ಕಲ್ಯಾಣ ರಥಯಾತ್ರೆಗೆ ಜನಾರ್ದನ ರೆಡ್ಡಿ ಚಾಲನೆ

ಗಂಗಾವತಿ (ಕೊಪ್ಪಳ ಜಿಲ್ಲೆ): ‘ನಾನು ಒಮ್ಮೆ ಸಂಕಲ್ಪ ಮಾಡಿದರೆ, ಯಾವುದೇ ಕಾರಣಕ್ಕೂ ನಿರ್ಧಾರ ಬದಲಿಸಲ್ಲ. ಜೀವ ಹೋದರೂ ಕೊಟ್ಟ ಮಾತು ತಪ್ಪಲ್ಲ. ಬಿಟ್ಟ ಬಾಣ, ಮುಂದಿಟ್ಟ ಹೆಜ್ಜೆ ಹಿಂಪಡೆಯುವ ಮಾತೇ ಇಲ್ಲ’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸಂಸ್ಥಾಪಕ ಜನಾರ್ದನರೆಡ್ಡಿ ತಿಳಿಸಿದರು.
ತಾಲ್ಲೂಕಿನ ಆನೆಗೊಂದಿ ಗ್ರಾಮದ ರಂಗನಾಥ ದೇವಸ್ಥಾನದ ಬಳಿ ಮಂಗಳವಾರ ‘ಕೆಆರ್‌ಪಿಪಿ ಕಲ್ಯಾಣ ರಥಯಾತ್ರೆ’ ವಾಹನಕ್ಕೆ ಪತ್ನಿ ಲಕ್ಷ್ಮಿ ಅರುಣಾ ಮತ್ತು ಪುತ್ರಿ ಬ್ರಹ್ಮಿಣಿ ರಾಜೀವ್ ರೆಡ್ಡಿ ಅವರ ಜೊತೆ ಚಾಲನೆ ನೀಡಿ ಮಾತನಾಡಿದ ಅವರು, ‘ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ರಾಷ್ಟ್ರದಲ್ಲಿ ಸದ್ದು ಮಾಡುತ್ತಿವೆ. ಕೆಆರ್‌ಪಿಪಿಗೂ ಜನ ಬೆಂಬಲ ಸಿಗುತ್ತಿದ್ದು, ಈ ಬಾರಿ ದೇಶದಲ್ಲಿ ಇತಿಹಾಸ ಸೃಷ್ಟಿಸಲಿದೆ’ ಎಂದರು.
‘ಕಲ್ಯಾಣ ಕರ್ನಾಟಕ ಪ್ರದೇಶದ ಶೋಷಿತರ, ದೀನ-ದಲಿತರ, ಹಿಂದುಳಿದ ವರ್ಗದವರ ಏಳ್ಗೆಗೆ ಕೆಆರ್‌ಪಿಪಿ ಅಸ್ತಿತ್ವಕ್ಕೆ ಬಂದಿದೆ ಹೊರತು ಇನ್ನೊಬ್ಬರ ವಿರುದ್ಧ ಸೇಡು ತೀರಿಸಿಕೊಳ್ಳಲು ಅಲ್ಲ’ ಎಂದರು.
‘ಗಂಗಾವತಿಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವೆ. ₹ 5 ಸಾವಿರ ಕೋಟಿ ವೆಚ್ಚದ ಯೋಜನೆ ಅನುಷ್ಠಾನ, ಅಷ್ಠಪಥ ರಸ್ತೆ ನಿರ್ಮಾಣದ ಬಗ್ಗೆ ಚಿಂತನೆಯಿದೆ. ಜನರ ಅಹಾವಲು ಆಲಿಸುವೆ. ಬೇಡಿಕೆಗಳನ್ನು ಈಡೇರಿಸುವೆ’ ಎಂದರು.
ಲಕ್ಷ್ಮಿ ಅರುಣಾ ಮತ್ತು ಬ್ರಹ್ಮಿಣಿ ರಾಜೀವ್ ರೆಡ್ಡಿ ಮಾತನಾಡಿದರು. ‘ಬಸವಣ್ಣನವರ ತತ್ವ ಸಿದ್ಧಾಂತ ಆಧಾರದ ಮೇಲೆ ಸ್ಥಾಪಿತ ಕೆಆರ್‌ಪಿಪಿ ಮಹಾವೃಕ್ಷವಾಗಿ ಬೆಳೆಯಲು ಜನರು ಬೇರುಗಳಾಗಿ ಶಕ್ತಿ ತುಂಬ ಬೇಕು. ರೆಡ್ಡಿ ಸಾಮ್ರಾಜ್ಯ ಈಗ ಬಳ್ಳಾರಿಗೆ ಸೀಮಿತವಾಗಿಲ್ಲ. ಇಡೀ ಕಲ್ಯಾಣ ಕರ್ನಾಟಕ ತುಂಬ ವ್ಯಾಪಿಸಿದೆ’ ಎಂದು ಅವರು ಹೇಳಿದರು.
ರಥಯಾತ್ರೆಗೂ ಮುನ್ನ ಮೂವರು ಪಂಪಾಸರೋವರಕ್ಕೆ ಭೇಟಿ ನೀಡಿದರು. ವಿಜಯಲಕ್ಷ್ಮಿ, ಮಹಿಷಾಸುರ ಮರ್ದಿನಿ, ವಿದ್ಯಾರಣ್ಯ, ಪರಮಶಿವ ದೇವರಿಗೆ ಪೂಜೆ ಸಲ್ಲಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.