ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಎಂಎ’ ವಂಚಿತರಿಗೆ ₹ 50 ಸಾವಿರ: ಹಣ ಕಳೆದುಕೊಂಡವರಿಗೆ ಸಿಹಿಸುದ್ದಿ

Last Updated 7 ಮಾರ್ಚ್ 2021, 19:35 IST
ಅಕ್ಷರ ಗಾತ್ರ

ಬೆಂಗಳೂರು: ಹೆಚ್ಚಿನ ಲಾಭಾಂಶದ ಆಮಿಷಕ್ಕೆ ಒಳಗಾಗಿ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿಯಲ್ಲಿ ಹಣ ಠೇವಣಿ ಇಟ್ಟು ಮೋಸ ಹೋಗಿದ್ದ ಗ್ರಾಹಕರಿಗೆ ಆ ಕಂಪನಿಯಿಂದ ಜಪ್ತಿ ಮಾಡಿದ ಆಸ್ತಿ, ಚಿನ್ನಾಭರಣ ಮಾರಾಟದಿಂದ ಬಂದ ಹಣವನ್ನು ಹಂಚಲು ರಾಜ್ಯ ಸರ್ಕಾರ ನೇಮಿಸಿದ ಸಕ್ಷಮ ಪ್ರಾಧಿಕಾರ ಮುಂದಾಗಿದೆ.

ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ಆದೇಶದಂತೆ ವಂಚನೆಗೆ ಒಳಗಾದ ಠೇವಣಿದಾರರಿಗೆ ಗರಿಷ್ಠ ₹ 50 ಸಾವಿರ ಹಂಚಿಕೆ ಆಗಲಿದೆ. ಅತೀ ಕಡಿಮೆ ಹಣ ಕಳೆದುಕೊಂಡಿರುವವರ ಖಾತೆಗೆ ಮೊದಲು ಹಣ ಜಮೆ ಆಗಲಿದೆ.

₹ 50 ಸಾವಿರಕ್ಕಿಂತ ಕಡಿಮೆ ಹಣ ವಂಚನೆಗೆ ಒಳಗಾದ 11,492 ಠೇವಣಿದಾರರಿದ್ದಾರೆ. ಅವರ ಕ್ಲೈಮ್‌ ಅರ್ಜಿಗಳನ್ನು ಸಂಪೂರ್ಣ ಸೆಟ್ಲ್‌ ಮಾಡಲು ₹ 32 ಕೋಟಿ ಅಗತ್ಯವಿದೆ. ಕಂಪನಿಯಿಂದ ವಶಪಡಿಸಿಕೊಂಡ ₹10 ಕೋಟಿ ಸದ್ಯ ಲಭ್ಯವಿದೆ. ಈ ಮೊತ್ತದಲ್ಲಿ ಸುಮಾರು 3,500 ಠೇವಣಿದಾರರಿಗೆ, ಅವರು ಕಳೆದುಕೊಂಡ ಹಣ ಸಂಪೂರ್ಣ ಸಿಗಲಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಐಎಂಎ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಹರ್ಷ ಗುಪ್ತ, ‘ವಂಚಿತರಾದ 65,258 ಮಂದಿ ಆನ್‌ಲೈನ್‌ ಮೂಲಕ ಕ್ಲೈಮ್‌ ಅರ್ಜಿ ಸಲ್ಲಿಸಿದ್ದಾರೆ. ಅಷ್ಟೂ ಅರ್ಜಿಗಳಿಗೆ ಹಣ ಮರು ಪಾವತಿಸಲು ₹ 2,695 ಕೋಟಿ ಅಗತ್ಯವಿದೆ. ಆದರೆ, ಅರ್ಜಿ ಸಲ್ಲಿಸಿರುವ 10,201 ಠೇವಣಿದಾರರು, ಠೇವಣಿ ಇಟ್ಟಿದ್ದ ಮೊತ್ತದಷ್ಟು ಹಣವನ್ನು ಲಾಭಾಂಶ ರೀತಿಯಲ್ಲಿ ಈಗಾಗಲೇ (ವಂಚನೆ ಪ್ರಕರಣ ಬಯಲಾಗುವ ಮೊದಲೇ) ಪಡೆದಿದ್ದಾರೆ. ಅವರಿಗೆ ಯಾವುದೇ ಹಣ ಪಾವತಿ ಇಲ್ಲ. ಅವರನ್ನು ಹೊರತುಪಡಿಸಿದರೆ, ಉಳಿದ, 55,057 ಅರ್ಜಿದಾರರಿಗೆ ಪಾವತಿಸಲು ₹1,372 ಕೋಟಿ ಬೇಕಾಗಿದೆ’ ಎಂದರು.

‘ವಂಚನೆ ಮೊತ್ತ ಎಷ್ಟೇ ಇದ್ದರೂ ಗರಿಷ್ಠ ₹ 50 ಸಾವಿರಕ್ಕೆ ಮಿತಿಗೊಳಿಸಿ ಕ್ಲೈಮ್‌ದಾರರ ಖಾತೆಗಳಿಗೆ ಹಣ ವರ್ಗಾಯಿಸಲು ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ. ಗ್ರಾಹಕರು ಇಟ್ಟಿದ್ದ ಠೇವಣಿ ಹಣ ಮತ್ತು ಈಗಾಗಲೇ ಪಡೆದ ಲಾಭಾಂಶವನ್ನು ಹೊಂದಾಣಿಕೆ ಮಾಡಿ, ಕೊಡಬೇಕಾದ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ’ ಎಂದರು.

‘ಐಎಂಎಗೆ ಸೇರಿದ ಆಸ್ತಿ, ಚಿನ್ನಾಭರಣ ಜಪ್ತಿಯನ್ನು ಕೋರ್ಟ್‌ ದೃಢೀಕರಿಸಿ, ಅವುಗಳ ಮಾರಾಟದಿಂದ ಇನ್ನಷ್ಟು ಹಣ ಬಂದ ಬಳಿಕ ಕೋರ್ಟ್‌ ಆದೇಶದಂತೆ ಮುಂದೆ ಕ್ಲೈಮ್‌ದಾರರ ಖಾತೆಗೆ ಮತ್ತಷ್ಟು ಹಣ ವರ್ಗಾಯಿಸಲಾಗುವುದು. ಗರಿಷ್ಠ ₹ 50 ಸಾವಿರ ಪಾವತಿ ಪ್ರಕ್ರಿಯೆಯಲ್ಲಿ ಅತೀ ಕಡಿಮೆ ಹಣ ಪಾವತಿಸಬೇಕಾದ ಠೇವಣಿದಾರರಿಗೆ ಮೊದಲು ಹಣ ಸಿಗಲಿದೆ’ ಎಂದು ತಿಳಿಸಿದರು.

‘ಕ್ಲೈಮ್‌ದಾರರ ಬ್ಯಾಂಕ್‌ ಖಾತೆಗೆ ವಾರದೊಳಗೆ ಹಣ ಜಮೆ ಪ್ರಕ್ರಿಯೆ ಆರಂಭವಾಗಲಿದೆ. ಜಮೆ ಆಗುತ್ತಿದ್ದಂತೆ ಠೇವಣಿದಾರರ ಮೊಬೈಲ್‌ ಸಂಖ್ಯೆಗೆ ಸಂದೇಶ ರವಾನೆಯಾಗಲಿದೆ. ಪ್ರಾಧಿಕಾರ ವೆಬ್‌ಸೈಟ್‌ನಲ್ಲೂ ಈ ಬಗ್ಗೆ ಪರಿಶೀಲಿಸಬಹುದು. ಸದ್ಯ, ಜಪ್ತಿ ಮಾಡಲಾದ ₹ 475 ಕೋಟಿ ಮೊತ್ತದ ಆಸ್ತಿಯಲ್ಲಿ ಫೆಬ್ರುವರಿ ಅಂತ್ಯದವರೆಗೆ ₹ 10 ಕೋಟಿ ಮೌಲ್ಯದ ಆಸ್ತಿಯನ್ನು ವಿಶೇಷ ಕೋರ್ಟ್‌ ದೃಢೀಕರಿಸಿದೆ. ವಿವರಗಳಿಗೆ ಸಹಾಯವಾಣಿ (080-46885959) ಸಂಪರ್ಕಿಸಬಹುದು’ ಎಂದೂ ವಿವರಿಸಿದರು.

*
ವಂಚಿತ ಎಲ್ಲರಿಗೂ ಏಕಕಾಲದಲ್ಲಿ ₹ 50 ಸಾವಿರ ಸಿಗದು. ಸದ್ಯ ಲಭ್ಯ ಮೊತ್ತವನ್ನು ಹಂಚಲಾಗುವುದು. ಹಣ ಲಭ್ಯವಾದಂತೆ ಉಳಿದವರಿಗೂ ಹಣ ಸಿಗಲಿದೆ.
-ಹರ್ಷ ಗುಪ್ತ, ಮುಖ್ಯಸ್ಥರು, ಐಎಂಎ ಸಕ್ಷಮ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT