ಶನಿವಾರ, ನವೆಂಬರ್ 27, 2021
20 °C
ಇದೇ 26ಕ್ಕೆ ಜೋಶಿ ಅಧಿಕಾರ ಸ್ವೀಕಾರ

ಕಸಾಪ: ಠೇವಣಿ ಕಳೆದುಕೊಂಡ ಸೋತವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹೇಶ ಜೋಶಿ ಅವರು 69,431 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರೇ, ಉಳಿದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. 

ಈ ಬಾರಿ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾಗಿದ್ದ 3.10 ಲಕ್ಷ ಮತದಾರರಲ್ಲಿ 1.62 ಲಕ್ಷ ಮಂದಿ ಹಕ್ಕು ಚಲಾಯಿಸಿದ್ದರು. ಠೇವಣಿ ಉಳಿಸಿಕೊಳ್ಳಲು ಅಭ್ಯರ್ಥಿಗಳು 27 ಸಾವಿರ ಮತಗಳನ್ನು ಪಡೆಯಬೇಕಾಗಿತ್ತು. ಆದರೆ, ಉಳಿದ 20 ಅಭ್ಯರ್ಥಿಗಳಲ್ಲಿ ಯಾರಿಗೂ ಇಷ್ಟು ಮತಗಳು ಬಂದಿಲ್ಲ.

ಶೇಖರಗೌಡ ಮಾಲಿಪಾಟೀಲ ಅವರು 23,195 ಮತಗಳನ್ನು ಗಳಿಸುವ ಮೂಲಕ ಹೆಚ್ಚು ಮತ ಪಡೆದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮಹೇಶ ಜೋಶಿ ಅವರು 46,236 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದು ದಾಖಲೆಯಾಗಿದೆ. 

ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಮತದಾನ ನಡೆದಿದ್ದು, ಜಿಲ್ಲೆಗಳಲ್ಲಿ ಚಲಾವಣೆಯಾಗಿದ್ದ ಮತಗಳಲ್ಲಿ ಜೋಶಿ ಅವರಿಗೆ 68,525 ಮತಗಳು ಲಭಿಸಿದ್ದವು. ಹೊರನಾಡು, ಹೊರದೇಶಗಳಿಂದ ಬಂದ 2,682 ಅಂಚೆ ಮತಗಳನ್ನು ಬುಧವಾರ ಎಣಿಕೆ ಮಾಡಲಾಯಿತು. ಸಂಜೆ ವೇಳೆಗೆ ಕೇಂದ್ರ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಫಲಿತಾಂಶವನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ಈ ಮೊದಲೇ ಫಲಿತಾಂಶ ಖಚಿತವಾಗಿದ್ದರಿಂದ ಪರಿಷತ್ತಿನ ಕೇಂದ್ರ ಕಚೇರಿಯ ಮುಂದೆ ವಿಜಯೋತ್ಸವ ಇರಲಿಲ್ಲ. ಬೆರಳೆಣಿಕೆಯಷ್ಟು ಬೆಂಬಲಿಗರೊಂದಿಗೆ ಬಂದ ಜೋಶಿ ಅವರು, ಪ್ರಮಾಣ ಪತ್ರ ಸ್ವೀಕರಿಸಿದರು. ಇದಕ್ಕೂ ಮೊದಲು ಗಡಿನಾಡು ಘಟಕಗಳ ಅಧ್ಯಕ್ಷರ ಫಲಿತಾಂಶ ಘೋಷಿಸಲಾಯಿತು. ತಮಿಳುನಾಡು ಗಡಿನಾಡ ಘಟಕಕ್ಕೆ ತಮಿಳ್‌ ಸೆಲ್ವಿ ಅವರು ಮಾತ್ರ ಸ್ಪರ್ಧಿಸಿದ್ದರಿಂದ ಅವಿರೋಧ ಆಯ್ಕೆಯಾದರು. ಗೋವಾ ಗಡಿನಾಡ ಘಟಕಕ್ಕೆ ಯಾವುದೇ ಅಭ್ಯರ್ಥಿ ಸ್ಪರ್ಧಿಸಿಲ್ಲ. 

ಇದೇ 26ರ ಬೆಳಿಗ್ಗೆ 11 ಗಂಟೆಗೆ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರ ಸಮ್ಮುಖ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತೇನೆ ಎಂದು ಮಹೇಶ ಜೋಶಿ ಘೋಷಿಸಿದ್ದಾರೆ.

ಗಡಿನಾಡು ಘಟಕಗಳ ಅಧ್ಯಕ್ಷರು

ಘಟಕ; ಅಧ್ಯಕ್ಷರಾಗಿ ಆಯ್ಕೆಯಾದವರು

ಮಹಾರಾಷ್ಟ್ರ; ಸೋಮಶೇಖರ ಜಮಶೆಟ್ಟಿ

ಕೇರಳ; ಸುಬ್ರಹ್ಮಣ್ಯ ವಿ. ಭಟ್ಟ

ತಮಿಳುನಾಡು; ತಮಿಳ್‌ ಸೆಲ್ವಿ

ಆಂಧ್ರಪ್ರದೇಶ; ಅಂಜನ್ ಕುಮಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು