ಬುಧವಾರ, ಜನವರಿ 19, 2022
17 °C

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ: ಸಿದ್ದರಾಮಯ್ಯರನ್ನು ಮತ್ತೆ ಕೆಣಕಿದ ಬಿಜೆಪಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ್ ಅವರ ಹೇಳಿಕೆ ಉಲ್ಲೇಖಿಸಿ ರಾಜ್ಯ ಬಿಜೆಪಿ ಘಟಕ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೆಣಕಿದೆ.

ಈ ಕುರಿತು ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಸರ್ಕಾರ ಹಾಗೂ ಪಕ್ಷದ ಪಾತ್ರವಿಲ್ಲ ಎಂದು ಇಷ್ಟು ದಿನ ಜಾರಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಅವರೇ, ನೀವು ಹೆಣೆದ ನಾಟಕದ ಸೂತ್ರಧಾರ ಯಾರೆಂಬುದು ಈಗ ಅನಾವರಣವಾಗಿದೆ. ಧರ್ಮ ವಿಭಜನೆಗೆ ಕೈ ಹಾಕಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ನಿಮ್ಮ ಆಪ್ತ ಎಸ್.ಆರ್. ಪಾಟೀಲ್ ಹೇಳಿಕೆ ನೀಡಿದ್ದಾರೆ, ನಿಮ್ಮ‌ಉತ್ತರವೇನು?’ ಎಂದು ಪ್ರಶ್ನಿಸಿದೆ.

‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಭಾಗವಹಿಸಲು ನನಗೂ ಒತ್ತಾಯ ಮಾಡಿದ್ದರು. ಆದರೆ, ಅದು ರಾಜಕೀಯ ಪಕ್ಷದ ಕೆಲಸವಲ್ಲ ಎಂದು ನಾನು ದೂರ ಉಳಿದಿದ್ದೆ’ ಎಂದು ಎಸ್‌.ಆರ್. ಪಾಟೀಲ ಮಂಗಳವಾರ ಬಾಗಲಕೋಟೆಯಲ್ಲಿ ಹೇಳಿರುವುದಾಗಿ ವರದಿಯಾಗಿತ್ತು.

 

ಇನ್ನೊಂದು ಟ್ವೀಟ್‌ನಲ್ಲಿ ಬಿಜೆಪಿ, ‘ಈ ಹಿಂದೆ ಡಿ.ಕೆ. ಶಿವಕುಮಾರ್ ಇದೇ ಅರ್ಥದಲ್ಲಿ ಮಾತನಾಡಿದಾಗ ಧರ್ಮ ವಿಭಜನೆಯ ರೂವಾರಿಗಳಾದ ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ್‌ ಸಾರ್ವಜನಿಕವಾಗಿಯೇ ರೌದ್ರಾವತಾರ ಪ್ರದರ್ಶನ ಮಾಡಿದ್ದರು. ಈಗ ಸತ್ಯ ಹೇಳಿದ ಎಸ್.ಆರ್. ಪಾಟೀಲ್ ಅವರನ್ನು ಹೇಗೆ ನಡೆಸಿಕೊಳ್ಳುತ್ತೀರಿ? ಈ ಹಿರಿಯ ಜೀವವನ್ನೂ ರಾಜಕೀಯವಾಗಿ ಮುಗಿಸುತ್ತೀರಾ’ ಎಂದು ಪ್ರಶ್ನಿಸಲಾಗಿದೆ

‘ಎಸ್.ಆರ್. ಪಾಟೀಲ್ ಅವರ ಹೇಳಿಕೆಯಲ್ಲೇ ಸಿದ್ದರಾಮಯ್ಯ ಪಟಾಂಲಂ ಸಂಚು ಅನಾವರಣಗೊಂಡಿದೆ. ನೀವೇಕೆ ಅಷ್ಟು ಆತುರ ತೋರಿದಿರಿ ಸಿದ್ದರಾಮಯ್ಯ?’ ಎಂದು ಬಿಜೆಪಿ ಕೇಳಿದೆ.

‘ಎಸ್.ಆರ್.ಪಾಟೀಲ್ ಅವರಂತಹ ಹಿರಿಯ ಧರ್ಮಜ್ಞಾನವನ್ನು ಸಕಾಲದಲ್ಲಿ ಬಳಸದ ಪರಿಣಾಮ ಇಂದು ಕಾಂಗ್ರೆಸ್ ಪಕ್ಷವನ್ನು ಜನತೆ ಕಿತ್ತೆಸೆದಿದ್ದಾರೆ. ಧರ್ಮ ವಿಭಜನೆ ಎನ್ನುವುದು ಈ ಶತಮಾನ ಕಂಡ ಅತಿದೊಡ್ಡ ಧಾರ್ಮಿಕ ಷಡ್ಯಂತ್ರ. ಸಿದ್ದರಾಮಯ್ಯನವರೇ, ಇದಕ್ಕೆ ನೀವೊಬ್ಬರೇ ನಿರ್ದೇಶಕರೋ ಅಥವಾ ಜನಪಥ್ ರಸ್ತೆಯ ನಿರ್ದೇಶನವೂ ಇತ್ತೋ?’ ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ಮೇಲೆ ಬೆರಳು ತೋರಿಸಿದೆ ಬಿಜೆಪಿ.

‘ಹಿಂದುತ್ವದ ವಿನಾಶಕ್ಕಾಗಿ ಯಾವ ದಾರಿಯನ್ನು ಬೇಕಾದರೂ ಕಾಂಗ್ರೆಸ್ ಹಿಡಿಯುತ್ತದೆ ಎಂಬುದಕ್ಕೆ ಲಿಂಗಾಯತ ಧರ್ಮ ವಿರೋಧಿ ಹೋರಾಟವೇ ಸಾಕ್ಷಿಯಾಗಿದೆ. ಈ ಪ್ರಯತ್ನ ನಡೆಸಿದ ನಿಮ್ಮನ್ನು ಇತಿಹಾಸ ಎಂದಿಗೂ ಕ್ಷಮಿಸದು. ಪಾಟೀಲರಂತಹ ಹಿರಿಯರ ಮಾತಿಗೂ ಮನ್ನಣೆ ನೀಡದೆ, ಯಾರಿಗಾಗಿ ಹಠಕ್ಕೆ ಬಿದ್ದು ಧರ್ಮ ಒಡೆಯಲು ಮುಂದಾದಿರಿ?’ ಎಂದು ಸಿದ್ದರಾಮಯ್ಯನವರನ್ನು ಬಿಜೆಪಿ ಕೆಣಕಿದೆ.

ಇದನ್ನೂ ಓದಿ: ಪತ್ನಿಯರ ಜತೆ ಸುದ್ದಿಗೋಷ್ಠಿ ನಡೆಸಿ ಕಣ್ಣೀರಿಟ್ಟ ಕೆಜಿಎಫ್‌ ಬಾಬು: ಕಾರಣ ಏನು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು