ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಲಾಕ್‌ಡೌನ್‌ ಮತ್ತಷ್ಟು ಸಡಿಲಿಕೆ

Last Updated 20 ಜೂನ್ 2021, 21:50 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಸೋಮವಾರದಿಂದ ಹಗಲಿನ ವೇಳೆ ಲಾಕ್‌ಡೌನ್‌ ಸಂಪೂರ್ಣವಾಗಿ ಸಡಿಲಿಕೆ ಆಗಲಿದೆ. 13 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಭಾಗಶಃ ಸಡಿಲಿಕೆ ಆಗಲಿದ್ದು, ಮೈಸೂರು ಜಿಲ್ಲೆಯಲ್ಲಿ ಮಾತ್ರ ಕಠಿಣ ನಿರ್ಬಂಧಗಳು ಮುಂದುವರಿಯಲಿವೆ.

ಎರಡನೇ ಹಂತದ ಲಾಕ್‌ಡೌನ್‌ ಸಡಿಲಿಕೆ ಸೋಮವಾರ ಬೆಳಿಗ್ಗೆ 6ರಿಂದಲೇ ಜಾರಿಗೆ ಬರಲಿದೆ. ಕೋವಿಡ್‌ ದೃಢ ಪ್ರಮಾಣ ಸರಾಸರಿ ದರ ಶೇಕಡ 5ಕ್ಕಿಂತ ಕಡಿಮೆ ಇರುವ ಕಾರಣದಿಂದ ಹಗಲು ಲಾಕ್‌ಡೌನ್‌ನಿಂದ ವಿನಾಯ್ತಿ ಪಡೆದಿರುವ ಜಿಲ್ಲೆಗಳ ಪಟ್ಟಿಗೆ ಧಾರವಾಡವನ್ನೂ ಸೇರಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ. ಈ ಕಾರಣದಿಂದ 17 ಜಿಲ್ಲೆಗಳಲ್ಲಿ ಹಗಲಿನ ವೇಳೆ ಎಲ್ಲ ಬಗೆಯ ಅಂಗಡಿಗಳ ವಹಿವಾಟು ನಡೆಸಲು ಅವಕಾಶ ದೊರೆಯಲಿದೆ.

ಕೋವಿಡ್‌ ದೃಢ ಪ್ರಮಾಣ ದರ ಶೇ 10ಕ್ಕಿಂತ ಹೆಚ್ಚಿರುವ ಮೈಸೂರು ಜಿಲ್ಲೆಯಲ್ಲಿ ಬಸ್‌ ಸಂಚಾರಕ್ಕೆ ಅವಕಾಶ
ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬಸ್‌ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಈ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲೂ ಶೇ 50ರಷ್ಟು ಪ್ರಯಾಣಿಕರ ಮಿತಿಯೊಂದಿಗೆ ಬಸ್‌ ಸಂಚಾರ ಆರಂಭವಾಗಲಿದೆ. ಕೆಎಸ್‌ಆರ್‌ಟಿಸಿ, ಬೆಂಗಳೂರುಮಹಾನಗರ ಸಾರಿಗೆ ಸಂಸ್ಥೆ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಸಾರಿಗೆನಿಗಮಗಳು ಬಸ್‌ ಸಂಚಾರ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿವೆ. ಬೆಂಗಳೂರಿನಲ್ಲಿ ಶೇ 50ರಷ್ಟು ಪ್ರಯಾಣಿಕರ ಮಿತಿಯೊಂದಿಗೆ ಮೆಟ್ರೊ ರೈಲು ಸಂಚಾರವೂ ಆರಂಭವಾಗಲಿದೆ.

ಕೋವಿಡ್‌ ದೃಢ ಪ್ರಮಾಣ ದರ ಶೇ 5ಕ್ಕಿಂತ ಕಡಿಮೆ ಇರುವ 17 ಜಿಲ್ಲೆಗಳಲ್ಲಿ ಹೊರಾಂಗಣ ಚಿತ್ರೀಕರಣ, ಹೊರಾಂಗಣ ಕ್ರೀಡಾ ಚಟುವಟಿಕೆಗಳು, ಲಾಡ್ಜ್‌ ಮತ್ತು ರೆಸಾರ್ಟ್‌ಗಳ ಬಳಕೆ, ಜಿಮ್‌ಗಳನ್ನು ತೆರೆಯಲು ಅವಕಾಶ ದೊರಕಲಿದೆ.

ಶೇ 50ರಷ್ಟು ಗ್ರಾಹಕರ ಮಿತಿಯೊಂದಿಗೆ ಹೋಟೆಲ್‌, ಕ್ಲಬ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತು ಆಹಾರ ಸೇವಿಸಲು ಅವಕಾಶ ನೀಡಲಾಗಿದೆ.

ಭಾಗಶಃ ಸಡಿಲಿಕೆ: ಕೋವಿಡ್‌ ದೃಢ ಪ್ರಮಾಣ ದರ ಶೇ 5 ರಿಂದ 10ರಷ್ಟು ಇರುವ 13 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಭಾಗಶಃ ಸಡಿಲಿಕೆ ಆಗಲಿದೆ. ಈ ಜಿಲ್ಲೆಗಳಲ್ಲಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೂ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ದೊರಕಲಿದೆ. ಆಟೊ ಮತ್ತು ಟ್ಯಾಕ್ಸಿ ಸೇವೆ ಕೂಡ ಆರಂಭವಾಗಲಿದೆ.

ಹಗಲಿನ ವೇಳೆ ಲಾಕ್‌ಡೌನ್‌ ಇಲ್ಲದ ಜಿಲ್ಲೆಗಳು

ಬಿಬಿಎಂಪಿ ಸೇರಿದಂತೆ ಬೆಂಗಳೂರು ನಗರ, ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಗದಗ, ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಹಾವೇರಿ, ರಾಮನಗರ, ಯಾದಗಿರಿ, ಬೀದರ್‌ ಮತ್ತು ಧಾರವಾಡ.

ಭಾಗಶಃ ಸಡಿಲಿಕೆಯಾಗುವ ಜಿಲ್ಲೆಗಳು

ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ವಿಜಯಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT