ಸೋಮವಾರ, ಸೆಪ್ಟೆಂಬರ್ 20, 2021
23 °C

ಮೋದಿ ಆಡಳಿತದಲ್ಲಿ ಭಾರತ ವಿಶ್ವದ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮಿದೆ: ಕಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ವೇಳೆ ಸ್ವತಂತ್ರ ಭಾರತದ ಕುರಿತಾಗಿ ಇದ್ದ ಕನಸುಗಳನ್ನು ನನಸಾಗಲು ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದು, ಕಳೆದ ಏಳು ವರ್ಷಗಳಲ್ಲಿ ಭಾರತ ವಿಶ್ವದ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದರು. ಭಾರತವು ‘ಜಗದ್ವಂದ್ಯ’ ರಾಷ್ಟ್ರವಾಗುವತ್ತ ದಾಪುಗಾಲಿಟ್ಟಿದೆ ಎಂದು ಹೇಳಿದರು.

ದೇಶಾದ್ಯಂತ ನಡೆದ ಜನರ ಹೋರಾಟ, ಅಹಿಂಸಾತ್ಮಕ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಭಾರತವು ಸ್ವಾತಂತ್ರ್ಯ ಪಡೆದಿದೆ. ಅಂತಹ ಹಿರಿಯರ ಸ್ಮರಣೆ ಅನಿವಾರ್ಯ. ಆ ಹಿರಿಯರು ಕಂಡಿದ್ದ ವಿಶ್ವಕ್ಕೇ ಮಾರ್ಗದರ್ಶನ ನೀಡುವ ದೇಶ ನಮ್ಮದಾಗಬೇಕು ಎಂಬ ಕನಸನ್ನು ನನಸು ಮಾಡಬೇಕಾಗಿದೆ ಎಂದು ನಳಿನ್‌ ಹೇಳಿದರು.

ಒಂದು ಕಾಲದಲ್ಲಿ ಭಾರತವನ್ನು ಭಿಕ್ಷುಕರ ದೇಶ, ಹಾವಾಡಿಗರ ದೇಶ ಎಂದು ಕರೆಯುತ್ತಿದ್ದರು. ಕಳೆದ ಏಳು ವರ್ಷಗಳಲ್ಲಿ ಮೋದಿಯವರ ಆಡಳಿತದ ಪರಿಣಾಮವಾಗಿ ಭಾರತ ವಿಶ್ವದಲ್ಲಿ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿ ಜಗತ್ತಿನ ಅತಿ ಎತ್ತರದ ಸ್ಥಾನಕ್ಕೆ ಏರಿದೆ ಎಂದು ನಳಿನ್‌ ತಿಳಿಸಿದರು.

ಭಾರತವು ಹಲವು ಕ್ಷೇತ್ರಗಳಲ್ಲಿ ಮುಂಚೂಣಿಗೆ ಬಂದಿದೆ. ವಿಶೇಷವಾಗಿ ಕೋವಿಡ್‌ ಮೊದಲ ಅಲೆಯ ನಂತರ ಸ್ವದೇಶಿ ಲಸಿಕೆ ಉತ್ಪಾದಿಸಿದ ಭಾರತ ಹಲವು ರಾಷ್ಟ್ರಗಳಿಗೆ ರಫ್ತು ಮಾಡಿತು. ಅಲ್ಲದೆ, ದೇಶದಲ್ಲಿ ಈವರೆಗೆ ಸುಮಾರು 54 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಬಡವರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು 139 ಕೋಟಿ ಜನರ ಮನ ಗೆದ್ದಿದೆ ಎಂದು ನಳಿನ್‌ ಹೇಳಿದರು.


ಧ್ವಜಾರೋಹಣ ಮಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್

ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ಸ್ವಾತಂತ್ರ್ಯದ ನೂರನೇ ವರ್ಷಾಚರಣೆ ಸಂದರ್ಭದಲ್ಲಿ ಜಗತ್ತಿನ ನಂಬರ್‌ ಒನ್‌ ರಾಷ್ಟ್ರವಾಗಿರಬೇಕು ಎಂಬ ಪ್ರಧಾನಿಯವರ ಕನಸು ನನಸಾಗಿಸಲು ನಾವೆಲ್ಲರೂ ಶ್ರಮಿಸಬೇಕು. ಇಲ್ಲಿನ ಸವಾಲುಗಳನ್ನು ಅವಕಾಶವಾಗಿ ಮಾರ್ಪಡಿಸಬೇಕು ಎಂಬ ಚಿಂತನೆ ಅವರದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು