕೊಡವರ ಸಂಪ್ರಾದಾಯಿಕ ಉಡುಗೆ ತೊಡುಗೆ ಧರಿಸಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ನಂದಿನೆರವಂಡ ಉತ್ತಪ್ಪ ಅವರ ಭತ್ತದ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದರು.

ಮೊದಲಿಗೆ ಮನೆಯಲ್ಲಿ ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರು ಮತ್ತು ದೇವರಿಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ 5 ಬಗೆಯ ಮರದ ಸೊಪ್ಪುಗಳಾದ ಅರಳಿ, ಮಾವು, ಹಲಸು, ಕುಂಬಳಿ ಹಾಗೂ ಗೇರು ಮರಗಳ ಎಲೆಗಳಿಂದ ನೆರೆಕಟ್ಟುವ ವಿಧಿ–ವಿಧಾನ ನೆರವೇರಿಸಿದರು. ನಂತರ, ಸಿದ್ಧಪಡಿಸಲಾದ ಕುತ್ತಿಯನ್ನು ತೋಕ್-ಕತ್ತಿ, ದುಡಿಕೊಟ್ಟ್ ಪಾಟ್ ತಳಿಯತಕ್ಕಿ ಹಾಗೂ ಒಡ್ಡೋಲಗದೊಂದಿಗೆ ಗದ್ದೆಗೆ ತೆರಳಲಾಯಿತು.

ಮೊದಲಿಗೆ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಉತ್ತಪ್ಪ ಅವರ ಗದ್ದೆಯಲ್ಲಿ ಪೂಜೆ ಸಲ್ಲಿಸಿ, ಕದಿರು ತೆಗೆಯಲಾಯಿತು. ಈ ಸಂದರ್ಭ ಎಲ್ಲರೂ ಪೊಲಿ ಪೊಲಿ ದೇವಾ ಪೊಲಿಯೋ ಬಾ ದೇವ ಎಂಬ ಘೋಷಣೆ ಮೊಳಗಿಸುತ್ತ ದೇವರನ್ನು ಪ್ರಾರ್ಥಿಸಿದರು.

ನಂತರ, ಧಾನ್ಯಲಕ್ಷ್ಮಿಯನ್ನು ಮೆರವಣಿಗೆ ಮೂಲಕ ತಂದು ಒಕ್ಕಲು ಕಣದ ಬೋಟಿಯ ಸುತ್ತ ಕದಿರನ್ನು ಇಟ್ಟು ಪೂಜೆ ಸಲ್ಲಿಸಿದರು.

ಈ ಸಂದರ್ಭ ಸಿಎನ್‌ಸಿ ಕಾರ್ಯಕರ್ತರು ಪ್ರದರ್ಶಿಸಿದ ಸಂಪ್ರಾದಾಯಿಕ ನೃತ್ಯಗಳಾದ ಕೋಲಾಟ, ಪರೆಯ ಕಳಿ, ಚೌಕಾಟದಂತಹ ವಿವಿಧ ಕಾರ್ಯಕ್ರಮಗಳು ಹಬ್ಬಕ್ಕೆ ಮೆರುಗು ನೀಡಿದವು.

ನಂತರ, ಎಲ್ಲರೂ ಕೊಡವ ಸಂಪ್ರಾದಾಯಿಕ ತಾಳಕ್ಕೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಮನೆಯಲ್ಲಿ ಹೊಸ ಅಕ್ಕಿ ಪಾಯಸ , ಹಬ್ಬದ ವಿಶೇಷ ತೊಂಬಿಟ್ಟು, ಅಡಿಕೆಹಿಟ್ಟು, ಕಡುಬು, ಪಾಯಸ, ಪಂದಿಕರಿ ಮತ್ತಿತರ ಭಕ್ಷ್ಯಗಳನ್ನು ತಯಾರಿಸಿ ಎಲ್ಲರೂ ಒಟ್ಟಾಗಿ ಸವಿದರು.

ಕಲಿಯಂಡ ಪ್ರಕಾಶ್, ನಂದಿನೆರವಂಡ ಉತ್ತಪ್ಪ, ನಂದಿನೆರವಂಡ ವಿಜು, ನಂದಿನೆರವಂಡ ನಿಶ, ನಂದಿನೆರವಂಡ ಬಬ್ಬು, ನಂದಿನೆರವಂಡ ಬೀನಾ, ನಂದಿನೆರವಂಡ ಅಪ್ಪಣ್ಣ, ನಂದಿನೆರವಂಡ ರೇಖಾ, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ದಿನೇಶ್, ನಂದಿನೆರವಂಡ ಸುಮಿ, ನಂದಿನೆರವಂಡ ಕೀರ್ತನ್, ಪುಲ್ಲೆರ ಕಾಳಪ್ಪ, ಪುಲ್ಲೆರ ಸ್ವಾತಿ, ಪುಲ್ಲೆರ ಶಿವಾನಿ, ಪುಲ್ಲೆರ ಬೋಪಯ್ಯ, ಪುಲ್ಲೆರ ಕನ್ನಿಕೆ, ಕಲಿಯಂಡ ಮೀನಾ ಪ್ರಕಾಶ್, ಬೇಪಡಿಯಂಡ ದಿನು ಮೊದಲಾದರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು