ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಸಿದ್ದರಾಮಯ್ಯನ ಭೇಟಿಯಾಗಿಲ್ಲ ಎಂದ ಮಾಜಿ ಸಿಎಂ ಯಡಿಯೂರಪ್ಪ: ಹಾಕಿದ ಸವಾಲೇನು?

Last Updated 13 ಅಕ್ಟೋಬರ್ 2021, 7:25 IST
ಅಕ್ಷರ ಗಾತ್ರ

ಬೆಂಗಳೂರು:'ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇತ್ತೀಚೆಗೆ ಭೇಟಿಯಾಗಿದ್ದರು' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿ ಇಂದು ಸ್ಪಷ್ಟನೆ ನೀಡಿರುವ ಯಡಿಯೂರಪ್ಪ ಅವರು, 'ಫೆಬ್ರವರಿ 27, 2020ರಂದು ನಡೆದ ನನ್ನ ಜನ್ಮದಿನದ ಕಾರ್ಯಕ್ರಮ ಹೊರತುಪಡಿಸಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ, ಹಾಗೆ ಭೇಟಿ ಮಾಡುವ ಅಗತ್ಯವೂ ನನಗಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ, ಪಕ್ಷದಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ' ಎಂದಿದ್ದಾರೆ.

'ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಗುರಿ ತಲುಪುವ ತನಕ ನಾನು ವಿಶ್ರಮಿಸುವುದಿಲ್ಲ. ನಂಬಿದ ಸಿದ್ಧಾಂತಗಳೊಂದಿಗೆ ನಾನೆಂದಿಗೂ ರಾಜಿಯಾಗಿಲ್ಲ, ಆಗುವುದೂ ಇಲ್ಲ. ಹಾಗೆಯೇ ಸಿದ್ದರಾಮಯ್ಯನವರು ಕೂಡ ಭೇಟಿಯಾಗಿಲ್ಲವೆಂದು ಸ್ಪಷ್ಟಪಡಿಸಿರುವುದರಿಂದ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಅರ್ಥರಹಿತವಾಗಿದೆ' ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ.

ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಕುಮಾರಸ್ವಾಮಿ, 'ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಲು ಯಡಿಯೂರಪ್ಪ- ಸಿದ್ದರಾಮಯ್ಯ ಭೇಟಿಯೇ ಕಾರಣ' ಎಂದು ಹೇಳಿದ್ದರು.

'ಸಿದ್ದರಾಮಯ್ಯ ಅಧಿಕಾರಕ್ಕಾಗಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಈ ವಿಷಯ ಕೇಂದ್ರಕ್ಕೆ ತಿಳಿದು ಯಡಿಯೂರಪ್ಪ ಅವರನ್ನು ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಈ ದಾಳಿ ನಡೆಸಲಾಗಿದೆ. ದಾಳಿಯ ಹಿಂದೆ ರಾಜಕೀಯದ ಉದ್ದೇಶ ಇರುವುದು ಸ್ಪಷ್ಟ' ಎಂದು ಹೇಳಿದ್ದರು.

ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿರುವುದಲ್ಲದೇ ಆರೋಪ, ಪ್ರತ್ಯಾರೋಪಗಳಿಗೂ ಕಾರಣವಾಗಿದೆ.

ಇನ್ನು ಇದೇ ವಿಚಾರವಾಗಿ ಕಲಬುರುಗಿಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು, 'ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಾನು ಭೇಟಿಯಾಗಿದ್ದನ್ನು ಎಚ್.ಡಿ.ಕುಮಾರಸ್ವಾಮಿ ಸಾಬೀತು ಮಾಡಿದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ' ಎಂದು ಸವಾಲು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಈ ಹಿಂದೆ ಯಡಿಯೂರಪ್ಪ ಅವರ 76ನೇ ಜನ್ಮದಿನದಂದು ಮಾತ್ರ ನಾನು ಖುದ್ದಾಗಿ ಭೇಟಿ ಮಾಡಿದ್ದೇನೆ. ನಂತರ ಸದನದಲ್ಲಿ ಮುಖಾಮುಖಿಯಾಗಿದ್ದೇವೆ. ಇದನ್ನು ಹೊರತು ಪಡಿಸಿ ವೈಯಕ್ತಿಕವಾಗಿ ನಾನು ಯಡಿಯೂರಪ್ಪನವರನ್ನು ಭೇಟಿ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT