ಮೈಸೂರು: ‘ದಲಿತ ಸಮುದಾಯ ಪಕ್ಷದ ಕಡೆ ಬರುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಕೇಳುವ ದಿನಗಳು ದೂರವಿಲ್ಲ’ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ಇಲ್ಲಿ ಭಾನುವಾರ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ 2ನೇ ಬಾರಿ ಅಧಿಕಾರಕ್ಕೆ ಬಂದಾಗ ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿ ಮಾಡಿತ್ತು. ಮುಂದೆ ಸಮಾಜಕ್ಕೆ ಮುಖ್ಯಮಂತ್ರಿ ಅವಕಾಶ ಕೇಳುತ್ತೇವೆ. ಸಿಗುವ ಭರವಸೆಯೂ ಇದೆ’ ಎಂದರು.
‘ಈಗಿನ ರಾಜ್ಯ ಸರ್ಕಾರವು ಪರಿಶಿಷ್ಟರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. 100 ಪರಿಶಿಷ್ಟ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸುತ್ತಿದೆ. ರಾಜ್ಯದ 7 ಜಿಲ್ಲೆಗಳ 10 ಸ್ಥಳಗಳಲ್ಲಿ ಅಂಬೇಡ್ಕರ್ ಪಾದಸ್ಪರ್ಶಿ ಸ್ಮಾರಕವನ್ನು ಸ್ಥಾಪಿಸಲಾಗುತ್ತಿದೆ’ ಎಂದರು.
ಪರಿಶಿಷ್ಟರ ಪರ: ಸಮಾರೋಪದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ‘ಬಿಜೆಪಿಯಲ್ಲಿ ಪರಿವಾರವಾದದಿಂದ ರಾಜಕಾರಣಕ್ಕೆ ಯಾರೂ ಬಂದಿಲ್ಲ, ಪರಿಶ್ರಮದಿಂದ ಬಂದಿದ್ದಾರೆ. ಕಾಂಗ್ರೆಸ್‌ಗೆ ಡಾ.ಬಿ.ಆರ್.ಅಂಬೇಡ್ಕರ್ ಶಾಪವಿದೆ. ನರೇಂದ್ರ ಮೋದಿ ಸರ್ಕಾರ ಪಂಚತೀರ್ಥ ಯೋಜನೆ ಮೂಲಕ ಅಂಬೇಡ್ಕರ್‌ಗೆ ಗೌರವ ನೀಡಿದೆ’ ಎಂದು ಹೇಳಿದರು.
ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ಮಾತನಾಡಿ, ‘ಭಾರತ್ ಜೋಡೊ ಯಾತ್ರೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಕನ್ಹಯ್ಯ ಕುಮಾರ್ ಅಂಥ ತುಕುಡೆ ತುಕುಡೆ ಗ್ಯಾಂಗ್ ಜೊತೆ ಸಾಗಿದೆ. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ಪವರ್‌ಲೆಸ್ ಅಧ್ಯಕ್ಷ’ ಎಂದು ಟೀಕಿಸಿದರು.
‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಉತ್ತರಪ್ರದೇಶ ಮಾದರಿಯಲ್ಲಿ ದಲಿತರ ಮತಗಳನ್ನು ಸೆಳೆಯಬೇಕು. ದಲಿತರ ಕೇರಿಗಳಿಗೆ ಹೋಗಿ ಸಮಸ್ಯೆ ಆಲಿಸಿ, ಭೋಜನ ಸ್ವೀಕರಿಸಬೇಕು’ ಎಂದು ಮೋರ್ಚಾ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.