ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿ ಜಾರಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದ್ದು, ಶಿಕ್ಷಕರು ತಮ್ಮ ಅನಿಸಿಕೆ, ಅನುಮಾನ ವ್ಯಕ್ತಪಡಿಸಿ, ಮುಕ್ತವಾಗಿ ಚರ್ಚಿಸಿ ಮುಂದುವರೆಯೋಣ. ವಿದ್ಯಾರ್ಥಿ
ಕೇಂದ್ರಿತ ಶಿಕ್ಷಣ ನೀತಿಯನ್ನು ಯಶಸ್ವಿ ಯಾಗಿ ಅನುಷ್ಠಾನಗೊಳಿಸೋಣ’ ಎಂದು ಶಿಕ್ಷಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಬಿ.ಸಿ.ನಾಗೇಶ್ ಮಾತನಾಡಿ, ‘ರಾಜ್ಯದ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ವಸ್ತುಸ್ಥಿತಿ ಪರಿಶೀಲಿಸಿದ್ದೇನೆ. ಶಿಕ್ಷಕರ ಕೊರತೆ ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದೇನೆ’ ಎಂದರು.
‘ರಾಜ್ಯದ ಶೇ 50ಕ್ಕೂ ಹೆಚ್ಚು ಶಿಕ್ಷಕರು ಪ್ರಶಸ್ತಿಗೆ ಅರ್ಹರಿದ್ದಾರೆ ಎಂಬ ವಿಶ್ವಾಸವಿದೆ. ಅಂಕ ಆಧಾರದ ಮೇಲೆ ಪ್ರಶಸ್ತಿ ಗೌರವ ನಿರ್ಧರಿಸಲಾಗುತ್ತದೆ. ಹೀಗಾಗಿ, ಕೆಲವರಿಗೆ ಮಾತ್ರ ಪ್ರಶಸ್ತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಬೇರೆ ಶಿಕ್ಷಕರು ಕೂಡ ಪ್ರಶಸ್ತಿಗೆ ಪಾತ್ರರಾಗುತ್ತಾರೆ’ ಎಂದು ಸಚಿವರು ನುಡಿದರು.
‘ರಾಜ್ಯದಲ್ಲಿ ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ಪ್ರಯತ್ನ ನಡೆದಿದೆ. ಆಗ ಬೇರೆ ಬೇರೆ ತೊಂದರೆಗಳು ಎದುರಾಗಬಹುದು. ಆದರೆ, ರಾಷ್ಟ್ರದ ಹಿತಕ್ಕಾಗಿ ಎಲ್ಲರೂ ಬೆಂಬಲ ನೀಡುತ್ತೀರಿ ಎಂದು ನಂಬಿದ್ದೇನೆ’ ಎಂದರು.
ಯಶೋಮಾರ್ಗ ಪುಸ್ತಕ ಬಿಡುಗಡೆ: ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ ಯಶಸ್ವಿಯಾಗಿರುವ ಕುರಿತು ಸಮಗ್ರ ಮಾಹಿತಿ ದಾಖಲಿಸಿ
ರುವ ‘ಯಶೋಮಾರ್ಗ’ ಪುಸ್ತಕ ಮತ್ತು ಹಿಂದಿನ ವರ್ಷಗಳಲ್ಲಿ ಶಿಕ್ಷಕರ ಪ್ರಶಸ್ತಿ ಸ್ವೀಕರಿಸಿರುವ ಶಿಕ್ಷಕರು, ಉಪನ್ಯಾಸಕರ ಕುರಿತು ಮಾಹಿತಿ ನೀಡುವ ಪುಸ್ತಕವನ್ನು ಇದೇ ವೇಳೆ ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ ಎ. ದೇವೇಗೌಡ ಇದ್ದರು.
‘ನಮ್ಮ ಶಾಲೆ, ನನ್ನ ಕೊಡುಗೆ’
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆರ್ಥಿಕ ನೆರವು ಒದಗಿಸಲು ಇಚ್ಛಿಸುವವರಿಗೆ ಅನುಕೂಲ ಕಲ್ಪಿಸಲು ‘ನಮ್ಮ ಶಾಲೆ ನನ್ನ ಕೊಡುಗೆ’ ಎಂಬ ವೆಬ್ ಪೋರ್ಟಲ್ ಬಿಡುಗಡೆ ಮಾಡಲಾಗಿದೆ. ದಾನಿಗಳು ನೀಡುವ ಹಣವು ಕೇಂದ್ರ ಕಚೇರಿಯ ಬ್ಯಾಂಕ್ ಖಾತೆ ಮೂಲಕ ಆಯಾ ಶಾಲೆಗೆ ನೇರವಾಗಿ ಸಂದಾಯವಾಗುವ ರೀತಿಯಲ್ಲಿ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಪೋರ್ಟಲ್‌ಗೆ ಲಾಗಿನ್ ಆಗಿ ಶಾಲೆ ಆಯ್ಕೆ ಮಾಡಿ ಹಣ ಪಾವತಿಸಬಹುದು. ವೆಬ್ ಪೋರ್ಟಲ್ (https://sts.karnataka.gov.in/SATSSA/main/loadHomePage.htm).
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.