ಬುಧವಾರ, ಅಕ್ಟೋಬರ್ 20, 2021
28 °C
ಖಾಸಗಿ ಮಸೂದೆ ಸಂವಿಧಾನಬಾಹಿರ ಎಂದ ಅಡ್ವೊಕೇಟ್‌ ಜನರಲ್‌

ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆ ಕಡ್ಡಾಯ ಅಸಾಧ್ಯ: ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುವುದನ್ನು ಕಡ್ಡಾಯಗೊಳಿಸಲು ‘ಕರ್ನಾಟಕ ಶಿಕ್ಷಣ ಕಾಯ್ದೆ–1983’ಕ್ಕೆ ತಿದ್ದುಪಡಿ ತರಲು ಖಾಸಗಿ ಮಸೂದೆ ಮಂಡಿಸಲು ವಿಧಾನ ಪರಿಷತ್‌ ಸದಸ್ಯ ಜಿ. ರಘು ಆಚಾರ್‌ ಸಲ್ಲಿಸಿದ್ದ ಪ್ರಸ್ತಾವವನ್ನು ಖಾಸಗಿ ವಿಧೇಯಕಗಳು ಮತ್ತು ನಿರ್ಣಯಗಳ ಸಮಿತಿ ಮುಕ್ತಾಯಗೊಳಿಸಿದೆ.

ಸಮಿತಿಯ ಅಧ್ಯಕ್ಷರೂ ಆಗಿರುವ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ತಮ್ಮ ವರದಿಯಲ್ಲಿ ಈ ಕುರಿತು ಸದನಕ್ಕೆ ಮಾಹಿತಿ ನೀಡಿದರು. ‘ಶಿಕ್ಷಣದ ಕುರಿತು ಈ ರೀತಿ ಕಾಯ್ದೆ ರೂಪಿಸುವುದು ಸಂವಿಧಾನಬಾಹಿರ ನಡೆಯಾಗುತ್ತದೆ’ ಎಂದು  ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ನೀಡಿದ್ದಾರೆ. ಅದನ್ನು ಆಧರಿಸಿ ತೀರ್ಮಾನ ಕೈಗೊಂಡಿರುವ ಸಮಿತಿ, ‘ಈ ಮಸೂದೆಯನ್ನು ಮಂಡಿಸುವುದು ನ್ಯಾಯಸಮ್ಮತವಲ್ಲ’ ಎಂದು ಹೇಳಿದೆ.

‘ಸಾರ್ವಜನಿಕ ನೌಕರ’ ಎಂದರೆ ಸರ್ಕಾರಿ ನೌಕರರ ಜತೆಗೆ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೆ ಎಲ್ಲರೂ ಸೇರುತ್ತಾರೆ. ಹಾಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಯೂ ಈ ವ್ಯಾಪ್ತಿಗೆ ಬರುತ್ತಾರೆ ಎಂದು ಅಡ್ವೊಕೇಟ್‌ ಜನರಲ್ ಹೇಳಿದ್ದರು.

‘ಸಾರ್ವಜನಿಕ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದಬೇಕು ಎಂದು ಕಾನೂನಿಗೆ ತಿದ್ದುಪಡಿ ತರಬೇಕೆಂಬ ಪ್ರಸ್ತಾವದ ಕುರಿತು ಸಮಿತಿಯು ಅಡ್ವೊಕೇಟ್‌ ಜನರಲ್‌ ಹಾಗೂ ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಂದ ಅಭಿಪ್ರಾಯ ಪಡೆದಿದೆ. ಈ ರೀತಿಯ ತಿದ್ದುಪಡಿಯು ಸಂವಿಧಾನದಲ್ಲಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕುಗಳಿಗೆ ವಿರುದ್ಧವಾದುದು ಎಂಬ ಅಭಿಪ್ರಾಯವನ್ನು ಅಡ್ವೊಕೇಟ್‌ ಜನರಲ್‌ ನೀಡಿದ್ದಾರೆ’ ಎಂಬ ಉಲ್ಲೇಖ ಸಮಿತಿಯ ವರದಿಯಲ್ಲಿದೆ.

ಸುಪ್ರೀಂಕೋರ್ಟ್‌ ನೀಡಿರುವ ತೀರ್ಪುಗಳನ್ನೂ ಸಮಿತಿ ಅಧ್ಯಯನ ಮಾಡಿದೆ. ‘ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ಪ್ರವೇಶ ಪಡೆಯಬೇಕು ಎಂಬುದು ಸಂವಿಧಾನ ಬಾಹಿರ ತೀರ್ಮಾನವಾಗುತ್ತದೆ’ ಎಂದು ನ್ಯಾಯಾಲಯ ಹೇಳಿರುವುದನ್ನು ಗಮನಿಸಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಕಾರ್ಯದರ್ಶಿಯವರ ಇದೇ ರೀತಿಯ ಅಭಿಪ್ರಾಯ ನೀಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಈ ತಿದ್ದುಪಡಿ ಮಸೂದೆಯು ಸಂವಿಧಾನದ ಉಲ್ಲಂಘನೆಯಾಗುತ್ತದೆ. ಮೂಲಭೂತ ಹಕ್ಕಿಗೆ ವಿರುದ್ಧವಾದ ಅಂಶಗಳನ್ನೂ ಒಳಗೊಂಡಿದೆ. ಸಂವಿಧಾನದ 19 ಮತ್ತು 21ನೇ ವಿಧಿಗಳಿಗೆ ವಿರುದ್ಧವಾಗಿರುವ ಈ ಖಾಸಗಿ ಮಸೂದೆಯನ್ನು ಮಂಡಿಸುವುದು ಕಾನೂನು ಸಮ್ಮತವಾಗುವುದಿಲ್ಲ’ ಎಂಬ ಅಭಿಪ್ರಾಯಕ್ಕೆ ಬಂದಿರುವ ಸಮಿತಿ, ಪ್ರಸ್ತಾವವನ್ನು ಮುಕ್ತಾಯಗೊಳಿಸಿದೆ.

ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಪೂರಕವಾಗಿ ಖಾಸಗಿ ಮಸೂದೆ ಮಂಡಿಸಲು ಅವಕಾಶ ಕೋರಿ ರಘು ಆಚಾರ್‌ 2020ರ ಸೆಪ್ಟೆಂಬರ್‌ 8ರಂದು ಪ್ರಸ್ತಾವ ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು