ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಟ್ವೀಟ್‌ಗಾಗಿ ನಿಮ್ಮ ಇಡೀ ಖಾತೆಯೇ ಡಿಲೀಟ್‌ ಆಗಬೇಕು: ತೇಜಸ್ವಿಗೆ ಜೆಡಿಎಸ್

ಹೆಸರು ಹೇಳದೇ ಸಂಸದ ತೇಜಸ್ವಿ ಸೂರ್ಯಗೆ ತಿವಿದ ಜನತಾದಳ
Last Updated 13 ಮೇ 2021, 9:44 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಕ್ಕೆ ಆಮ್ಲಜನಕ ಪೂರೈಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಟ್ವೀಟ್‌ ಮಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಜೆಡಿಎಸ್‌ ಪಕ್ಷವು ತಿರುಗೇಟು ನೀಡಿದೆ.

ಈ ಬಗ್ಗೆ ಗುರುವಾರ ಸರಣಿ ಟ್ವೀಟ್‌ ಮಾಡಿರುವ ಜೆಡಿಎಸ್‌, 'ಕನ್ನಡಿಗರಿಗೆ ಆಗುತ್ತಿರುವ ತಾರತಮ್ಯವನ್ನು ಪ್ರಶ್ನೆ ಮಾಡಿ ಕುಮಾರಸ್ವಾಮಿ ಅವರು ಮಾಡಿದ ಟ್ವೀಟ್‌ ಅನ್ನು ಸುಳ್ಳು ಎಂದಿರುವ ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದರು ಆ ಟ್ವೀಟ್‌ಗಳನ್ನು ತೆಗೆದುಹಾಕಬೇಕು ಎಂದಿದ್ದಾರೆ. ಸಂಸದರೇ, ಹಾಗೊಂದು ವೇಳೆ ಸುಳ್ಳಿನ ಟ್ವೀಟ್‌ ತೆಗೆದುಹಾಕುವುದಿದ್ದರೆ ನಿಮ್ಮ ಇಡೀ ಟ್ವಿಟರ್‌ ಖಾತೆಯನ್ನೇ ತೆಗೆದುಹಾಕಬೇಕು' ಎಂದು ವಾಗ್ದಾಳಿ ನಡೆಸಿದೆ.

'ಚುನಾವಣೆಗಳಲ್ಲಿ ನೀವು ಹೇಳಿದ ಸುಳ್ಳುಗಳು, ಕೊಟ್ಟ ಆಶ್ವಾಸನೆ, ಆತ್ಮರತಿ, ಕೋಮು ಭಾವನೆ ಕೆರಳಿಸಲು ನೀವು ಆಡಿದ ಮಾತುಗಳು, ತಿರುಚಿದ ಇತಿಹಾಸಗಳು ಒಂದೇ ಎರಡೇ? ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದರೇ, ನಿಮ್ಮ ಇಡೀ ಟ್ವಿಟರ್‌ ಖಾತೆ ಇಂಥ ಸುಳ್ಳುಗಳಿಂದ ತುಂಬಿದೆ. ಹಾಗಾದರೆ ಡಿಲೀಟ್‌ ಆಗಬೇಕಾದ್ದು ನಿಮ್ಮ ಟ್ವೀಟ್‌ಗಳೋ ಕುಮಾರಸ್ವಾಮಿ ಅವರದ್ದೋ?' ಎಂದು ಜೆಡಿಎಸ್‌ ಪ್ರಶ್ನಿಸಿದೆ.

'ಕುಮಾರಸ್ವಾಮಿ ಅವರು ಇಂದು ಮಾಡಿರುವ ಟ್ವೀಟ್‌ಗೆ ಪ್ರೆಸ್‌ ಇನ್‌ಫಾರ್ಮೇಶನ್‌ ಬ್ಯೂರೋ ನೀಡಿದ ಮಾಹಿತಿಯೇ ಆಧಾರ. ಅಲ್ಲಿರುವ ಅಂಶಗಳನ್ನು ಬಿಟ್ಟು ಒಂದಿನಿತೂ ಬೇರೆ ಅಂಶಗಳನ್ನು ಕುಮಾರಸ್ವಾಮಿ ಅವರು ಪ್ರಸ್ತಾಪಿಸಿಲ್ಲ. ಅಲ್ಲದೆ, ಇಂದು ನೀವು ನೀಡಿರುವ ಮಾಹಿತಿ ಅಸ್ಪಷ್ಟವಾಗಿದೆ. ನಿಮ್ಮ ಟ್ವೀಟ್‌ನಲ್ಲಿರುವ ಅಂಕಿ ಅಂಶಗಳನ್ನು ಕನ್ನಡಿಗರಿಗೆ ಕನ್ನಡದಲ್ಲಿ ವಿವರಿಸಿ ಹೇಳಿ' ಎಂದು ಜೆಡಿಎಸ್‌ ಒತ್ತಾಯಿಸಿದೆ.

'ಬಿಜೆಪಿಯ ಮರ್ಜಿಯಿಂದ ನೀವೂ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದು ಗೊತ್ತಿರುವ ವಿಚಾರ. ಪಕ್ಷಕ್ಕೆ ಋಣ ಸಂದಾಯ ಮಾಡುವುದಕ್ಕಾಗಿ ಕನ್ನಡಿಗರನ್ನೇ ಮರೆಯುವುದು ಸರಿಯಲ್ಲ ಸಂಸದರೇ. ನೀವು ಬಿಜೆಪಿ ಸಂಸದರಾಗುವುದಕ್ಕೂ ಮೊದಲು ಕನ್ನಡಿಗ. ಅದನ್ನು ಮರೆಯಬೇಡಿ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತಾಡಿ. ನಿಜವಾದ ಕನ್ನಡಿಗ ಎನಿಸಿಕೊಳ್ಳಿ' ಎಂದೂ ಜೆಡಿಎಸ್‌ ಸಲಹೆ ನೀಡಿದೆ.

ಕರ್ನಾಟಕದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದ್ದು, ಕರ್ನಾಟಕಕ್ಕೆ 1,200 ಟನ್‌ ಆಮ್ಲಜನಕ ಪೂರೈಸುವಂತೆ ಕೋರ್ಟ್‌ ಈಗಾಗಲೇ ಆದೇಶಿಸಿದೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಕೇವಲ 120 ಟನ್‌ ಆಮ್ಲಜನಕ ಮಾತ್ರ ಪೂರೈಕೆಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, 'ಈ ಒಕ್ಕೂಟದಲ್ಲಿ ಕನ್ನಡಿಗರೇನು ತಬ್ಬಲಿ ಮಕ್ಕಳೇ?' ಎಂದಿದ್ದರು.

ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ಕರ್ನಾಟಕಕ್ಕಿಂತ ಉತ್ತರ ಪ್ರದೇಶಕ್ಕೆ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗಿದೆ. ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸರ್ಕಾರವೇ ನೀಡಿರುವ ಅಂಕಿ ಅಂಶಗಳಿಂದ ಬಯಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.

ಕುಮಾರಸ್ವಾಮಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಸಂಸದ ತೇಜಸ್ವಿ ಸೂರ್ಯ, 'ಕರ್ನಾಟಕ್ಕೆ ಒದಗಿಸಲಾಗುವ 1015 ಮೆಟ್ರಿಕ್‌ ಟನ್‌ ಆಕ್ಸಿಜನ್ ಕುರಿತ ಅದೇಶ ಪತ್ರಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದು, ಇದನ್ನು ನೋಡಿದ ನಂತರ ನಿಮ್ಮ ಟ್ವೀಟ್ ಡಿಲೀಟ್ ಮಾಡುತ್ತೀರಿ ಎಂದು ನಂಬಿದ್ದೇನೆ. ಕೋವಿಡ್ ನಂತಹ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ತಪ್ಪು ಮಾಹಿತಿಯಿಂದ ಜನರನ್ನು ದಾರಿ ತಪ್ಪಿಸುವುವುದನ್ನು ಇನ್ನಾದರೂ ನಿಲ್ಲಿಸಿ ಎಂದು ವಿನಂತಿಸುತ್ತೇನೆ' ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT