ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ, ರನ್ನ, ಅಂಬೇಡ್ಕರ್‌ ಮತಾಂತರವಾಗಿಲ್ಲವೇ: ಸಿದ್ದರಾಮಯ್ಯ

ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಪರ–ವಿರೋಧ ಸುದೀರ್ಘ ಚರ್ಚೆ
Last Updated 23 ಡಿಸೆಂಬರ್ 2021, 20:04 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಭಾರತದಲ್ಲಿ ಶತಮಾನಗಳಿಂದಲೂ ಮತಾಂತರ ನಡೆಯುತ್ತಿದೆ. ಪಂಪ, ರನ್ನ, ಬಸವಣ್ಣ, ಅಂಬೇಡ್ಕರ್‌, ಸಾಮ್ರಾಟ್ ಅಶೋಕ ಅವರೆಲ್ಲರೂ ತಮ್ಮ ಜಾತಿಯನ್ನು ಬಿಟ್ಟು ಮತ್ತೊಂದು ಧರ್ಮಕ್ಕೆ ಹೋದವರೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಗುರುವಾರ ನಡೆದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು
ಮಾತನಾಡಿದ ಅವರು, ’ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ, ಅವುಗಳ ವಿರುದ್ಧ ಸಿಟ್ಟಿಗೆದ್ದಿರುವ ಜನರನ್ನು ವಿಮುಖಗೊಳಿಸಲು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಹೊರಟಿದ್ದಾರೆ‘ ಎಂದು ಕಿಡಿಕಾರಿದರು.

ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣನವರು ಬ್ರಾಹ್ಮಣರಾಗಿ ಹುಟ್ಟಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲವೇ? ಸಂವಿಧಾನ ಶಿಲ್ಪಿಅಂಬೇಡ್ಕರ್ ಅವರು ಲಕ್ಷಾಂತರ ಜನರ ಜೊತೆಗೆ ಬೌದ್ಧ ಧರ್ಮಕ್ಕೆ ಮತಾಂತರ ಆಗಿಲ್ಲವೇ? ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಪಂಪ, ರನ್ನರು ಜೈನ ಧರ್ಮಕ್ಕೆ ಮತಾಂತರ ಗೊಂಡರು. ದೇಶದಲ್ಲಿ ಶತಮಾನಗಳ ಹಿಂದಿನಿಂದಲೂ ಮತಾಂತರ ನಡೆದುಕೊಂಡು ಬಂದಿದೆ. ಸಾಮ್ರಾಟ್ ಅಶೋಕ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಹೋಗಿಲ್ಲವೇ? ಇವರ‍್ಯಾರೂ ಅಧಿಕಾರವೋ ಅಥವಾ ಇನ್ಯಾವುದೋ ಕಾರಣಕ್ಕೆ ಮತಾಂತರ ಆಗಿಲ್ಲ ಎಂದು ಅವರು ಹೇಳಿದರು.

ಈ ದೇಶದಲ್ಲಿ ಅಸ್ಪೃಶ್ಯತೆ, ಶೋಷಣೆ ಮತ್ತಿತರ ಕಾರಣಗಳಿಂದಾಗಿ ಸಾಕಷ್ಟು ಮಂದಿ ಮತಾಂತರ ಆಗಿದ್ದಾರೆ. ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂದು ಆರ್‌ಎಸ್‌ಎಸ್‌, ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಒಂದು ವೇಳೆ ಆ ರೀತಿ ಆಗಿದ್ದರೆ ಹಿಂದೂಗಳ ಸಂಖ್ಯೆ ಕಡಿಮೆ ಆಗಬೇಕಿತ್ತಲ್ಲ ಎಂದು ಅವರು ಪ್ರಶ್ನಿಸಿದರು.

2001ರ ಜನಗಣತಿ ಪ್ರಕಾರ ಹಿಂದೂಗಳ ಜನಸಂಖ್ಯೆ ಶೇ 83.86 ಇತ್ತು. 2011ರಲ್ಲಿ ಶೇ 84 ಆಗಿದೆ. ಮುಸ್ಲಿಮರ ಜನಸಂಖ್ಯೆ ಶೇ 12.23ರಿಂದ ಸೇ 12.92 ಆಗಿದೆ. ಕ್ರೈಸ್ತರ ಜನಸಂಖ್ಯೆ ಶೇ 1.98 ಇದ್ದಿದ್ದು ಶೇ 1.87ಕ್ಕೆ ಇಳಿಕೆಯಾಗಿದೆ. ಬಲವಂತದ ಮತಾಂತರ ಮಾಡಿದ್ದರೆ ಕ್ರೈಸ್ತರ ಜನಸಂಖ್ಯೆ ಹೆಚ್ಚು ಆಗಬೇಕಿತ್ತಲ್ಲ ಎಂದು ಅವರು ಕೇಳಿದರು.

ಕ್ರಿಯಾಲೋಪ ಎತ್ತಿದ ಬಿಜೆಪಿಯ ಪಿ.ರಾಜೀವ್ ‘2011ರಲ್ಲಿ ಹಿಂದೂಗಳ ಜನಸಂಖ್ಯೆ ಶೇ 78.80 ಆಗಿದೆ’ ಎಂದರು. ದಾಖಲೆಗಳನ್ನು ಪರಿಶೀಲಿಸಿ ತೀರ್ಪು ನೀಡುವೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ನಾನು ಹೇಳಿದ್ದು ಕರ್ನಾಟಕದ ಅಂಕಿ ಅಂಶ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

‘ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ಅಪ್ರಾಪ್ತರಿಗೆ, ಬುದ್ಧಿಭ್ರಮಣೆಯಾದವರನ್ನು ಮತಾಂತರ ಮಾಡಿದಾಗ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಆದರೆ ಇವುಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದರು.

‘ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಅಣ್ಣ– ತಮ್ಮಂದಿರಂತೆ ಬದುಕುವ ಅವಕಾಶ ಇದ್ದು, ಈ ಕಾಯ್ದೆ ಬಂದರೆ ಭಯದ ವಾತಾವರಣ ನಿರ್ಮಾಣವಾಗಲಿದೆ’ ಎಂದು ಕಾಂಗ್ರೆಸ್‌ನ ಕೆ.ಜೆ.ಜಾರ್ಜ್‌ ಹೇಳಿದರು.

‘ಚರ್ಚ್‌ಗಳಾಗಲಿ, ಕ್ರೈಸ್ತ ಸಂಘ– ಸಂಸ್ಥೆಗಳಾಗಲಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿಲ್ಲ. ಆ ರೀತಿ ಯಾರಾದರೂ ಮಾಡುತ್ತಿದ್ದರೆ ಕಠಿಣ ಕ್ರಮ ಕೈಗೊಳ್ಳಿ. ಚರ್ಚ್‌ಗಳಲ್ಲಿ ಧರ್ಮಗುರುಗಳು ಮತಾಂತರದ ಬಗ್ಗೆ ಮಾತನಾಡುವುದೂ ಇಲ್ಲ’ ಎಂದರು.

‘ಹಿಂದೂ ಧರ್ಮ ಶತ–ಶತಮಾನಗಳಿಂದ ಉಳಿದುಕೊಂಡು ಬಂದಿದೆ. ಮುಸ್ಲಿಂ ದೊರೆಗಳು, ಬ್ರಿಟಿಷರು, ಪೋರ್ಚುಗೀಸರು ಬಂದರೂ ಹಿಂದೂ ಧರ್ಮ ಅಳಿಸಲು ಸಾಧ್ಯವಾಗಿಲ್ಲ. ಭಾರತದಲ್ಲಿ ಜೈನ, ಬೌದ್ಧ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗ ಆದಿ ಶಂಕರಾಚಾರ್ಯರು ದೇಶವನ್ನು ಸುತ್ತಿ, ನಾಲ್ಕು ಪೀಠಗಳನ್ನು ಸ್ಥಾಪಿಸಿ ಹಿಂದೂ ಧರ್ಮ ಉಳಿಸಿದರು. ಅವರು ಯಾವುದೇ ಬಿಲ್‌ (ಮಸೂದೆ) ತಂದು ಮಾಡಿ ಆ ಕಾರ್ಯ ಮಾಡಿದ್ದಲ್ಲ’ ಎಂದರು.

ಚರ್ಚ್‌ಗೆ ಹೋದವರೆಲ್ಲ ಮತಾಂತರ ಆಗಲ್ಲ: ಬಂಡೆಪ್ಪ
‘ಚರ್ಚ್‌ಗೆ ಹೋದವರೆಲ್ಲ ಮತಾಂತರ ಆಗುತ್ತಾರೆ ಎಂಬುದರಲ್ಲಿ ಹುರುಳಿಲ್ಲ. ನಾನೂ ಚರ್ಚ್‌ಗೆ ಹೋಗಿದ್ದೇನೆ. ಪ್ರಾರ್ಥನೆಗೆ ತನ್ನದೇ ಆದ ಶಕ್ತಿ ಇದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷ ಉಪನಾಯಕ ಬಂಡೆಪ್ಪ ಕಾಶೆಂಪೂರ ಹೇಳಿದರು.

‘ರಾಜ್ಯದಲ್ಲಿ ಮತಾಂತರಕ್ಕೆ ಸಂಬಂಧಿಸಿದಂತೆ ಎಷ್ಟು ಪ್ರಕರಣಗಳು ದಾಖಲಾಗಿವೆ ಎನ್ನುವುದನ್ನು ತಿಳಿಸಬೇಕು. ಬಲವಂತವಾಗಿ ಮತಾಂತರ ಮಾಡುವುದನ್ನು ನಾನೂ ಒಪ್ಪುವುದಿಲ್ಲ. ಕ್ರೈಸ್ತ ಮಾತ್ರವಲ್ಲ, ಮುಸ್ಲಿಂ ಸಮುದಾಯದಲ್ಲೂ ಬಲವಂತದ ಮತಾಂತರಕ್ಕೆ ವಿರೋಧವಿದೆ’ ಎಂದು ಅವರು ಹೇಳಿದರು.

‘ಈ ಮಸೂದೆ ದುರುಪಯೋಗದ ಸಾಧ್ಯತೆ ಹೆಚ್ಚಾಗಿದೆ. ತಮಗೆ ಆಗದವರ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸುವ ಸಾಧ್ಯತೆ ಹೆಚ್ಚಾಗಿವೆ.ಹಾಗಾಗಿ, ಮಸೂದೆ ವಾಪಸ್‌ ಪಡೆಯಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಅನ್ನೂ ಹರಿದು ಬಿಸಾಕ್ತಾರೆ: ಬಿಎಸ್‌ವೈ
‘ಈ ಮಸೂದೆಯ ಬಗ್ಗೆ ಕಾಂಗ್ರೆಸ್‌ನವರು ಅನಗತ್ಯ ಗೊಂದಲ ನಿರ್ಮಿಸುತ್ತಿದ್ದಾರೆ. ಯಾವುದೇ ಧರ್ಮವನ್ನು ನಿರ್ಬಂಧಿಸುವ ಅಂಶ ಇದರಲ್ಲಿ ಇಲ್ಲ. ಯಾರೂ ಭಯಪಡಬೇಕಾಗಿಲ್ಲ’ ಎಂದು ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಕಾಂಗ್ರೆಸ್‌ನ ಇದೇ ಮನಸ್ಥಿತಿ ಮುಂದುವರಿದರೆ ಕಾಂಗ್ರೆಸ್‌ ಅನ್ನು ಹರಿದು ಬಿಸಾಕುವ ದಿನಗಳು ದೂರವಿಲ್ಲ. ಸಾಧು–ಸಂತರ ಮನಸ್ಸು ನೋಯಿಸುವುದು ಸರಿಯಲ್ಲ ಎಂದರು.

ಇಲ್ಲಿ ಏಸುಕ್ರಿಸ್ತನನ್ನು ಪೂಜಿಸಲು, ಪೈಗಂಬರ್‌ ಮತ್ತು ಹಿಂದೂ ದೇವರನ್ನು ಪೂಜಿಸಲು ಯಾವುದೇ ಅಭ್ಯಂತರವಿಲ್ಲ. ಎಲ್ಲರಿಗೂ ಪೂರ್ಣ ಸ್ವಾತಂತ್ರ್ಯವಿದೆ. ಆದರೆ, ಬಲವಂತದ ಮತಾಂತರ ಆಗಬಾರದು. ಈ ಸಂಬಂಧ ಹಲವು ಸಾಧು ಸಂತರು ನನ್ನ ಬಳಿ ಬಂದು ಮಾತನಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಮಸೂದೆ ಪ್ರತಿ ಹರಿದ ಬಗ್ಗೆ ಮಠಾಧೀಶರು ನೊಂದುಕೊಂಡಿದ್ದಾರೆ ಎಂದರು.

*
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಮಾಯಕರನ್ನು ದುರುಪಯೋಗಪಡಿಸಲಾಗುತ್ತಿದೆ ಅವರಿಗೆ ಹೆಚ್ಚಿನ ರಕ್ಷಣೆ ನೀಡಲು ಈ ಮಸೂದೆ ತಂದಿದ್ದೇವೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

*
ಎರಡೂ ರಾಜಕೀಯ ಪಕ್ಷಗಳು ಸೇರಿ ಈ ಮಸೂದೆ ಮಾಡಿವೆ. 2016 ರಲ್ಲಿ ಜಾರ್ಜ್‌ ಅವರು ಆಂಜನೇಯ ಮೂಲಕ ಹೇಳಿಸಿ ಮಸೂದೆ ತಡೆದರು.
-ಎಚ್‌.ಡಿ.ರೇವಣ್ಣ, ಜೆಡಿಎಸ್‌

*
ಒರಿಜಿನಲ್‌ ಚರ್ಚ್‌ಗಳು ಮತಾಂತರ ಮಾಡುತ್ತಿಲ್ಲ. ಮತಾಂತರಗೊಂಡಿರುವ ಭೋವಿ, ಕುರುಬ, ಲಿಂಗಾಯತರು ಮತಾಂತರ ಮಾಡುತ್ತಿದ್ದಾರೆ.
-ಗೂಳಿಹಟ್ಟಿ ಶೇಖರ್, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT