ಭಾನುವಾರ, ಅಕ್ಟೋಬರ್ 24, 2021
23 °C

ಶಾಲಾ ಶುಲ್ಕ ಶೇ 15ರಷ್ಟು ಕಡಿತ; ಹೈಕೋರ್ಟ್‌ ತೀರ್ಪು ಸ್ವಾಗತಾರ್ಹ: ಕ್ಯಾಮ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಶಾಲಾ ಶುಲ್ಕ ವಿಚಾರದ ಗೊಂದಲಕ್ಕೆ ರಾಜ್ಯ ಹೈಕೋರ್ಟ್‌ ಗುರುವಾರ ತೆರೆ ಎಳೆದಿದ್ದು, ಶೇ 15ರಷ್ಟು ಕಡಿತಗೊಳಿಸಲು ಸಲಹೆ ನೀಡಿದೆ. ಈ ತೀರ್ಪು ಸ್ವಾಗತಾರ್ಹ’ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟಗಳ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ತಿಳಿಸಿದ್ದಾರೆ.

ಕೋವಿಡ್‌ ಕಾರಣಕ್ಕೆ ಖಾಸಗಿ ಶಾಲೆಗಳು ಬೋಧನಾ ಶುಲ್ಕದಲ್ಲಿ ಶೇ 30ರಷ್ಟು ಕಡಿತ ಮಾಡುವಂತೆ ರಾಜ್ಯ ಸರ್ಕಾರ 2021ರ ಜ. 29ರಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೆಲವು ಶಾಲಾ ಆಡಳಿತ ಮಂಡಳಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು.

‘ಇಡೀ ದೇಶಕ್ಕೆ ಅನ್ವಯವಾಗುವಂತೆ ಈ ಹಿಂದೆಯೇ ಶೇ 15ರಷ್ಟು ಶುಲ್ಕ ಕಡಿತಕ್ಕೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿತ್ತು. ಅದಕ್ಕೆ ಪೂರಕವಾಗಿ ಹೈಕೋರ್ಟ್‌ ಕೂಡಾ ತೀರ್ಪು ನೀಡಿದೆ’ ಎಂದು ಅವರು ಹೇಳಿದ್ದಾರೆ.

‘ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಶುಲ್ಕ ಕಡಿತ ಮಾಡಿತ್ತು. ಸರ್ಕಾರ ಶೇ 30ರಷ್ಟು ಕಡಿತ ಎಂದು ಹೇಳಿದ್ದರೂ ಇತರ ಶುಲ್ಕಗಳನ್ನು ಸೇರಿಸಿದರೆ ಒಟ್ಟು ಕಡಿತ ಪ್ರತಿ ಶಾಲೆಗೆ ಶೇ 40ರಿಂದ ಶೇ 50ರಷ್ಟು ಆಗುತ್ತಿತ್ತು. ಹೀಗಾಗಿ, ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆವು’ ಎಂದು ಅವರು ತಿಳಿಸಿದ್ದಾರೆ.

‘ಕೆಲವು ಶಾಲೆಗಳು ಈಗಾಗಲೇ ಶೇ 15ಕ್ಕಿಂತ ಹೆಚ್ಚು ಶುಲ್ಕ ಕಡಿತ ಮಾಡಿವೆ. ಅವೈಜ್ಞಾನಿಕವಾಗಿ ಶುಲ್ಕ ಕಡಿಮೆ ಮಾಡಿದ್ದರಿಂದ ಸಣ್ಣಪುಟ್ಟ ಶಾಲೆಗಳು ತೀವ್ರ ಆರ್ಥಿಕ ಸಮಸ್ಯೆಗೆ ಸಿಲುಕಿದ್ದವು. ಶುಲ್ಕ ಪಾವತಿಸಲು ಸಮಸ್ಯೆ ಇರುವ ಪೋಷಕರು ಆಯಾ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ವಿನಾಯಿತಿ ಕೇಳಿ ಪಡೆದುಕೊಳ್ಳಬಹುದು. ಆದರೆ, ಶುಲ್ಕ ಗೊಂದಲದ ವಿಚಾರಕ್ಕೆ ಹೈಕೋರ್ಟ್‌ ತೀರ್ಪು ಅಂತ್ಯ ಹಾಡಿದೆ’ ಎಂದೂ ಅವರು ತಿಳಿಸಿದ್ದಾರೆ.

2020-21ರ ಶೈಕ್ಷಣಿಕ ವರ್ಷದ ಶಾಲಾ ಶುಲ್ಕದ ಗೊಂದಲಕ್ಕೆ ರಾಜ್ಯ ಹೈಕೋರ್ಟ್‌ ತೆರೆಎಳೆದಿದೆ. ಗುರುವಾರ ನೀಡಿರುವ ತೀರ್ಪಿನಲ್ಲಿ ಶೇಕಡ 15 ಶುಲ್ಕ ಕಡಿತದ ನಿರ್ದೇಶನ ನೀಡಿದೆ. ಇದನ್ನು ಸ್ವಾಗತಿಸುತ್ತೇವೆ. ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲು ನಾವು ಬದ್ದರಿರುತ್ತೇವೆ’ ಎಂದು ನೋಂದಾಯಿತ ಅನುದಾನರಹಿತ ಶಾಲೆಗಳ ಸಂಘಟನೆಯ (ರುಪ್ಸಾ) ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು