ಮಂಗಳವಾರ, ಜೂನ್ 15, 2021
22 °C
ಅಧಿಕ ತಾಪಮಾನದಲ್ಲಿ ಸಂಗ್ರಹಿಸಬಹುದಾದ ಲಸಿಕೆ

ಐಐಎಸ್‌ಸಿಯಿಂದ ಲಸಿಕೆ, ಆಮ್ಲಜನಕ ಸಾಂದ್ರಕ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಕೊರೊನಾ ವೈರಾಣುವನ್ನು ತಟಸ್ಥಗೊಳಿಸಬಲ್ಲ ಮತ್ತು 30 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲೂ ಸಂಗ್ರಹಿಸಬಹುದಾದ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ। ಗೋವಿಂದನ್ ರಂಗರಾಜನ್ ಹೇಳಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದ್ದು, ಈ ಲಸಿಕೆಯನ್ನು ಮಾನವ ದೇಹದ ಮೇಲೆ ಪ್ರಯೋಗ ಮಾಡಬೇಕಾಗಿದೆ ಎಂದು ಹೇಳಿದರು.

30 ಡಿಗ್ರಿ ಸೆಲ್ಸಿಯಸ್‌ ನಷ್ಟು ತಾಪಮಾನದಲ್ಲಿ ಸಂಗ್ರಹಿಸಬಹುದಾದ ಗುಣ ಹೊಂದಿರುವ ಈ ಲಸಿಕೆಯು ಭವಿಷ್ಯದಲ್ಲಿ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮೈಲಿಗಲ್ಲಾಗಲಿದೆ. ಈ ಲಸಿಕೆಯನ್ನು  ಅತಿ ವೇಗವಾಗಿ ಮತ್ತು ಸುಲಭವಾಗಿ ವಿತರಿಸಲು ಸಾಧ್ಯವಾಗುತ್ತದೆ ಎಂದರು.

ಆಮ್ಲಜನಕ ಸಾಂದ್ರಕ:

10 ಎಲ್ ಪಿಎಂ ಸಾಮರ್ಥ್ಯದ ಆಮ್ಲಜನಕ ಸಾಂದ್ರಕವನ್ನು ಸಂಸ್ಥೆಯು ಅಭಿವೃದ್ಧಿಪಡಿಸಿದ್ದು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದೆ. ಚೀನಾದ ಆಮ್ಲಜನಕ ಸಾಂದ್ರಕಗಳು ಶೇ 40-50 ರಷ್ಟು ಆಮ್ಲಜನಕ ನೀಡುತ್ತಿದ್ದರೆ, ನಾವು ಅಭಿವೃದ್ಧಿಪಡಿಸಿರುವ ಸಾಂದ್ರಕಗಳು ಶೇ 90 ರಷ್ಟು ಆಮ್ಲಜನಕ ನೀಡುತ್ತವೆ ರಂಗರಾಜನ್‌ ತಿಳಿಸಿದರು.

ಹೆಚ್ಚು ದಕ್ಷತೆಯಿಂದ ಕೂಡಿರುವ ಈ ಸಾಂದ್ರಕಗಳನ್ನು ಕ್ಲಿನಿಕಲ್ ಪರೀಕ್ಷೆಗೆ ಹಾಗೂ ತುರ್ತು ಬಳಕೆಗೆ ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‍ಸಿಒ) ನಿಂದ ಅನುಮೋದನೆ ದೊರೆಯಲು ಸಹಕರಿಸಬೇಕು ಎಂದು ರಂಗರಾಜನ್ ಸಚಿವರಿಗೆ ಮನವಿ ಮಾಡಿದರು.

ಈ ಬಗ್ಗೆ ಭರವಸೆ ನೀಡಿದ ಸಚಿವ ಡಾ.ಕೆ.ಸುಧಾಕರ್, ಈ ಕೂಡಲೇ ಈ ಆವಿಷ್ಕಾರದ ಕುರಿತು ಆರ್ ಜಿಯುಎಚ್‍ಎಸ್ ಕುಲಪತಿಯವರೊಡನೆ ಚರ್ಚಿಸಲಾಗುವುದು ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಕೈಗಾರಿಕಾ ಘಟಕ ಹಾಗೂ ಆಸ್ಪತ್ರೆಗಳಲ್ಲಿ ಆಮ್ಲಜನಕ ತುಂಬಿಸುವಾಗ ವ್ಯರ್ಥವಾಗುವುದನ್ನು ಕಡಿಮೆ ಮಾಡುವುದು ಮತ್ತು ಲಭ್ಯವಿರುವ ಆಮ್ಲಜನಕವನ್ನು ಬೇಡಿಕೆಗೆ ತಕ್ಕಷ್ಟೇ ಸಮರ್ಪಕವಾಗಿ ಬಳಸುವ ಕುರಿತು ಸೂಕ್ತ ತಾಂತ್ರಿಕ ಸಲಹೆ ನೀಡಬೇಕು ಎಂದು ಸಚಿವ ಸುಧಾಕರ್ ಕೋರಿದರು. ಈ ಸಮಸ್ಯೆ ಪರಿಹರಿಸಲು ಎಲ್ಲ ಬಗೆಯ ತಾಂತ್ರಿಕ ಸಹಕಾರ ಹಾಗೂ ಎಂಜಿನಿಯರಿಂಗ್ ನೆರವು ನೀಡಲಾಗುವುದು ಎಂದು ಪ್ರೊ.ರಂಗರಾಜನ್ ಆಶ್ವಾಸನೆ ನೀಡಿದರು.

ಇದನ್ನೂ ಓದಿ.. ಲಸಿಕೆ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?: ಡಿವಿಎಸ್‌
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು