ಶುಕ್ರವಾರ, ಡಿಸೆಂಬರ್ 2, 2022
20 °C
ಸಿ.ಎಂ ಅಧ್ಯಕ್ಷತೆಯ ಪೂರ್ವಸಿದ್ಧತಾ ಸಭೆಯೇ ನಡೆದಿಲ್ಲ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ‌46 ದಿನ ಬಾಕಿ: ತಲುಪದ ಹಣ– ಲಾಂಛನಕ್ಕೂ ‘ಗ್ರಹಣ’

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ 46 ದಿನಗಳಷ್ಟೆ ಬಾಕಿ ಇದೆ. ಆದರೆ, ಇನ್ನೂ ಸ್ವಾಗತ ಸಮಿತಿ ಖಾತೆಗೆ ಹಣ ತಲುಪಿಲ್ಲ. ಲಾಂಛನವೂ ಬಿಡುಗಡೆ ಆಗಿಲ್ಲ!

ಜಿಲ್ಲಾಧಿಕಾರಿ ಅಧ್ಯಕ್ಷ ತೆಯ ಸ್ವಾಗತ ಸಮಿತಿ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದಿರುವುದು ಬಿಟ್ಟರೆ, ವಿವಿಧ ಸಮಿತಿಗಳು ಪೂರ್ಣರೂಪದಲ್ಲಿ ಅಸ್ತಿತ್ವಕ್ಕೆ ಬಂದಿಲ್ಲ. ಸ್ಥಳ ನಿಗದಿಯೂ ಸೇರಿದಂತೆ ಸಮ್ಮೇಳನಕ್ಕೆ ಸಂಬಂಧಿಸಿದ ಯಾವುದೇ ಸಿದ್ಧತೆಗಳು ಅಂತಿಮ ಗೊಂಡಿಲ್ಲ. ಹೀಗಾಗಿ, ನಿಗದಿ ಪಡಿಸಿದ ದಿನದಂದೇ (ನ. 11, 12,13) ಸಮ್ಮೇಳನ ನಡೆಯಬಹುದೇ ಎಂಬ ಅನುಮಾನ ಸಾಹಿತ್ಯ ವಲಯದಲ್ಲಿ ಶುರುವಾಗಿದೆ.

‘ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜುಲೈನಲ್ಲಿ ನಡೆಸಿದ್ದ ಪೂರ್ವಭಾವಿ ಸಭೆಯಲ್ಲಿ ಸೆ. 23, 24, 25ರಂದು ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿತ್ತು. ಈ ದಿನಗಳಲ್ಲಿ ಪಿತೃಪಕ್ಷ ಎಂಬ ಕಾರಣಕ್ಕೆ ದಿನಾಂಕವನ್ನು ಮರು ನಿಗದಿಪಡಿಸಲಾಗಿತ್ತು. ಆದರೆ, ಆ ನಂತರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆಯೇ ನಡೆದಿಲ್ಲ. ಲಾಂಛನವು ಅಂತಿಮಗೊಂಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

3 ಬಾರಿ ಸಭೆ ನಿಗದಿ ಯಾಗಿತ್ತಾದರೂ ಸಮಯ ಹೊಂದಾಣಿಕೆಯಾಗದ ಕಾರಣ ಮುಂದೂಡಿಕೆಯಾಗಿದೆ. ಸೆ. 22ರಂದು ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ ಜೋಶಿ ಅವರು ಬಹರೇನ್‌ನಲ್ಲಿ ಕನ್ನಡ ಭವನ ಉದ್ಘಾಟನೆ ತೆರಳಬೇಕಿದ್ದ ಕಾರಣ ಮುಂದೂಡಿಕೆ ಆಗಿದೆ.

‘ಸಮ್ಮೇಳನಕ್ಕಾಗಿ ಸರ್ಕಾರ ₹ 15 ಕೋಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಡುಗಡೆ ಮಾಡಿದೆ. ಅಲ್ಲದೆ, ಕನ್ನಡ ಸಾಹಿತ್ಯ‌ ಪರಿಷತ್ತಿಗೆ 2022–23ನೇ ಸಾಲಿಗೆ ನೀಡಿರುವ ₹ 10 ಕೋಟಿ ಅನುದಾನದಲ್ಲಿ ₹ 5 ಕೋಟಿಯನ್ನು ಸಮ್ಮೇಳನಕ್ಕೆ ಬಳಸುವಂತೆ ಆದೇಶ ಹೊರಡಿಸಲಾಗಿದೆ. ಹೀಗೆ ಒಟ್ಟು ₹ 20 ಕೋಟಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿದೆ. ಮುಖ್ಯಮಂತ್ರಿ ಅಥವಾ ಇಲಾಖೆಯ ಸಚಿವರು ನಿರ್ದೇಶನ ನೀಡದೆ ಸ್ವಾಗತ ಸಮಿತಿಯ ಖಾತೆಗೆ ಹಣ ವರ್ಗಾವಣೆಗೆ ಅವಕಾಶ ಇಲ್ಲ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಹಾವೇರಿ ಜಿಲ್ಲಾಧಿಕಾರಿ ಸಂಜಯ ಬಿ.ಶೆಟ್ಟೆಣ್ಣವರ, ‘ಕೆಲ ಸಮಿತಿಗಳನ್ನು ಮಾಡಿದ್ದೇವೆ. ಕೆಟಿಪಿಪಿ (ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ) ಕಾಯ್ದೆಯಡಿ (4ಜಿ) ವಿನಾಯಿತಿ ನೀಡಿದರೆ ಟೆಂಡರ್‌ ಇಲ್ಲದೆ, 15 ದಿನಗಳಲ್ಲಿ ಎಲ್ಲ ಸಿದ್ಧತೆ ಮಾಡಬಹುದು. ಕಾರ್ಯಕ್ರಮ ನಿರ್ವಹಣೆಯನ್ನು ಎಂಸಿಎಗೆ (ಸರ್ಕಾರದ ಜಾಹೀರಾತು ಏಜೆನ್ಸಿ) ನೀಡಲು ತೀರ್ಮಾನವಾಗಿದೆ. ಈ ಏಜೆನ್ಸಿಯು ಸಮ್ಮೇಳನಕ್ಕೆ ₹ 24 ಕೋಟಿ ವೆಚ್ಚದ ಅಂದಾಜುಪಟ್ಟಿ ನೀಡಿದೆ’ ಎಂದರು.

‘ಮುಖ್ಯಮಂತ್ರಿ ನೇತೃತ್ವದಲ್ಲಿ ಮುಂದಿನ ವಾರ ಸಭೆ ನಡೆಯುವ ವಿಶ್ವಾಸವಿದೆ. ಸಾಹಿತ್ಯ ಪರಿಷತ್‌ ಅಧ್ಯಕ್ಷರು ಮತ್ತು ನೀವು ಸೇರಿಕೊಂಡು ಎಲ್ಲ ಸಿದ್ಧತೆ ಮಾಡಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈಗ ಕೆಲಸಗಳನ್ನು ಆರಂಭಿಸಿದರೂ ಸಮ್ಮೇಳನ ಮಾಡ ಬಹುದು’ ಎಂದೂ ಹೇಳಿದರು.

ವೆಚ್ಚ ಮೂರು ಪಟ್ಟು ಹೆಚ್ಚು!
‘ಹಾವೇರಿಯಲ್ಲಿ 2021ರ ಫೆ. 26ರಿಂದ ನಡೆಯಬೇಕಿದ್ದ ಸಾಹಿತ್ಯ ಸಮ್ಮೇಳನವವನ್ನು ಕೋವಿಡ್ ಕಾರಣದಿಂದಾಗಿ ಮುಂದೂಡಲಾಗಿತ್ತು. ಈ ಬಾರಿಯ ಸಮ್ಮೇಳನಕ್ಕೆ ₹ 24 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಇದು ಈ ಹಿಂದಿನ ಸಮ್ಮೇಳನಗಳ ವೆಚ್ಚಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು.

ಕಲಬುರಗಿಯಲ್ಲಿ 2019ರಲ್ಲಿ ನಡೆದ 85ನೇ ಸಮ್ಮೇಳನದಲ್ಲಿ ಸುಮಾರು ₹ 9 ಕೋಟಿ ವೆಚ್ಚವಾಗಿತ್ತು. ಅದಕ್ಕಿಂತಲೂ ಮೊದಲು ಧಾರವಾಡ ಮತ್ತು ಮೈಸೂರಿನಲ್ಲಿ ನಡೆದ ಸಮ್ಮೇಳನಗಳಿಗೆ ಸುಮಾರು ₹ 8 ಕೋಟಿಯಂತೆ ವೆಚ್ಚ ಆಗಿತ್ತು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಮೂಲಗಳು ತಿಳಿಸಿವೆ.

*
ಹಣ ಬಿಡುಗಡೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. 4ಜಿ ವಿನಾಯಿತಿಗೂ ಮನವಿ ಮಾಡಿದ್ದೇನೆ. ಸಾಹಿತ್ಯ ಸಮ್ಮೇಳನದ ಆ್ಯಪ್‌ ಸಿದ್ಧವಾಗಿದೆ. ಲಾಂಛನ ಅಂತಿಮವಾಗಿಲ್ಲ
-ಸಂಜಯ ಬಿ. ಶೆಟ್ಟೆಣ್ಣವರ, ಜಿಲ್ಲಾಧಿಕಾರಿ, ಹಾವೇರಿ (ಸ್ವಾಗತ ಸಮಿತಿ ಅಧ್ಯಕ್ಷ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು