ಗುರುವಾರ , ಜುಲೈ 7, 2022
23 °C

ಕರ್ನಾಟಕ ದರ್ಶನ ಮಾಡೋದಿದ್ರೆ ಸಿದ್ದರಾಮಯ್ಯಗೆ ಪ್ಯಾಕೇಜ್ ಟೂರ್ ವ್ಯವಸ್ಥೆ: ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ.‌ ಮತ್ತೆ ಚುನಾವಣಾ ರಾಜಕಾರಣ ಮಾಡುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ’ ಎಂದಿದ್ದ ವಿಧಾನಸಭೆ ವಿರೋಧ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ. 

ವಲಸೆರಾಮಯ್ಯ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ಮಾನ್ಯ ವಲಸೆರಾಮಯ್ಯ ಅವರೇ, ಯಾವುದು ಹಿತವು ನಿಮಗೆ? ಪಟ್ಟ ಶಿಷ್ಯ ಜಮೀರನ ಜಹಾಗೀರ್ ಚಾಮರಾಜಪೇಟೆಯೊ? ಈಗಿನ ಕ್ಷೇತ್ರ ಬಾದಾಮಿಯೋ? ಇಲ್ಲ 2018 ಚುನಾವಣೆಯೇ ನಿಮ್ಮ ಕೊನೆಯ ಚುನಾವಣೆ ಅಂದುಕೊಳ್ಳುವುದೋ? ವಲಸೆ ನಾಯಕ ಸಿದ್ದರಾಮಯ್ಯ ಅವರೇ, ಉತ್ತರಿಸುವಿರಾ? ಎಂದಿದೆ.

ಮತ್ತೊಂದು ಟ್ವೀಟ್‌ನಲ್ಲಿ, ಸಿದ್ದರಾಮಯ್ಯ ಅವರಿಗೆ ಕರ್ನಾಟಕ ದರ್ಶನ ಮಾಡುವ ಆಸೆಯಿದ್ದರೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಹಲವು ಪ್ಯಾಕೇಜ್ ಪ್ರವಾಸದ ವ್ಯವಸ್ಥೆ ಮಾಡುತ್ತೇವೆ. ಅದನ್ನು ಬಿಟ್ಟು ಹಳೆ ಮೈಸೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಬೆಂಗಳೂರು ಎಂದು ವಲಸೆ ಹೋಗಬಹುದಾದ ಕ್ಷೇತ್ರಗಳ ಪಟ್ಟಿ ಮಾಡಿದರೆ ಡಿ.ಕೆ.ಶಿವಕುಮಾರ್ ಸುಮ್ಮನಿರುವರೇ? ಎಂದು ಪ್ರಶ್ನಿಸಿದೆ. 

ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಗಳ ಮೂಲಕ ಒಂದು ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಿ, ಜಾತಿ ಜಾತಿಗಳ ಮದ್ಯೆ ಬಿರುಕು ಮೂಡಿಸಿದ ಸಿದ್ದರಾಮಯ್ಯ ಅವರಿಗೆ ತನ್ನದು ಎನ್ನುವ ಒಂದೂ ಕ್ಷೇತ್ರವೂ ಇಲ್ಲ. ಕೋಲಾರ, ಹುಣಸೂರು, ಚಾಮರಾಜಪೇಟೆ, ಕೊಪ್ಪಳ, ಮುಂದೆ? ಆಣೆ ರಾಮಯ್ಯ ಅವರೇ, ಬಾದಾಮಿ ಜನತೆಗೆ ನಿಮ್ಮ ಅಧಿನಾಯಕಿ ಸೋನಿಯಾ ಮೇಲೆ ಆಣೆ ಮಾಡಿ. ಎಂದಿದ್ದಾರೆ.

ಕೊನೆಯ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸುತ್ತೀರಿ ಎಂದು ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ‘ವರುಣಾ, ಹುಣಸೂರು, ಚಾಮರಾಜಪೇಟೆ, ಬಾದಾಮಿ, ಕೋಲಾರ, ಹೆಬ್ಬಾಳ, ಕೊಪ್ಪಳ, ಚಾಮುಂಡೇಶ್ವರಿ... ಹೀಗೆ ವಿವಿಧೆಡೆ ಸ್ಪರ್ಧೆ ಮಾಡುವಂತೆ ಜನರು ಆಹ್ವಾನ ನೀಡುತ್ತಿದ್ದಾರೆ. ಎಲ್ಲಿಂದ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಮುಂದೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಸಿದ್ದರಾಮಯ್ಯ ಅವರು ಉತ್ತರಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು