ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್ ಉಗ್ರರ ಜೊತೆ ನಂಟು ಹೊಂದಿದ್ದ ವೈದ್ಯಕೀಯ ವಿದ್ಯಾರ್ಥಿ ಬೆಂಗಳೂರಿನಲ್ಲಿ ಸೆರೆ

ಐಎಸ್‌ಕೆಪಿ ಜೊತೆ ಸಂಪರ್ಕ; ಎನ್‌ಐಎ ಅಧಿಕಾರಿಗಳ ಕಾರ್ಯಾಚರಣೆ
Last Updated 18 ಆಗಸ್ಟ್ 2020, 14:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವ್ಯಾಸಂಗ ಮಾಡುತ್ತಲೇ ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಎಂಬ ಆರೋಪದಡಿ ವೈದ್ಯಕೀಯ ವಿದ್ಯಾರ್ಥಿ ಅಬ್ದುಲ್ ರೆಹಮಾನ್ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಸೋಮವಾರ ಸೆರೆ ಹಿಡಿದಿದ್ದಾರೆ.

ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಹಾಗೂ ಸಹೋದರ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ಐಎಸ್‌ಕೆಪಿ) ಉಗ್ರರ ಜೊತೆ ನಂಟು ಹೊಂದಿದ್ದ ಅಬ್ದುಲ್, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ. ಇಲ್ಲಿಂದಲೇ ಸಂಘಟನೆಯ ಇತರೆ ಸದಸ್ಯರ ಜೊತೆ ಸಂಪರ್ಕ ಸಾಧಿಸುತ್ತಿದ್ದ ಎನ್ನಲಾಗಿದೆ.

ಬಸವನಗುಡಿಯ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಎಂ.ಡಿ.ಬ್ಲಾಕ್‌ನಲ್ಲಿ ತಂದೆ–ತಾಯಿ ಜೊತೆ ಅಬ್ದುಲ್ ವಾಸವಿದ್ದ. ಮನೆ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

‘ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ 2014ರಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದ ಅಬ್ದುಲ್, 2017ರಲ್ಲಿ ಸರ್ಕಾರಿ ಕೋಟಾದಡಿ ಎಂ.ಎಸ್ ವ್ಯಾಸಂಗಕ್ಕಾಗಿ ಅದೇ ಕಾಲೇಜಿಗೆ ಸೇರಿದ್ದ. ಇದೇ ಜುಲೈನಲ್ಲಿ ಅಂತಿಮ ಪರೀಕ್ಷೆಯನ್ನೂ ಬರೆದಿದ್ದ. ಕಾಲೇಜಿನ ಹೊರಗೆ ಆತನ ಚಟುವಟಿಕೆಗಳ ಬಗ್ಗೆ ನಮಗೆ ಗೊತ್ತಿರಲಿಲ್ಲ’ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಸಿಎಎ ಪ್ರತಿಭಟನೆ ವೇಳೆ ಸಂಚು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲೇ ಭಯೋತ್ಪಾದನಾ ದಾಳಿ ನಡೆಸಲು ಐಎಸ್‌ಕೆಪಿ ಸಂಚು ರೂಪಿಸಿತ್ತು. ಅದನ್ನು ಪತ್ತೆ ಹಚ್ಚಿದ್ದ ಎನ್‌ಐಎ ಅಧಿಕಾರಿಗಳು, ಪುಣೆಯ ಸಾದಿಯಾ ಅನ್ವರ್ ಹಾಗೂ ನಬೀಲ್ ಸಿದ್ಧಿಕಿ ಖತ್ರಿ ಸೇರಿದಂತೆ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು.

ಬಂಧಿತ ಆರೋಪಿಗಳ ಜೊತೆಯೂ ಅಬ್ದುಲ್ ರೆಹಮಾನ್ ನಂಟು ಹೊಂದಿದ್ದ. ಬಂಧಿತ ಆರೋಪಿಗಳು ನೀಡಿದ ಮಾಹಿತಿಯಂತೆ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಬ್ದುಲ್‌ನನ್ನು ಸೆರೆ ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT