ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಿಎಂಗಳಿಗೆ ಹಿಂದಿನ ಸಾಲು

ಗಡ್ಡ ಬೋಳಿಸಿಕೊಂಡು ಬಂದಿದ್ದ ಬಸನಗೌಡ ಪಾಟೀಲ ಯತ್ನಾಳ l ಹಸಿರು ಶಾಲು ಹೊದ್ದ ಡಿ.ಕೆ. ಶಿವಕುಮಾರ್‌
Last Updated 13 ಸೆಪ್ಟೆಂಬರ್ 2021, 19:21 IST
ಅಕ್ಷರ ಗಾತ್ರ

ಬೆಂಗಳೂರು: ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹಿಂದಿನ (ನಾಲ್ಕನೇ) ಸಾಲು, ಗಡ್ಡ ಬೋಳಿಸಿಕೊಂಡು ಬಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ. ಹಸಿರು ಶಾಲು ಹೊದ್ದು ಕುಳಿತಿದ್ದ ಡಿ.ಕೆ.ಶಿವಕುಮಾರ್, ಮಾಸ್ಕ್‌ ಮತ್ತು ಕೈಗೆ ಗ್ಲೌಸ್‌ ಇಲ್ಲದೇ ಕುಳಿತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ...

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ನಡೆಯುತ್ತಿರುವ ವಿಧಾನಸಭೆಯ ಸೋಮವಾರದ ಕಲಾಪದಲ್ಲಿ ಕಂಡು ಬಂದ ದೃಶ್ಯಗಳಿವು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಜಗದೀಶ್‌ ಶೆಟ್ಟರ್‌ ಅವರಿಗೆ ಕೊನೆಯ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಕೆಲವು ದಶಕಗಳಿಂದ ಅಡಳಿತ ಮತ್ತು ವಿರೋಧ ಪಕ್ಷದಲ್ಲಿದ್ದಾಗ ಮುಂದಿನ ಸಾಲಿನಲ್ಲೇ ಕೂರುತ್ತಿದ್ದ ಇಬ್ಬರಿಗೂ ಮುಖ್ಯಮಂತ್ರಿ ಆಸನದಿಂದ ಹಿಂದಿನ ನಾಲ್ಕನೇ ಸಾಲಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಯಡಿಯೂರಪ್ಪ ಅವರಿಗೆ ಮುಖ್ಯ ಸಚೇತರಿಗೆ ಮೀಸಲಾದ ಆಸನದ ಪಕ್ಕವೇ ಆಸನ ನೀಡಲಾಗಿದೆ. ಶಾಸಕ ಸುರೇಶ್‌ ಕುಮಾರ್‌ ಅವರಿಗೂ ಇದೇ ಸಾಲಿನಲ್ಲಿ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುವವರೆಗೆ ತಾವು ಗಡ್ಡ ಬೋಳಿಸುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದರು. ಮುಖ್ಯಮಂತ್ರಿ ಬದಲಾವಣೆ ಆದ ಬೆನ್ನಲ್ಲೇ ಗಡ್ಡ ಬೋಳಿಸಿಕೊಂಡಿದ್ದ ಯತ್ನಾಳ್‌ ಅವರು ವಿಶೇಷ ರೀತಿ ಕಾಣಿಸಿಕೊಂಡರು.

ಕೋವಿಡ್‌ ಆರಂಭವಾದ ಬಳಿಕ ವಿಧಾನಸಭೆಗೆ ಬರುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಸ್ಕ್‌, ಫೇಸ್‌ ಶೀಲ್ಡ್‌ ಮತ್ತು ಕೈಗೆ ಗ್ಲೌಸ್‌ ಹಾಕಿಕೊಂಡಿರುತ್ತಿದ್ದರು. ಆದರೆ ಈ ಬಾರಿ ಮಾಸ್ಕ್‌ ಧರಿಸಿ ಒಳಗೆ ಬಂದರೂ ಬಳಿಕ ಮಾಸ್ಕ್‌ ತೆಗೆದರು. ಫೇಸ್ ಶೀಲ್ಡ್‌ ಹಾಕಿಕೊಂಡಿರಲಿಲ್ಲ.

ಮೊದಲ ಬಾರಿಗೆ ಸಚಿವರಾದ ಶಂಕರ್‌ ಪಾಟೀಲ ಮುನೇನಕೊಪ್ಪ, ಮುನಿರತ್ನ ಅವರು ಸದನದೊಳಗೆ ಚುರುಕಿನಿಂದ ಓಡಾಡಿದ್ದು ಕಂಡು ಬಂತು.

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ತಕ್ಷಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುಜರಾತ್‌ನ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರಳಿದರು. ಬೊಮ್ಮಾಯಿ ಅವರು ತಮ್ಮ ಮಾತಿನಲ್ಲಿ ಪದೇ ಪದೇ ‘ಯಡಿಯೂರಪ್ಪ ಸಾಹೇಬರು’ ಎಂಬ ಪದವನ್ನು ಬಳಸಿದರು.

ಬೆಳಗಾವಿ ಪಾಲಿಕೆ ಸದಸ್ಯರು: ಬೆಳಗಾವಿ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಬಿಜೆಪಿಯ ಸದಸ್ಯರಲ್ಲಿ ಹಲವರು ವಿಧಾನಸಭೆಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪವನ್ನು ವೀಕ್ಷಿಸಿದರು. ಸದಸ್ಯರು ಕೇಸರಿ ಪೇಟ ತೊಟ್ಟು ಗಮನ ಸೆಳೆದರು.

‘ನಮ್ಮದು ಲವ್‌– ಹೇಟ್‌ ಸಂಬಂಧ’

‘ನಂದು ಮತ್ತು ಈಶ್ವರಪ್ಪಂದು ಒಂದು ರೀತಿ ಲವ್‌ ಅಂಡ್‌ ಹೇಟ್‌ ಸಂಬಂಧ. ಈಶ್ವರಪ್ಪನ ಮೇಲೆ ಪ್ರೀತಿಯೂ ಇದೆ– ರಾಜಕೀಯ ವೈರವೂ ಇದೆ’.

–ಹೀಗೆಂದು ವಿಧಾನಸಭೆಯಲ್ಲಿ ಹೇಳಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡುತ್ತಿದ್ದಾಗ ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್ ಆಡಿದ ಮಾತು ಸ್ವಾರಸ್ಯಕರ ತಿರುವು ಪಡೆಯಿತು.

ಸಿದ್ದರಾಮಯ್ಯ ಮಾತನಾಡುವಾಗ ಮೈಕ್ರೊಫೋನ್‌ಗೆ ಕಾಗದ ಅಡ್ಡ ಹಿಡಿದು ಮಾತನಾಡುತ್ತಿದ್ದರು. ರಮೇಶ್‌ ಕುಮಾರ್‌ ಅವರು ಸಿದ್ದರಾಮಯ್ಯ ಗಮನಕ್ಕೆ ತಂದು, ‘ನೀವು ಹೇಳುತ್ತಿರುವುದು ಸರಿಯಾಗಿ ಕೇಳುತ್ತಿಲ್ಲ’ ಎಂದರು. ‘ನಾನು ಮಾತಾಡ್ತಾ ಇರೋದು ಕೇಳ್ತಾ ಇಲ್ವಾ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಪ್ರಶ್ನಿಸಿದರು. ‘ಕೇಳ್ತಾ ಇದೆ’ ಎಂದು ಕಾಗೇರಿ ತಲೆ ಅಲ್ಲಾಡಿಸಿದರು.

‘ನಿಮ್ಮಿಬ್ಬರ ಮಧ್ಯೆ ಅಡ್ಜೆಸ್ಟ್‌ಮೆಂಟ್‌ ಇದೆ’ ಎಂದು ರಮೇಶ್‌ಕುಮಾರ್‌ ಛೇಡಿಸಿದರು.

‘ನಮಗೆ–ನಿಮಗೆ ಅಡ್ಜೆಸ್ಟ್‌ಮೆಂಟ್‌ ಇದ್ಯಾ? ಅಡ್ಜೆಜ್ಟ್‌ಮೆಂಟ್‌ ಏನೂ ಇಲ್ಲ, ಪರಸ್ಪರ ಗೌರವ ಇದೆ’ ಎಂದು ಸಿದ್ದರಾಮಯ್ಯ ಅವರು ಕಾಗೇರಿ ಉದ್ದೇಶಿಸಿ ಹೇಳಿದರು.

‘ಹಾಗಿದ್ರೆ ಈಶ್ವರಪ್ಪ ಜತೆ ಇರಬೇಕು’ ಎಂದು ರಮೇಶ್‌ ಕುಮಾರ್‌ ಹೇಳಿದರು. ‘ಈಶ್ವರಪ್ಪನ ಜತೆ ನಂದು ಲವ್‌ ಅಂಡ್‌ ಹೇಟ್‌ ಸಂಬಂಧ’ ಎಂದು ನಗುತ್ತಾ ಹೇಳಿದರು. ‘ಹೌದದು, ರಾಜಕೀಯವಾಗಿ ಮಾತ್ರ ವೈರತ್ವ’ ಎಂದು ಈಶ್ವರಪ್ಪ ಧ್ವನಿಗೂಡಿಸಿದರು.

ಚಿತ್ರ ನಟಿ ಜಯಂತಿಯವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮಧುರ ನೆನಪು ಹಂಚಿಕೊಂಡರು. ‘ಪ್ರತಿ ಬಾರಿ ಜಯಂತಿ ಸಿಕ್ಕಾಗ ‘ಏನಪ್ಪಾ ಹೀರೋ’ ಎನ್ನುತ್ತಿದ್ದರು. ನಾನು ಅವರಿಗೆ ಏನಮ್ಮಾ ‘ಎವರ್‌ ಗ್ರೀನ್ ಹೀರೋಯಿನ್‌’ ಎನ್ನುತ್ತಿ‌ದ್ದೆ’ ಎಂದರು.

‘ಶಾಸಕನಾಗಿ ಬರುವುದಕ್ಕೆ ಬೇಸರವಿಲ್ಲ’

‘ಈ ಬಾರಿ ಅಧಿವೇಶನಕ್ಕೆ ಕೇವಲ ಶಾಸಕನಾಗಿ ಬರುತ್ತಿರುವುದಕ್ಕೆ ಬೇಸರವಿಲ್ಲ. ಮುಖ್ಯ ಸಚೇತಕರ ‍ಪಕ್ಕದಲ್ಲೇ ಆಸನ ವ್ಯವಸ್ಥೆಗೆ ಮನವಿ ಮಾಡಿದ್ದೆ. ಅದಕ್ಕೆ ವ್ಯವಸ್ಥೆ ಮಾಡಿದ್ದಾರೆ’ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

‘ಶಾಸಕನಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿಯಾಗೇ ಕೆಲಸ ಮಾಡಬೇಕೆಂದು ಇಲ್ಲ. ಮುಂದಿನ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಜತೆ ರಾಜ್ಯ ಪ್ರವಾಸ ಮಾಡುತ್ತೇನೆ’ ಎಂದು ಅವರು ಹೇಳಿದರು.

ಯಡಿಯೂರಪ್ಪ ಸುತ್ತುವರಿದ ಶಾಸಕರು: ಹಲವು ಶಾಸಕರು ಯಡಿಯೂರಪ್ಪ ಅವರ ಬಳಿ ಹೋಗಿ ನಮಸ್ಕರಿಸಿದರೆ, ಸಚಿವರಾದ ಶಿವರಾಮ್ ಹೆಬ್ಬಾರ್ ಮತ್ತು ಸಿ.ಸಿ.ಪಾಟೀಲ ಅವರು ಕಾಲುಮುಟ್ಟಿ ನಮಸ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT