ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಜಿಸಿ ನಿಯಮ ಉಲ್ಲಂಘಿಸಿ ಅಕ್ರಮ ನೇಮಕ: ಕುಲಪತಿ, ಕುಲಸಚಿವರ ವಿರುದ್ಧ ಕಠಿಣ ಕ್ರಮ

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಶಿಫಾರಸು
Last Updated 14 ಡಿಸೆಂಬರ್ 2021, 22:05 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿ ಮಾಡಿರುವ ಕುಲಪತಿಗಳು ಮತ್ತು ಕುಲಸಚಿವರ ವಿರುದ್ಧ ಕಠಿಣ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಶಿಫಾರಸು ಮಾಡಿದೆ.

ಭಾರತ ಲೆಕ್ಕನಿಯಂತ್ರಕರು ಮತ್ತುಮಹಾಲೆಕ್ಕ ಪರಿಶೋಧಕರ ವರದಿಯಲ್ಲಿನ ಬೋಧನಾ ಸಿಬ್ಬಂದಿ ನೇಮಕಾತಿ, ಪದೋನ್ನತಿ ಮತ್ತು ವೇತನ ನಿಗದಿಯ ವಿಷಯಾಧಾರಿತ ಲೆಕ್ಕಪರಿಶೋಧನೆ ಬಗ್ಗೆ ಸಮಿತಿಯ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

ಅಲ್ಲದೆ, ಸರ್ಕಾರದ ಹಂತದಲ್ಲಿ ನೇಮಕಾತಿಗಳಿಗೆ ಅನುಮೋದನೆ ನೀಡಿರುವ ಅಧಿಕಾರಿಗಳ ವಿರುದ್ಧವೂ ಶಿಸ್ತಿನ ಕ್ರಮತೆಗೆದುಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ವರದಿಯ ಪ್ರಮುಖ ಶಿಫಾರಸುಗಳು
*ನಿಯಮ ಬಾಹಿರವಾಗಿ ನೇಮಕವಾಗಿರುವ, ಪದೋನ್ನತಿ ಹೊಂದಿರುವ ಪ್ರಾಧ್ಯಾಪಕರು, ಸಹಾಯಕ ಗ್ರಂಥಪಾಲಕರು, ಇತರೆ ಬೋಧನಾ ಸಿಬ್ಬಂದಿ ಸೇವೆಯಲ್ಲಿದ್ದರೆ, ತಕ್ಷಣವೇ ಅಂತಹವರನ್ನು ವಜಾಗೊಳಿಸಬೇಕು. ಪಾವತಿಸಿರುವ ಹೆಚ್ಚುವರಿ ಮೊತ್ತವನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯಗಳು, ಕಾಲೇಜುಗಳು ವಸೂಲಿ ಮಾಡಬೇಕು.
* ಚಾಲ್ತಿಯಲ್ಲಿದ್ದ ಯುಜಿಸಿ ನಿಯಮಾವಳಿಗಳನ್ನು ಪಾಲಿಸದೇ ದುರುದ್ದೇಶಪೂರ್ವಕವಾಗಿ ವಿಶ್ವವಿದ್ಯಾಲಯಗಳ ಪರಿನಿಯಮಗಳನ್ನು ರಚನೆ ಮಾಡಿ, ಅದರ ಪ್ರಕಾರ ಕಾನೂನು ಬಾಹಿರವಾಗಿ ನೇಮಕಾತಿಯನ್ನು ವಿಶ್ವವಿದ್ಯಾಲಯಗಳು ಮಾಡಿರುವುದು ಸರಿಯಲ್ಲ. ಆಗಿರುವ ಲೋಪದೋಷಗಳನ್ನು ಶೀಘ್ರವಾಗಿ ಸರಿಪಡಿಸಿ, ಅನುಸರಣಾ ವರದಿ ಸಲ್ಲಿಸಬೇಕು.
*ಹಿಂದೆ ಗೌರವಾನಿತ್ವರೂ, ಪ್ರಾಮಾಣಿಕರು ಮತ್ತು ಸಮಾಜಕ್ಕೆ ಮಾದರಿಯಾದ ವ್ಯಕ್ತಿಗಳು ಕುಲಪತಿಗಳು ಆಗುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅರ್ಹತೆ ಇಲ್ಲದವರನ್ನು ಕುಲಪತಿಗಳನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ಇದರಿಂದ ವಿಶ್ವವಿದ್ಯಾಲಯಗಳ ಗುಣಮಟ್ಟ ಕುಸಿಯುತ್ತಿದೆ. ಉನ್ನತ ಶಿಕ್ಷಣದ ಗುಣಮಟ್ಟ ಕಾಪಾಡಲು ಅಗತ್ಯವಿರುವ ಕ್ರಮ ತೆಗೆದುಕೊಳ್ಳಬೇಕು.
*ಯುಜಿಸಿ ಮತ್ತು ಎಐಸಿಟಿಇ ಶೈಕ್ಷಣಿಕ ಸಿಬ್ಬಂದಿ ನೇಮಕಾತಿ ಕುರಿತು ಕನಿಷ್ಠ ವಿದ್ಯಾರ್ಹತೆ, ಆಯ್ಕೆ ಸಮಿತಿಯ ರಚನೆ ಕುರಿತು ನೇಮಕಾತಿ ಸೂತ್ರಗಳನ್ನು ನಿಗದಿಪಡಿಸುತ್ತದೆ. ಸೂತ್ರಗಳನ್ನು ಉಲ್ಲಂಘಿಸಿ, ಹಲವಾರು ವಿಶ್ವವಿದ್ಯಾಲಯಗಳಲ್ಲಿ ನಿಯಮ ಬಾಹಿರ ನೇಮಕಾತಿ ಮಾಡಿರುವುದನ್ನು ಮಹಾಲೇಖಪಾಲರ ವರದಿ ಹೇಳಿದೆ. ಇಂತಹ ಲೋಪದೋಷಗಳನ್ನು ನಿಯಂತ್ರಿಸಲು ಮತ್ತು ಉತ್ತಮ ಗುಣಮಟ್ಟದ ಬೋಧನ ಮತ್ತು ಬೋಧನೇತರ ಸಿಬ್ಬಂದಿ ನೇಮಕಾತಿ ಮಾಡಲು ಪಾರದರ್ಶಕವಾದ ಒಂದು ನೇಮಕಾತಿ ಆಯೋಗ ರಚನೆ ಅಥವಾ ಬದಲಿ ವ್ಯವಸ್ಥೆ ಕಾರ್ಯಗತಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT