ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿನಲ್ಲಿ ಕನ್ನಡದ ಸ್ಥಿತಿ ಚಿಂತಾಜನಕ: ಮಹೇಶ ಜೋಶಿ

Last Updated 27 ಜನವರಿ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ನಾಡಿನಲ್ಲಿ ಕನ್ನಡದ ಸ್ಥಿತಿ ಚಿಂತಾಜನಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಹೋರಾಟಗಾರ ಮ. ರಾಮಮೂರ್ತಿಯಂತಹವರ ಕೊರತೆ ಎದ್ದು ಕಾಣುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ಕಸಾಪ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಸಮಾರಂಭದಲ್ಲಿ ಕನ್ನಡ ಚಳವಳಿಗಾರ್ತಿ ಗಾಯತ್ರಿ ರಾಮಣ್ಣ ಹಾಗೂ ಕನ್ನಡ ಹೋರಾಟಗಾರ ಎಂ.ರಾಮೇಗೌಡ ಅವರಿಗೆ ‘ಮ. ರಾಮಮೂರ್ತಿ ದತ್ತಿ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು. ‘ನಮ್ಮ ನೆಲದಲ್ಲಿ ಕನ್ನಡವನ್ನು ಉಳಿಸುವುದಕ್ಕೆ ಕಾನೂನು ರಚನೆ ಮಾಡಬೇಕಾದ ಅನಿವಾರ್ಯ ಬಂದಿದೆ. ಸಮಗ್ರ ಕನ್ನಡ ಅಭಿವೃದ್ಧಿ ಮಸೂದೆ-2022 ಅನ್ನು ಕಾನೂನು ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಬೇಕಾದ ಕಾಲಘಟದಲ್ಲಿ, ಕನ್ನಡದ ಕಟ್ಟಾಳು ಮ. ರಾಮಮೂರ್ತಿಯಂತಹವರು ಇರಬೇಕಿತ್ತು’ ಎಂದರು.

‘ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಈಗ ಶೇ 26ಕ್ಕೆ ಇಳಿದಿರುವುದು ಶೋಚನೀಯ. ಕನ್ನಡದ ಶಾಲೆಗಳು ದಿನ ಬೆಳಗಾದರೆ ನಾಪತ್ತೆಯಾಗುತ್ತಿವೆ. ಉತ್ತಮ ರೀತಿಯಲ್ಲಿ ನಡೆಯುತ್ತಿದ್ದ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಹೆಸರಿನಲ್ಲಿ ಸರ್ಕಾರವೇ ಮಣ್ಣುಪಾಲು ಮಾಡುತ್ತಿದೆ. ಆಂಗ್ಲ ಭಾಷೆ ಕಲಿತರೆ ಉದ್ಯೋಗ ಸಿಗುತ್ತದೆ ಎನ್ನುವ ಭ್ರಮೆ ನಮ್ಮವರಲ್ಲಿ ಮನೆ ಮಾಡಿದೆ. ಮುಂದಿನ ದಿನಗಳಲ್ಲಿ ಕನ್ನಡ ನಾಪತ್ತೆ ಆಗುವ ಕಾಲ ಬಂದರೆ ಆಶ್ಚರ್ಯವಿಲ್ಲ’ ಎಂದು ‌ಕಳವಳ ವ್ಯಕ್ತ ಪಡಿಸಿದರು.

ಪತ್ರಕರ್ತ ಎಂ.ಎ. ಪೊನ್ನಪ್ಪ, ‘ಮ. ರಾಮಮೂರ್ತಿಯವರ ಹೋರಾಟ ಸ್ವಾಭಿಮಾನದ ಪ್ರತೀಕವಾಗಿತ್ತು. ಪತ್ತೆದಾರಿ ಕಾದಂಬರಿಯನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಪತ್ತೆದಾರಿ ರಾಮಣ್ಣ ಎಂದೇ ಗುರುತಿಸಿಕೊಂಡಿದ್ದರು. ಕನ್ನಡ ಕಟ್ಟಿ ಬೆಳೆಸಲು, ಧನ ಕನಕ ಬೇಕಾಗಿಲ್ಲ. ಬದಲಾಗಿ ಕನ್ನಡದ ಮೇಲೆ ಅಭಿಮಾನ ಇದ್ದರೆ ಸಾಕು ಎಂದು ಹೇಳುತ್ತಲೇ ಕನ್ನಡವನ್ನು ಕಟ್ಟಿದ್ದರು. ಇಂದು ಅಂತಹ ಹೋರಾಟಗಾರರ ಕೊರತೆ ಇಂದು ಎದ್ದು ಕಾಣುತ್ತಿದೆ’ ಎಂದು ಹೇಳಿದರು.

ಡಾ. ರಾಜಕುಮಾರ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಸಾ.ರಾ.ಗೋವಿಂದು, ‘ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದ ನಂತರ ನಮ್ಮ ನಾಡಿನಲ್ಲಿ ಭಾಷಾಭಿಮಾನ ಇರುವ ಯಾವ ರಾಜಕಾರಣಿಯೂ ಬಾರದಿರುವುದು ನಮ್ಮ ನಾಡಿನ ದುರಂತ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಬೆಳೆಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕಾಲ ಕಾಲಕ್ಕೆ ಬುದ್ಧಿ ಹೇಳಬೇಕು. ಕಾಲ ಬಂದರೆ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT