ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹500 ಕೋಟಿ ಸಂಪಾದಿಸುವ ಐಎಎಸ್‌ ಅಧಿಕಾರಿಗಳು

ಸದನದಲ್ಲಿ ಶಾಸಕ ಸಾ.ರಾ.ಮಹೇಶ್‌ ವಾಗ್ದಾಳಿ
Last Updated 16 ಸೆಪ್ಟೆಂಬರ್ 2021, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಕೆಲವು ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು ₹500 ಕೋಟಿ ಆಸ್ತಿ ಸಂ‍ಪಾದಿಸುತ್ತಾರೆ. ಆಂಧ್ರ ಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಜಾಗ ಖರೀದಿಸುತ್ತಾರೆ. ಸೇವೆಯಿಂದ ನಿವೃತ್ತರಾದ ಕೂಡಲೇ ನಮ್ಮ ವಿರುದ್ಧವೇ ಚುನಾವಣೆಗೆ ನಿಲ್ಲುತ್ತಾರೆ’ ಎಂದು ಜೆಡಿಎಸ್‌ನ ಸಾ.ರಾ.ಮಹೇಶ್‌ ವಾಗ್ದಾಳಿ ನಡೆಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ವಿಧಾನಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸಾ.ರಾ.ಮಹೇಶ್‌, ‘ನಾವು ₹10 ದುಡ್ಡು ಹೊಡೆದರೂ ಅದನ್ನು ಚುನಾವಣೆ ವೇಳೆ ಜನರಿಗೆ ಕೊಡುತ್ತೇವೆ. ಅವರು ಯಾರಿಗೆ ಕೊಡುತ್ತಾರೆ’ ಎಂದು ಪ್ರಶ್ನಿಸಿದರು.

‘ಸ್ವಚ್ಛ ಮೈಸೂರು ಹೆಸರಿನಲ್ಲಿ ₹ 4 ಬ್ಯಾಗ್‌ ಅನ್ನು ₹69ಕ್ಕೆ ಖರೀದಿ ಮಾಡಲಾಯಿತು. ಈ ಯೋಜನೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಕಾಲದಲ್ಲಿ ₹ 6.5 ಕೋಟಿ ಅಕ್ರಮ ನಡೆದಿದೆ. ಈ ಬಗ್ಗೆ ನಾವು ಸತ್ಯ ಹೇಳಿದರೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ನಮ್ಮ ವಿರುದ್ಧವೇ ಅಭಿಯಾನ ನಡೆಯುತ್ತದೆ. 20ರಿಂದ 40 ವಯಸ್ಸಿನ ಕೆಲವು ಮಹಿಳಾ ಅಧಿಕಾರಿಗಳ ವಿರುದ್ಧ ನಾವು ಧ್ವನಿ ಎತ್ತುವಂತೆಯೇ ಇಲ್ಲ’ ಎಂದು ಅವರು ಹೇಳಿದರು.

‘ಸಚಿವರ ಮನೆಗಳ ನವೀಕರಣಕ್ಕೆ ₹5 ಲಕ್ಷವನ್ನು ಸರ್ಕಾರ ಕೊಡುತ್ತದೆ. ಜಿಲ್ಲಾಧಿಕಾರಿಯ ಮನೆ ನವೀಕರಣಕ್ಕೆ ₹50 ಲಕ್ಷ ಕೊಡಲಾಗಿದೆ. ಅವರು 5 ಎಕರೆ ಜಾಗದ ಮನೆಯಲ್ಲಿ ವಾಸಿಸುತ್ತಾರೆ. ಅಲ್ಲಿಗೆ ಜನರು ಹೋಗಲು ಸಾಧ್ಯವೇ. ಅಧಿಕಾರಿಗಳಿಗೆ ಅಷ್ಟು ದೊಡ್ಡ ಮನೆ ಏಕೆ’ ಎಂದೂ ಪ್ರಶ್ನಿಸಿದರು.

‘ಪ್ರಥಮದರ್ಜೆ ಸಹಾಯಕರು, ಕೆಎಎಸ್‌ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಆಗಿದೆ. ಈವರೆಗೆ ಒಬ್ಬನೇ ಒಬ್ಬ ಐಎಎಸ್ ಅಧಿಕಾರಿ ಮನೆ ಮೇಲೆ ದಾಳಿ ನಡೆದ ಉದಾಹರಣೆ ಇದೆಯೇ’ ಎಂದು ಪ್ರಶ್ನಿಸಿದರು.

ಎಚ್‌.ಡಿ.ಕುಮಾರಸ್ವಾಮಿ, ‘ಮೈಸೂರಿನಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳು ಜಗಳ ಮಾಡಿಕೊಂಡರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಇಬ್ಬರಿಗೂ ಸಮನ್ಸ್‌ ನೀಡಿ ಕರೆಸಿಕೊಳ್ಳಬೇಕಿತ್ತು. ಆದರೆ, ಮುಖ್ಯ ಕಾರ್ಯದರ್ಶಿಯವರೇ ಮೈಸೂರಿಗೆ ಹೋದರು. ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದರು.

‘ತಕರಾರು ಇದ್ದರೆ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿ ಅವರಿಗೆ ದಾಖಲೆಗಳನ್ನು ನೀಡಬೇಕು. ನೇರವಾಗಿ ಮಾಧ್ಯಮದ ಮುಂದೆ ಮಾತನಾಡಲು ಸೇವಾ ನಿಯಮದ ಪ್ರಕಾರ ಅವಕಾಶ ಇಲ್ಲ’ ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಮುಖ್ಯ ಕಾರ್ಯದರ್ಶಿ ಅವರಿಗೆ ಹಲವು ಸಲ ಕರೆ ಮಾಡಿ ಇಂತದ್ದಕ್ಕೆ ಅವಕಾಶ ನೀಡಬೇಡಿ ಎಂದು ಹೇಳಿದ್ದೆ. ಮಾಧ್ಯಮದ ಮುಂದೆ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ಕಂದಾಯ ಸಚಿವ ಆರ್‌.ಅಶೋಕ, ‘ಕೆಲ ಅಧಿಕಾರಿಗಳು ಓವರ್‌ ಆ್ಯಕ್ಟಿಂಗ್ ಮಾಡುತ್ತಾರೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT