ಶುಕ್ರವಾರ, ಮೇ 20, 2022
19 °C

ಕವಾಯತು: ನ.1 ರಿಂದ ಕನ್ನಡದಲ್ಲೇ ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್‌ ಕವಾಯತು ವೇಳೆ ಇಂಗ್ಲಿಷ್‌ ಬದಲು ಕನ್ನಡದಲ್ಲೇ ನಿರ್ದೇಶನ (ಕಾಶನ್) ನೀಡುವ ಪದ್ಧತಿಯನ್ನು ನವೆಂಬರ್‌ 1 ರಿಂದ ಜಾರಿ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಇದಕ್ಕಾಗಿ ಈಗಾಗಲೇ ಕನ್ನಡದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದಲೂ ಕವಾಯತು ಕಾಶನ್‌ ಇಂಗ್ಲಿಷ್‌ನಲ್ಲೇ ನೀಡಲಾಗುತ್ತಿದೆ. ಅದನ್ನು ಬದಲಿಸಿ ಕನ್ನಡದಲ್ಲಿ ಕವಾಯತು ನಿರ್ದೇಶನ ಆರಂಭಿಸಲು ವಿಶೇಷ ಪ್ರಯತ್ನ ನಡೆಸಲಾಗಿದೆ ಎಂದು ಅವರು ಹೇಳಿದರು.

ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಕಲಿಕೆ: ರಾಜ್ಯದ ವಿವಿಧ ಜೈಲುಗಳಲ್ಲಿರುವ ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಕಲಿಸಲಾಗುವುದು. ರಾಜ್ಯದಲ್ಲಿ 16 ಸಾವಿರ ಕೈದಿಗಳಿದ್ದು, ಸುಮಾರು 6 ಸಾವಿರ ಅನಕ್ಷರಸ್ಥರಿರಬಹುದು ಎಂದು ಅಂದಾಜು ಮಾಡಲಾಗುವುದು. ಹೆಬ್ಬೆಟ್ಟು ಒತ್ತಿ ಜೈಲಿಗೆ ಬಂದವರು ಮರಳಿ ಹೋಗುವಾಗ ಸಹಿ ಹಾಕುವ ಮಟ್ಟಕ್ಕೆ ಅಕ್ಷರ ಕಲಿತಿರಬೇಕು. ಅಕ್ಷರ ಕಲಿಕೆಗೆ ಕೈದಿಗಳನ್ನೇ ನಿಯೋಜಿಸಲಾಗುವುದು. ಇವರಿಗೆ ಗೌರವ ಧನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಸಿನಿಮಾ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ: ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆ– 1967 ಕ್ಕೆ ತಿದ್ದುಪಡಿ ತರಲಾಗುವುದು. ಇದಕ್ಕಾಗಿ ಅಧಿಕಾರಿಗಳ ಸಭೆ ನಡೆಸಲಾಯಿತು. ಇಂದು ಚಲನಚಿತ್ರ ಮಂದಿರದ ಪರಿಕಲ್ಪನೆ ಮತ್ತು ತಂತ್ರಜ್ಞಾನವೂ ಬದಲಾಗಿದೆ. ಅದಕ್ಕೆ ತಕ್ಕಂತೆ ನಿಯಮಗಳಲ್ಲಿ ಮಾರ್ಪಾಡು ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವಿವಿಧ ಇಲಾಖೆಗಳ ಅಭಿಪ್ರಾಯವನ್ನೂ ಕೇಳಲಾಗಿದೆ ಎಂದು ಹೇಳಿದರು.

ತಿದ್ದುಪಡಿಯ ಬಗ್ಗೆ ಚಲನಚಿತ್ರೋದ್ಯಮದವರ ಜತೆಗೂ ಚರ್ಚೆ ನಡೆಸಲಾಗಿದೆ. ಮುಖ್ಯವಾಗಿ, ಲೈಸೆನ್ಸ್‌ ಶುಲ್ಕವನ್ನು ಪ್ರತಿ ವರ್ಷ ಪರಿಷ್ಕರಣೆ ಮಾಡುವ ಬದಲು ಐದು ವರ್ಷಕ್ಕೊಮ್ಮೆ ಮಾಡುವುದು, ಪೈರಸಿ ಪಿಡುಗು ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ಮತ್ತು ಪೈರಸಿ ಮಾಡುವವರನ್ನು ಹಿಡಿದು ಶಿಕ್ಷೆ ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಈಗಾಗಲೇ ಪೈರಸಿ ಮಾಡುವವರನ್ನು ಪತ್ತೆ ಮಾಲು ಸಿಸಿಬಿ ಮತ್ತು ಸೈಬರ್‌ ತಂಡದ ಸದಸ್ಯರನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದೆ ಎಂದರು.

ಚಿತ್ರೋದ್ಯಮ ಲಕ್ಷಾಂತರ ಜನರಿಗೆ ಅನ್ನ ನೀಡುವ ಉದ್ಯಮವಾಗಿದೆ. ಆದ್ದರಿಂದ, ಚಿತ್ರ ತಯಾರಿಕೆ ಮಾಡುವವರಿಗೆ ರಕ್ಷಣೆ ನೀಡಬೇಕಾಗಿದೆ. ಈ ಮೂಲಕ ಕನ್ನಡ ಚಿತ್ರೋದ್ಯಮವನ್ನು ಉಳಿಸಬೇಕಾಗಿದೆ. ಇದರಲ್ಲಿ ಲಕ್ಷಾಂತರ ಜನರ ಭವಿಷ್ಯ ಅಡಗಿದೆ ಎಂದು ಜ್ಞಾನೇಂದ್ರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು