ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸಾ: ಪರಿಸರ ಅನುಮತಿ ಕೋರಿ ದೆಹಲಿಗೆ- ಸಚಿವ ರಮೇಶ ಜಾರಕಿಹೊಳಿ

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ
Last Updated 4 ಸೆಪ್ಟೆಂಬರ್ 2020, 8:42 IST
ಅಕ್ಷರ ಗಾತ್ರ

ಬೆಳಗಾವಿ: ‘ಕಳಸಾ–ಬಂಡೂರಿ ನಾಲಾ ತಿರುವು ಯೋಜನೆಗೆ ಸಂಬಂಧಿಸಿದಂತೆ ಪರಿಸರ ಅನುಮತಿ ಕೋರಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರೊಂದಿಗೆ ಚರ್ಚಿಸುವುದಕ್ಕಾಗಿ ಸೆ. 13 ಅಥವಾ 14ರಂದು ದೆಹಲಿಗೆ ಭೇಟಿ ನೀಡುತ್ತಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಇಲ್ಲಿ ಶುಕ್ರವಾರ ಅಧಿಕಾರಿಗಳ ಸಭೆಯ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಕೇಂದ್ರವು ಹಿಂದೆ ಪರಿಸರ ಅನುಮತಿ ನೀಡಿತ್ತು. ಆದರೆ, ಅದು ಲ್ಯಾಪ್ಸ್‌ ಆಗಿದೆ. ಈ ನಡುವೆ, ಯೋಜನೆ ಕುರಿತಂತೆ ಹೊಸದಾಗಿ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಲಾಗಿತ್ತು. ಹೀಗಾಗಿ, ಮತ್ತೆ ಅನುಮತಿ ಪಡೆಯಬೇಕಾಗಿದೆ. ಸಚಿವಾಲಯದ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸುವೆ. ಮಹದಾಯಿ ನ್ಯಾಯಮಂಡಳಿಯ ತೀರ್ಪಿನ ಪ್ರಕಾರ ನೀರು ಪಡೆದುಕೊಳ್ಳಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದರು.

‘ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳು ಮತ್ತು ಬಳ್ಳಾರಿ ನಾಲಾ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವುದಕ್ಕಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು. ಇದಾದ ಬಳಿಕ ಕೃಷ್ಣಾ ನದಿ ಅತಿಕ್ರಮಣದ ಸಮೀಕ್ಷೆಗೆ ಮುಂದಾಗುತ್ತೇವೆ’ ಎಂದು ತಿಳಿಸಿದರು.

‘ನದಿಗಳ ಒತ್ತುವರಿಯಿಂದಲೂ ನೆರೆ ಉಂಟಾಗುತ್ತಿರಬಹುದು. ಇದು ವರದಿಯಿಂದ ಸ್ಪಷ್ಟವಾಗಬೇಕಾಗಿದೆ. ಹೀಗಾಗಿ, ನೆರೆ ಬಾಧಿತವಾಗುವ ಹಳ್ಳಿಗಳ ಸ್ಥಳಾಂತರದ ಬಗ್ಗೆ ಸಮೀಕ್ಷಾ ವರದಿ ಬಂದ ನಂತರವಷ್ಟೇ ನಿರ್ಧರಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಪೀರನವಾಡಿಯಲ್ಲಿ ಹಾಕಿರುವ ಫಲಕದಲ್ಲಿ ಕನ್ನಡ ಕಡೆಗಣಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲವೂ ನಮ್ಮ ಭಾಷೆಗಳೆ. ಹಾಗೇನಾದರೂ ವಿವಾದವಿದ್ದಲ್ಲಿ ಮುಖಂಡರೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು’ ಎಂದು ಹೇಳಿದರು.

‘ರಾಯಣ್ಣ ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ಹೋರಾಟಗಾರರು ಹಾ‌ಗೂ ಮರಾಠಿ ಭಾಷಿಗರ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳನ್ನೂ ವಾಪಸ್ ಪಡೆಯಲಾಗುವುದು. ಇದು ಜಿಲ್ಲಾ ಹಂತದಲ್ಲೇ ಬಗೆಹರಿಸಬಹುದಾದ ಸಮಸ್ಯೆಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT