ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ–ಸೆಟ್‌, ಪೊಲೀಸ್‌ ಇಲಾಖೆ ಪರೀಕ್ಷೆ ಒಂದೇ ದಿನ

ಎರಡೂ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಗೊಂದಲ
Last Updated 26 ಆಗಸ್ಟ್ 2020, 20:15 IST
ಅಕ್ಷರ ಗಾತ್ರ

ದಾವಣಗೆರೆ: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯನ್ನು (ಕೆ–ಸೆಟ್‌) ಸೆಪ್ಟೆಂಬರ್‌ 20ರಂದು ನಡೆಸುವಂತೆ ರಾಜ್ಯ ಸರ್ಕಾರವು ಮೈಸೂರು ವಿಶ್ವವಿದ್ಯಾಲಯಕ್ಕೆ ಸುತ್ತೋಲೆ ಕಳುಹಿಸಿದೆ. ನಾಗರಿಕ ಪೊಲೀಸ್‌ ಹುದ್ದೆಗೆ ಅದೇ ದಿನ ಪರೀಕ್ಷೆ ಮೊದಲೇ ನಿಗದಿಯಾಗಿತ್ತು. ಎರಡೂ ಪರೀಕ್ಷೆಗಳನ್ನು ಬರೆಯಲು ಅರ್ಜಿ ಸಲ್ಲಿಸಿದವರಿಗೆ ಇದರಿಂದ ಸಮಸ್ಯೆಯಾಗಿದೆ. ಒಂದು ಪರೀಕ್ಷೆಯನ್ನು ಮಾತ್ರ ಬರೆಯುವ ಅನಿವಾರ್ಯತೆ ಎದುರಾಗಿದೆ.

ಈ ಮೊದಲು ‘ಕೆ–ಸೆಟ್‌’ ಏಪ್ರಿಲ್‌ 12ಕ್ಕೆ ನಿಗದಿಯಾಗಿತ್ತು. ಆದರೆ, ಕೊರೊನಾ ಬಂದು ಲಾಕ್‌ಡೌನ್‌ ಆಗಿದ್ದರಿಂದ ಪರೀಕ್ಷೆ ಮುಂದೂಡಲಾಗಿತ್ತು. ಆಗಸ್ಟ್‌ 6ರಂದು ನಡೆಸಲು ಅನುಮತಿ ಕೋರಲಾಗಿತ್ತು. ಆದರೆ, ಜುಲೈನಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸಲು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಮಾರ್ಗಸೂಚಿ ಪ್ರಕಾರ ಅವಕಾಶ ಇರಲಿಲ್ಲ. ಸೆಪ್ಟೆಂಬರ್‌ 30 ಅಥವಾ ಅಕ್ಟೋಬರ್‌ 6ರಂದು ಪರೀಕ್ಷೆ ನಡೆಸಲು ನಿರ್ಧರಿಸಿ, ಅನುಮತಿ ನೀಡುವಂತೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ‍ಪ್ರೊ. ಜಿ. ಹೇಮಂತ್‌ಕುಮಾರ್‌ ಅವರು ಉನ್ನತ ಶಿಕ್ಷಣ ಇಲಾಖೆಗೆ ಆ.16ರಂದು ಪತ್ರ ಬರೆದಿದ್ದರು.

ಕುಲಪತಿ ಸೂಚಿಸಿದ್ದ ಎರಡೂ ದಿನಾಂಕಗಳ ಬದಲು ಸೆ.20ರಂದು ಪರೀಕ್ಷೆ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್‌ ಎಂ. ಹಿರೇಮಠ್‌ ಆ.25ರಂದು ಸುತ್ತೋಲೆ ಕಳುಹಿಸಿದ್ದಾರೆ.

ಸಿವಿಲ್‌ ಪೊಲೀಸ್‌ (ಪುರುಷ ಮತ್ತು ಮಹಿಳೆ) ಹುದ್ದೆಗಳನ್ನು ಭರ್ತಿ ಮಾಡಲು ಮೇ ತಿಂಗಳಲ್ಲಿ ಕರ್ನಾಟಕ ಪೊಲೀಸ್‌ ರಿಕ್ರೂಟ್‌ಮೆಂಟ್‌ ವಿಭಾಗವು ಅಧಿಸೂಚನೆ ಹೊರಡಿಸಿತ್ತು. ಸೆಪ್ಟೆಂಬರ್‌ 20ಕ್ಕೆ ಲಿಖಿತ ಪರೀಕ್ಷೆ ಎಂದು ದಿನ ನಿಗದಿ ಮಾಡಲಾಗಿತ್ತು.

‘ಸೆಪ್ಟೆಂಬರ್‌ 18ಕ್ಕೆ ಸಶಸ್ತ್ರ ಪೊಲೀಸ್‌ ಹುದ್ದೆಗೆ ಲಿಖಿತ ಪರೀಕ್ಷೆ ಹಾಗೂ ಸೆ.20ಕ್ಕೆ ನಾಗರಿಕ ಪೊಲೀಸ್‌ ಹುದ್ದೆಗೆ ಲಿಖಿತ ಪರೀಕ್ಷೆ ನಡೆಯಲಿದೆ. ಈ ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಜತೆಗೆ ‘ಕೆ–ಸೆಟ್‌’ಗೂ ಅರ್ಜಿ ಹಾಕಿದ್ದೇನೆ. ಕೆ–ಸೆಟ್‌ ಮತ್ತು ನಾಗರಿಕ ಪೊಲೀಸ್‌ ಪರೀಕ್ಷೆ ಒಂದೇ ದಿನ ಬಂದಿದ್ದು, ಯಾವುದಾದರೂ ಒಂದು ಪರೀಕ್ಷೆಯನ್ನು ಮುಂದೂಡಬೇಕು. ಇಲ್ಲದೇ ಇದ್ದರೆ ನಾವು ಒಂದು ಪರೀಕ್ಷೆ ಬರೆಯುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ದಾವಣಗೆರೆ ತಾಲ್ಲೂಕಿನ ಪರೀಕ್ಷಾರ್ಥಿ ಬಸವರಾಜ್ ಎಸ್. ಅಣ್ಣಾಪುರ ಆಗ್ರಹಿಸಿದ್ದಾರೆ.

‘1005 ಸಶಸ್ತ್ರ ಪೊಲೀಸ್‌ ಹುದ್ದೆಗಳಿಗೆ ಮತ್ತು 2005 ನಾಗರಿಕ ಪೊಲೀಸ್‌ ಹುದ್ದೆಗಳಿಗಾಗಿ ನಡೆಯುತ್ತಿರುವ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಂಡಿದ್ದೇನೆ. ಈಗ ತರಾತುರಿಯಲ್ಲಿ ನಿರ್ಧರಿಸಿರುವ ಕೆ–ಸೆಟ್‌ ಮುಂದೂಡಬೇಕು’ ಎಂದು ನ್ಯಾಮತಿ ತಾಲ್ಲೂಕಿನ ಪರೀಕ್ಷಾರ್ಥಿ ರಾಕೇಶ್ ಎಂ. ಆರುಂಡಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT