ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಹ್ಯಾಕಾಶ, ರಕ್ಷಣಾ ಉತ್ಪಾದನೆ ‘ನಂ 1’ ಗುರಿ!

ಹೊಸ ವೈಮಾನಿಕ, ರಕ್ಷಣಾ ನೀತಿಯಿಂದ ರಾಜ್ಯದಲ್ಲಿ ಹೆಚ್ಚಲಿವೆ ನವೋದ್ಯಮ
Last Updated 30 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ (ಐಟಿ– ಬಿಟಿ) ಮುಂಚೂಣಿಯಲ್ಲಿರುವ ಕರ್ನಾಟಕ ಮುಂದಿನ ಐದು ವರ್ಷಗಳಲ್ಲಿ ವೈಮಾನಿಕ ಮತ್ತು ರಕ್ಷಣಾ ಉದ್ಯಮ ಕ್ಷೇತ್ರದಲ್ಲೂ ದೇಶದಲ್ಲೇ ನಂ1 ಸ್ಥಾನಕ್ಕೇರುವ ಉದ್ದೇಶದಿಂದ ‘ಕರ್ನಾಟಕ ವೈಮಾನಿಕ ಮತ್ತು ರಕ್ಷಣಾ ನೀತಿ’ಯನ್ನು ರೂಪಿಸಿದೆ.

ಈ ಹೊಸ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ ಸುಮಾರು ₹45 ಸಾವಿರ ಕೋಟಿ ಹೂಡಿಕೆಯಾಗಲಿದ್ದು, 60 ಸಾವಿರಕ್ಕೂ ಹೆಚ್ಚು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಕ್ಷೇತ್ರದಲ್ಲಿ ಎಂಎಸ್‌ಎಂಇ ಜತೆಗೆ ದೊಡ್ಡ ಸಂಖ್ಯೆಯಲ್ಲಿ ನವೋದ್ಯಮಗಳೂ ಸ್ಥಾಪನೆಯಾಗಲಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಮೂಲಗಳು ತಿಳಿಸಿವೆ.

‘ಕರ್ನಾಟಕ ಈಗಾಗಲೇ ವೈಮಾನಿಕ ಮತ್ತು ರಕ್ಷಣಾ ವಲಯದ ರಫ್ತಿನಲ್ಲಿ ಶೇ 65 ಕ್ಕೂ ಹೆಚ್ಚು ಪಾಲು ಹೊಂದಿದೆ. ಇದನ್ನು ಶೇ 100 ಕ್ಕೆ ತಲುಪಿಸುವ ಗುರಿ ಸರ್ಕಾರದ್ದು. ‘ಆತ್ಮನಿರ್ಭರ್‌ ಭಾರತ್‌’ ಯೋಜನೆಯಡಿ ದೇಶೀಯ ಉತ್ಪಾದನೆಗೆ ಈ ನೀತಿ ಹೆಚ್ಚಿನ ಸಹಕಾರಿಯಾಗಲಿದೆ. ಅಲ್ಲದೆ, ಜಾಗತಿಕ ಹೂಡಿಕೆದಾರರೂ ಕರ್ನಾಟಕದಲ್ಲಿ ಬಂಡವಾಳ ಹೂಡುವ ಸಾಧ್ಯತೆ ಇದೆ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದ್ದಾರೆ.

‘ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಉದ್ಯಮಿಗಳಿಗೆ ಉತ್ತೇಜನ ನೀಡಲು ಸಹಾಯಧನ, ವಿದ್ಯುತ್‌ ತೆರಿಗೆ ವಿನಾಯಿತಿ, ಮುದ್ರಾಂಕ ಶುಲ್ಕ ರಿಯಾಯಿತಿ ಮತ್ತು ನೋಂದಣಿ ಶುಲ್ಕದಲ್ಲೂ ರಿಯಾಯಿತಿಗಳನ್ನು ನೀಡಲಾಗುವುದು’ ಎಂದು ರಾಜ್ಯ ಸರ್ಕಾರ ಆಗಸ್ಟ್‌ 26 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ದೇಶದ ಶೇ 25 ರಷ್ಟು ವಿಮಾನ ಮತ್ತು ಬಾಹ್ಯಾಕಾಶ ನೌಕೆಗಳ ನಿರ್ಮಾಣಕ್ಕ ಸಂಬಂಧಿಸಿದ ಉದ್ಯಮಗಳು ರಾಜ್ಯದಲ್ಲಿಯೇ ನೆಲೆಗೊಂಡಿವೆ. ರಕ್ಷಣಾ ಸೇವೆಗಳಿಗಾಗಿ ತಯಾರಿಸುವ ಎಲ್ಲ ರೀತಿಯ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಉತ್ಪಾದನೆಯಲ್ಲಿ ಶೇ 67 ರಷ್ಟು ಭಾಗ ಕರ್ನಾಟಕದಲ್ಲೇ ಆಗುತ್ತದೆ. ಸುಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಉತ್ತೇಜಿಸಲು, ಬಾಹ್ಯಾಕಾಶ ಸಂಬಂಧಿತ ಅಪ್ಲಿಕೇಶನ್‌ಗಳಿಗಾಗಿ ಉತ್ಪಾದನಾ ಅಭಿವೃದ್ಧಿ ಉತ್ತೇಜಿಸಲು, ವಿಶ್ವ ದರ್ಜೆಯ ನುರಿತ ಮಾನವಸಂಪನ್ಮೂಲ ಅಭಿವೃದ್ಧಿಪಡಿಸಲಾಗುವುದು ಎಂದೂ ಸರ್ಕಾರ ನೀತಿಯಲ್ಲಿ ತಿಳಿಸಿದೆ.

ಹೊಸ ನೀತಿಯ ಪ್ರತಿಪಾದನೆ

* ರಾಜ್ಯದಲ್ಲಿ 2,000 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಗಾತ್ರದ (ವೈಮಾನಿಕ ಮತ್ತು ರಕ್ಷಣಾ) ಉದ್ಯಮಗಳಿವೆ. ದೇಶದ ಶೇ 70 ರಷ್ಟು ಪೂರೈಕೆದಾರರ ನೆಲೆಯೊಂದಿಗೆ ಏರೋಸ್ಪೇಸ್‌ನಲ್ಲಿ ಪರಿಣತಿಯನ್ನು ಹೊಂದಿವೆ. ಇವು ಸಾರ್ವಜನಿಕ ವಲಯದ ಉದ್ಯಮಗಳಿಗೆ ಉಪಗುತ್ತಿಗೆ ಕೆಲಸವನ್ನು ಮಾಡುವ ಪ್ರಮುಖ ನೆಲೆಯಾಗಿವೆ.

* ಬೆಂಗಳೂರು ಭಾರತದ ‘ಸಿಲಿಕಾನ್‌ ವ್ಯಾಲಿ’ ಎಂದು ಗುರುತಿಸಲ್ಪಟ್ಟಿದೆ. ಐಟಿ ಮತ್ತು ಐಟಿ ಸಂಬಂಧಿತ ಸೇವೆಗಳು ಹಾಗೂ ಎಲೆಕ್ಟ್ರಾನಿಕ್ಸ್‌ ಹಾರ್ಡ್‌ವೇರ್‌ನಲ್ಲಿ ಹಲವಾರು ಉನ್ನತ ಕಂಪನಿಗಳನ್ನು ಹೊಂದಿದೆ. ಅವುಗಳಲ್ಲಿ ಹಲವು ಏರೋಸ್ಪೇಸ್‌ ವಲಯಕ್ಕೆ ಪೂರೈಕೆಯ ಸರಪಳಿಯ ಭಾಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT