ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಮತ ಸೆಳೆಯಲು ಶ್ರೀನಿವಾಸ ಕಲ್ಯಾಣೋತ್ಸವದ ಮೊರೆ

Last Updated 17 ಮಾರ್ಚ್ 2023, 22:16 IST
ಅಕ್ಷರ ಗಾತ್ರ

ಬೆಂಗಳೂರು/ ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ನಾಯಕರು, ಆಕಾಂಕ್ಷಿತ ಅಭ್ಯರ್ಥಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಮೊರೆ ಹೋಗಿದ್ದಾರೆ.

ಕಲ್ಯಾಣೋತ್ಸವಕ್ಕೆ ತಮ್ಮ ಕ್ಷೇತ್ರ ವ್ಯಾಪ್ತಿಯ ಮನೆಗಳಿಗೆ ಹೋಗಿ ಅವರಿಗೆ ಅರಿಶಿನ–ಕುಂಕುಮ, ಸೀರೆಯ ಜೊತೆಗೆ ದೇವರ ಬೆಳ್ಳಿ ಮೂರ್ತಿಗಳನ್ನು ನೀಡಿ ಆಹ್ವಾನಿಸುತ್ತಿದ್ದಾರೆ. ಈ ಮೂಲಕ ಅವರಿಗೆ ನೀಡಬೇಕಾದ ಉಡುಗೊರೆಯೂ ಸಂದಂತಾಗಿದ್ದು, ಉತ್ಸವದಲ್ಲಿ ಲಾಡು, ಪ್ರಸಾದ, ಊಟ–ತಾಂಬೂಲ ನೀಡಿ ಸಂತೋಷ ನೀಡುವ ಗುರಿ ಹೊಂದಿದ್ದಾರೆ. ಬೆಂಗಳೂರು ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಸಚಿವ, ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್, ಹೆಬ್ಬಾಳದ ಕಾಂಗ್ರೆಸ್‌ ಶಾಸಕ ಬೈರತಿ ಸುರೇಶ್‌, ಯಲಹಂಕದ ಬಿಜೆಪಿ ಶಾಸಕ ಎಸ್‌.ಆರ್‌. ವಿಶ್ವನಾಥ್‌, ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಮುಖಂಡ ಮುನಿರಾಜು ಇಂತಹ ಕಲ್ಯಾಣೋತ್ಸವವನ್ನು ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ನಾಯಕರು ಶ್ರೀನಿವಾಸ ಕಲ್ಯಾಣೋತ್ಸವದ ಮೊರೆ ಹೋಗಿದ್ದಾರೆ. ಬಿಜೆಪಿ ಮುಖಂಡರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಉತ್ಸವ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಬಾಗೇಪಲ್ಲಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ. ಮುನಿರಾಜು, ಗೌರಿಬಿದನೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಲಿರುವ ಕೆ.ಎಚ್. ಪುಟ್ಟಸ್ವಾಮಿ ಗೌಡ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಅದ್ದೂರಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿಸಿದ್ದಾರೆ.

ಚಿಂತಾಮಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ವೇಣುಗೋಪಾಲ್ ಮಾರ್ಚ್‌ 19ರಂದು ಕಲ್ಯಾಣೋತ್ಸವ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೀಕಲ್ ರಾಮಚಂದ್ರ ಗೌಡ ಸಹ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕಲ್ಯಾಣೋತ್ಸವಕ್ಕೆ ಅದ್ದೂರಿಯಾಗಿ ವೇದಿಕೆ, ತಿರುಪತಿ ತಿರುಮಲ ದೇವಾಲಯದ ಪ್ರತಿರೂಪವನ್ನು ಸಿದ್ಧಗೊಳಿಸಲಾಗುತ್ತದೆ. ತಿರುಮಲ ದೇವಾಲಯದಲ್ಲಿ ಕಲ್ಯಾಣೋತ್ಸವ ನಡೆಸುವ ವಿಗ್ರಹಗಳನ್ನು ತಂದು ಅಲ್ಲಿನ ವೇದ ಪಂಡಿತರ ನೇತೃತ್ವದಲ್ಲಿಯೇ ಕಲ್ಯಾಣೋತ್ಸವ ನೆರವೇರಿಸುತ್ತಾರೆ. ‌

ಕಲ್ಯಾಣೋತ್ಸವಕ್ಕೆ ಲಕ್ಷಗಟ್ಟಲೆ ಹಣ ವೆಚ್ಚವಾಗುತ್ತಿದೆ. ತಿರುಪತಿಯಿಂದ ಕಲ್ಯಾಣೋತ್ಸವಕ್ಕೆ ದೇವರ ವಿಗ್ರಹಗಳನ್ನು ಕರೆ ತರಲು ಲಕ್ಷಾಂತರ ರೂಪಾಯಿ ಪಾವತಿಸಬೇಕಾಗುತ್ತದೆ. ಭಕ್ತರಿಗೆ ಊಟ, ವಸ್ತ್ರ, ಲಡ್ಡು ಪ್ರಸಾದ ನೀಡಲಾಗುತ್ತದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಕಲ್ಯಾಣೋತ್ಸವದ ಸಂದರ್ಭದಲ್ಲಿ ಸಚಿವ ಸುಧಾಕರ್, ಕ್ಷೇತ್ರದ ಪ್ರತಿ ದಂಪತಿಗೆ ಉತ್ಸವಕ್ಕೆ ಬರಲು ಬಟ್ಟೆಗಳನ್ನು ಸಹ ವಿತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT