ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರ ನಾಯಕನಾಗುವ ನೈತಿಕತೆ ವಿಜಯೇಂದ್ರಗೆ ಇದೆಯೇ?: ಯತ್ನಾಳ ಕಿಡಿ

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಕಿಡಿ
Last Updated 31 ಮಾರ್ಚ್ 2022, 17:41 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಲಿಂಗಾಯತ ಸಮುದಾಯದ ನಾಯಕ ನಾಗುವ ನೈತಿಕತೆ ಇದೆಯೇ?’ ಎಂದು ಶಾಸಕ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್‌ ಕಿಡಿಕಾರಿದರು.

ಅಖಿಲ ಭಾರತ ಪಂಚಮಸಾಲಿ, ಗೌಡ–ಮಲೇಗೌಡ–ದೀಕ್ಷಾ ಲಿಂಗಾಯತ ಮೀಸಲಾತಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ವಿಜಯೇಂದ್ರ ಈಗ ತುಮಕೂರು ಸಿದ್ಧಗಂಗಾ ಮಠದ ಮೂಲಕ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ಸಚಿವರಾದ ಸೋಮಣ್ಣ ಕಳೆದ 30–40 ವರ್ಷಗಳಿಂದ ಸಿದ್ಧಗಂಗಾ ಮಠಕ್ಕೆ ದುಡಿದಿದ್ದಾರೆ. ಈಗ ಮಠದ ಕಾರ್ಯಕ್ರಮಗಳಲ್ಲಿ ಸೋಮಣ್ಣ ಅವರೇ ಕಾಣಿಸುತ್ತಿಲ್ಲ.
ತುಮಕೂರು ಮಠದ ಬಳಿಕ ವಿಜಯೇಂದ್ರ ಸುತ್ತೂರು ಮಠಕ್ಕೆ ತೆರಳುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ವಿಜಯೇಂದ್ರ ಈಗ ಸಮುಯದಾಯದ ನಾಯಕರಾಗಲು ಹೊರಟಿದ್ದಾರೆ. ವಂಶಪಾರಂಪರ್ಯ ರಾಜಕಾರಣವನ್ನು ಅವರು ಮುಂದುವರಿಸುತ್ತಿದ್ದಾರೆ. ಮೊದಲು ನಾನು, ನಂತರ ನನ್ನ ಮಗ, ಮೊಮ್ಮಗ.ಆದರೆ, ಪಕ್ಷದಲ್ಲಿ ಈ ಪದ್ಧತಿ ಕಡಿಮೆಯಾಗುತ್ತಿದೆ’ ಎಂದರು.

‘ಕಳೆದ ವರ್ಷ ಪಂಚಮಸಾಲಿ ಸಮುದಾಯ ಮೀಸಲಾತಿಗಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಯತ್ನಗಳು ನಡೆದವು. ಕಾರ್ಯಕ್ರಮಕ್ಕೆ ಅರಮನೆ ಮೈದಾನವನ್ನು ಉಚಿತವಾಗಿ ನೀಡುವವರಿದ್ದರು. ಅದಕ್ಕೂ ಅಡ್ಡಿಪಡಿಸಲಾಯಿತು. ಕೊನೆಗೆ ₹25 ಲಕ್ಷ ಪಾವತಿಸಿ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಸಲಾಯಿತು’ ಎಂದರು.

‘ವಿಐಪಿ ಸ್ವಾಮೀಜಿಯೊಬ್ಬರು ತಮ್ಮ ಘನತೆಯನ್ನು ಮರೆತು ಒಬ್ಬರನ್ನು ಮುಖ್ಯಮಂತ್ರಿ ಮಾಡಲು ದೆಹಲಿಗೆ ಅಲೆದಾಡುತ್ತಿದ್ದಾರೆ. ಅವರಿಗೆ ಸಮುದಾಯದ ಬಗ್ಗೆ ಕಾಳಜಿ ಇಲ್ಲ' ಎಂದು
ವಚನಾನಂದ ಶ್ರೀಗಳ ಹೆಸರು ಹೇಳದೆಯೇ ಕಿಡಿಕಾರಿದರು.

’ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ಕಲ್ಪಿಸುವುದು ಸೇರಿದಂತೆ ಸಮಗ್ರವಾಗಿ ಮೀಸಲಾತಿ ಪರಿಷ್ಕರಿಸಿದರೆಪಂಚಮಸಾಲಿ ಸಮುದಾಯಕ್ಕೂ ಮೀಸಲಾತಿ ದೊರೆಯುತ್ತದೆ. ಮೀಸಲಾತಿ ಪಡೆಯುವ ವಿಷಯ ಈಗ ಕೊನೆಯ ಹಂತದಲ್ಲಿದೆ.ಎಲ್ಲ ಸಮಾಜಗಳಿಗೆ ಮೀಸಲಾತಿ ಕಲ್ಪಿಸಬೇಕು. 15 ದಿನಗಳ ಒಳಗೆ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಪಡೆಯುವುದಾಗಿಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಮೀಸಲಾತಿ ಕಲ್ಪಿಸದೆ ಇದ್ದರೆ ಮೇ ತಿಂಗಳಿಂದ ಮತ್ತೆಹೋರಾಟ ಆರಂಭವಾಗಲಿದೆ’ ಎಂದರು.

‘ಮೀಸಲಾತಿ ಘೋಷಿಸದಿದ್ದರೆ ಏಪ್ರಿಲ್‌ 21ರಿಂದ ಹೋರಾಟ’

‘ರಾಜ್ಯ ಸರ್ಕಾರ ಏ. 14ರಂದು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸದಿದ್ದರೆ ಏ.21ರಿಂದ ಕೂಡಲ ಸಂಗಮದಲ್ಲಿ ಅಂತಿಮ ಹೋರಾಟ ಆರಂಭಿಸಲಾಗುವುದು’ ಎಂದು ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

‘ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಶೀಘ್ರದಲ್ಲಿ ಪಡೆದು ಏ.14ರ ಅಂಬೇಡ್ಕರ್‌ ಜಯಂತಿಯಂದು ಮೀಸಲಾತಿ ಘೋಷಿಸಬೇಕು. ಇದು ಸರ್ಕಾರಕ್ಕೆ ಅಂತಿಮ ಗಡುವು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮುಖ್ಯಮಂತ್ರಿ ಅವರು ಮೀಸಲಾತಿ ಕಲ್ಪಿಸುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ಈಗ ಸ್ಪಷ್ಟ ನಿಲುವು ಹೊಂದಿದ್ದಾರೆ. ವಿವಿಧ ಸಮುದಾಯಗಳು ಸಹ ಮೀಸಲಾತಿ ಬಗ್ಗೆ ಬೇಡಿಕೆ ಮಂಡಿಸಿರುವುದರಿಂದ ಒಂದು ವಾರದಲ್ಲಿ ಮೀಸಲಾತಿಯನ್ನು ಸಮಗ್ರವಾಗಿ ಪರಿಷ್ಕರಿಸುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಸರ್ಕಾರ ಹಾಗೂ ಸಮುದಾಯದ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ 12 ಜನರಿರುವ ಸಮಿತಿ ರಚಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT