ಗುರುವಾರ , ಅಕ್ಟೋಬರ್ 22, 2020
22 °C
ಸಿದ್ದರಾಮಯ್ಯ ಟೀಕೆ l ಹೈಕಮಾಂಡ್‌ನಿಂದ ಅಭ್ಯರ್ಥಿಗಳ ತೀರ್ಮಾನ---– ಡಿಕೆಶಿ

ಜೆಡಿಎಸ್‌ ರಾಜಕೀಯ ಪಕ್ಷವೇ ಅಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜೆಡಿಎಸ್‌ನವರು ಇನ್ನೊಬ್ಬರ ಹೆಗಲ ಮೇಲೆ ಕುಳಿತುಕೊಂಡು ಅಧಿಕಾರಕ್ಕೆ ಬರುವವರು. ಅವರು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವವರಲ್ಲ. ನನ್ನ ಪ್ರಕಾರ ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್ ಮುಖಂಡ ಹನುಮಂತರಾಯಪ್ಪ, ಆರ್‌.ಆರ್‌. ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿರುವ ಅವರ ಮಗಳು ಕುಸುಮಾ ಹಾಗೂ ಹಲವು ಜನ ವಕೀಲರು ಸೇರಿದಂತೆ ಶಿರಾ ಕ್ಷೇತ್ರದ ನೂರಕ್ಕೂ ಹೆಚ್ಚು ಸ್ಥಳೀಯ ನಾಯಕರನ್ನು ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಅವರು ಮಾತನಾಡಿದರು.

‘ಶಿರಾದಲ್ಲಿ ಕುಮಾರಸ್ವಾಮಿ ಯಾಕೆ ಕಣ್ಣೀರು ಹಾಕಿದ್ರೊ ನನಗೆ ಗೊತ್ತಾಗಲಿಲ್ಲ‌. ದೇವೇಗೌಡರ ಕಾಲದಿಂದಲೂ ಈ ನಾಟಕ ನಡೆದುಕೊಂಡು ಬಂದಿದೆ. ಜನರು ಇದಕ್ಕೆ ಮರುಳಾಗಬಾರದು. ಜೆಡಿಎಸ್‌ನವರು ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ. ಕಾರ್ಯಕರ್ತರು ಈ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದರು.‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಶಿರಾ ಮತ್ತು ಆರ್‌.ಆರ್‌. ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿಕೊಡುತ್ತೇವೆ. ಅಂತಿಮ ತೀರ್ಮಾನವನ್ನು ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುತ್ತಾರೆ’ ಎಂದರು.

‘ಶಿರಾದಲ್ಲಿ ಕಳೆದ ಚುನಾವಣೆಯಲ್ಲಿ ಟಿ.ಬಿ.ಜಯಚಂದ್ರ ಅವರು 10 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಈ ಬಾರಿ ಇಡೀ ಜಿಲ್ಲೆ ಒಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸಲಿದೆ. ಶಿರಾ ಕ್ಷೇತ್ರದ ಪ್ರಮುಖ ನಾಯಕರು ಪಕ್ಷದ ಸಿದ್ಧಾಂತ ಹಾಗೂ ನಾಯಕತ್ವ ನಂಬಿ ಪಕ್ಷಕ್ಕೆ ಬಂದಿದ್ದಾರೆ’ ಎಂದು ಹೇಳಿದರು.

‘ಸರ್ಕಾರ ನಮ್ಮದೇ ಇರುವುದರಿಂದ ಉಪಚುನಾವಣೆ ನಾವೇ ಗೆಲ್ಲುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿರುವ ಸಮಯದಲ್ಲಿ ನೂರಾರು ಸ್ಥಳೀಯ ನಾಯಕರು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸುತ್ತಿರುವುದು ಪ್ರಮುಖ ಬೆಳವಣಿಗೆ. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷ ಯಾವುದೇ ಕುತಂತ್ರ ಮಾಡಿದರೂ ಜಯ ನಮ್ಮದೇ. ಟಿ.ಬಿ ಜಯಚಂದ್ರ, ಜಿ. ಪರಮೇಶ್ವರ, ರಾಜಣ್ಣ ಮತ್ತು ಚಂದ್ರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ನಾನು, ಸಿದ್ದರಾಮಯ್ಯನವರು ಮತ್ತು ಪಕ್ಷದ ಇತರ ಹಿರಿಯ ನಾಯಕರು ಜವಾಬ್ದಾರಿ ಹೊರುತ್ತೇವೆ’ ಎಂದರು.

ಕಳೆದ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಗದ ಕಾರಣಕ್ಕೆ ಹನುಮಂತರಾಯಪ್ಪ ಅವರು ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್ ಸೇರಿದ್ದರು. ಇದೀಗ, ಅವರು ಮಗಳನ್ನು ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿಸಲು ಮುಂದಾಗಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ‘ಬಿ’ ಫಾರಂ: ವಿಧಾನಪರಿಷತ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾದ, ಈಶಾನ್ಯ ಶಿಕ್ಷಕರ ಕ್ಷೇತ್ರದ ಶರಣಪ್ಪ ಮಟ್ಟೂರು, ಬೆಂಗಳೂರು ಶಿಕ್ಷಕರ ಕ್ಷೇತ್ರದ ಪ್ರವೀಣ್ ಪೀಟರ್‌, ಪಶ್ಚಿಮ ಪದವೀಧರರ ಕ್ಷೇತ್ರದ ಆರ್.ಎಂ. ಕುಬೇರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾನುವಾರ ‘ಬಿ’ ಫಾರಂ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು