ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಗಾರ ಎಸ್‌.ಎಫ್.ಯೋಗಪ್ಪನವರ್ ನಿಧನ

Last Updated 4 ಮೇ 2021, 13:15 IST
ಅಕ್ಷರ ಗಾತ್ರ

ಬೆಂಗಳೂರು: ಕಥೆಗಾರ ಹಾಗೂ ಅಂಕಣಕಾರ, ನಿವೃತ್ತ ಅಧಿಕಾರಿ ಸಣ್ಣಪ್ಪ ಫಕೀರಪ್ಪ ಯೋಗಪ್ಪನವರ (73) ಅವರು ಮಂಗಳವಾರ ಮೃತಪಟ್ಟಿದ್ದಾರೆ.

ಇಲ್ಲಿನ ಗಂಗಾನಗರದಲ್ಲಿ ವಾಸವಾಗಿದ್ದ ಅವರಿಗೆ 10 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರ ಪತ್ನಿ ಕೂಡ ಕೋವಿಡ್‌ ಪೀಡಿತರಾಗಿ, ಆಸ್ಪತ್ರೆ ಸೇರಿದ್ದರು. ನಾಲ್ಕು ದಿನಗಳ ಹಿಂದೆ ಅವರು ಗುಣಮುಖರಾಗಿದ್ದರು. ಆದರೆ, ಯೋಗಪ್ಪನವರ್‌ ಅವರು ಚಿಕಿತ್ಸೆಗೆ ಸ್ಪಂದಿಸದೆಯೇ ಸಾವಿಗೀಡಾಗಿದ್ದಾರೆ. ಈ ಮೂಲಕ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬೇಲೂರು ಗ್ರಾಮಕ್ಕೆ ಕೊಂಡೊಯ್ದು, ಮಂಗಳವಾರ ರಾತ್ರಿ ಅಂತ್ಯಸಂಸ್ಕಾರವನ್ನು ನೆರವೇರಿಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ.

1949ರಲ್ಲಿ ಜನಿಸಿದ ಎಸ್.ಎಫ್.ಯೋಗಪ್ಪನವರ್ ಅವರು, ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬಳಿಕ ಬಾದಾಮಿಯ ವೀರಪುಲಿಕೇಶಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1974ರಲ್ಲಿ ಅವರು ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾದರು. ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅವರು, ದಕ್ಷ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು. ಸರ್ಕಾರಿ ವೃತ್ತಿಯ ಜತೆಗೆ ಸಾಹಿತ್ಯದಲ್ಲಿ ಒಲವು ಹೊಂದಿದ್ದ ಅವರು, ಸೃಜನಶೀಲ ಬರವಣಿಗೆಯ ಮೂಲಕ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದರು.

‘ಲಂಕೇಶ್ ಪತ್ರಿಕೆ’ಯಲ್ಲಿ ಅಂಕಣಕಾರರಾಗಿ ಪ್ರಸಿದ್ಧರಾಗಿದ್ದರು. ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ’, ‘ಪ್ರಿತಿಯೆಂಬುದು ಚಂದ್ರನ ದಯೆ’, ‘ಶೋಧ’ ಸೇರಿದಂತೆ ವಿವಿಧ ಕಾದಂಬರಿಗಳನ್ನು ಬರೆದಿದ್ದಾರೆ. ‘ಆರಾಮ ಕುರ್ಚಿ ಇತರ ಕಥೆಗಳು’, ‘ಒಂದು ಶಹರದ ಸುತ್ತ’, ‘ಮಾಯಾ ಕನ್ನಡಿ–ಚಾರ್ಲ್ಸ್ ಬೋದಿಲೇರ್‌ನ ಐವತ್ತು ಗದ್ಯ ಕವಿತೆಗಳು’, ‘ಹದಿಹರೆಯದ ಒಬ್ಬಂಟಿ ಪಯಣ’, ‘ಮ್ಯೂಟೇಶನ್’, ‘ನೀಲು’, ‌‘ಮಾತು ಮೀರಿದ ಮಿಂಚು’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT