ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 1,784 ಮಂದಿಗೆ ಕಪ್ಪು ಶಿಲೀಂಧ್ರ ದೃಢ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

Last Updated 5 ಜೂನ್ 2021, 18:45 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಈವರೆಗೆ 1,784 ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ. ಈ ಸೋಂಕಿಗೆ ಒಳಗಾದವರಲ್ಲಿ 111 ಮಂದಿ ಮೃತಪಟ್ಟಿದ್ದಾರೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಇಲ್ಲಿನ ಸರ್‌ ಸಿ.ವಿ. ರಾಮನ್ ಜನರಲ್ ಆಸ್ಪತ್ರೆ ಹಾಗೂ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಕಪ್ಪು ಶಿಲೀಂಧ್ರ ಸೋಂಕಿನ ಮಾಹಿತಿಯನ್ನು ಜಿಲ್ಲಾವಾರು ಕಲೆಹಾಕಲಾಗಿದೆ. ಸದ್ಯ 1,564 ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಯಿಲೆಗೆ ಒಳಗಾದವರಲ್ಲಿ ಈವರೆಗೆ 62 ಮಂದಿ ಗುಣಮುಖರಾಗಿದ್ದಾರೆ. ಇದಕ್ಕೆ ಬೇಕಾದ ಔಷಧಿ ಲಭ್ಯ ಇದೆ’ ಎಂದರು.

ಇದರ ಈ ಚಿಕಿತ್ಸೆಗೆ ‘ಲಿಪೋಸೋಮಲ್ ಅ್ಯಂಫೊಟೆರಿಸಿನ್’ ಔಷಧ ಬೇಕಾಗುತ್ತದೆ. ಕೇಂದ್ರ ಸರ್ಕಾರವು ಈ ಔಷಧದ 9,750 ಶೀಸೆಗಳನ್ನು (ವಯಲ್‌) ರಾಜ್ಯಕ್ಕೆ ಹಂಚಿಕೆ ಮಾಡಿದೆ. ಇದರಲ್ಲಿ 8,860 ಶೀಸೆಗಳು ಶುಕ್ರವಾರ ಬಂದಿವೆ. ಒಟ್ಟು 18,650 ಶೀಸೆಗಳು ರಾಜ್ಯಕ್ಕೆ ದೊರೆತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 8,860 ಶೀಸೆಗಳನ್ನು ಬಳಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ 9,740 ಶೀಸೆಗಳನ್ನು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಈ ತಿಂಗಳು 75 ಲಕ್ಷ ಜನರಿಗೆ ಲಸಿಕೆ

‘ಈ ತಿಂಗಳು 70 ಲಕ್ಷದಿಂದ 75 ಲಕ್ಷ ಜನರಿಗೆ ಕೋವಿಡ್ ಲಸಿಕೆ ಹಾಕಲಾಗುವುದು. ರಾಜ್ಯದಲ್ಲಿ ಈವರೆಗೆ ಒಂದೂವರೆ ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಜೂನ್ ಅಂತ್ಯಕ್ಕೆ ರಾಜ್ಯದ 2.25 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು. ಆದಷ್ಟು ಶೀಘ್ರ ಎಲ್ಲರಿಗೂ ಲಸಿಕೆ ದೊರೆಯಲಿದೆ’ ಎಂದರು.

ಆಯುಷ್ಮಾನ್ ಭಾರತ್ ಅಡಿ ಚಿಕಿತ್ಸೆ

‘ಸರ್ಕಾರಿ ಆಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರಕ್ಕೆ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬರಿಗೆ ₹ 2 ಲಕ್ಷದಿಂದ ₹ 3 ಲಕ್ಷ ಖರ್ಚಾಗಲಿದ್ದು, ಇದನ್ನು ಸರ್ಕಾರವೇ ಭರಿಸುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯಡಿ ಈ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೆಂಬ ಸಲಹೆಗಳು ಬಂದಿವೆ. ಈ ಕುರಿತು ಮುಖ್ಯಮಂತ್ರಿ ಜತೆಗೆ ಚರ್ಚೆ ನಡೆಸಿ, ಕ್ರಮಕೈಗೊಳ್ಳಲಾಗುವುದು’ ಎಂದು ಸುಧಾಕರ್ ಹೇಳಿದರು.

‘ಕೋವಿಡ್‌: 28 ಮಕ್ಕಳು ಅನಾಥ’

ಕಾರವಾರ: ‘ರಾಜ್ಯದಲ್ಲಿ ಕೋವಿಡ್‌ನಿಂದ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡ 28 ಮಕ್ಕಳನ್ನು ಗುರುತಿಸಲಾಗಿದೆ. 21 ಕುಟುಂಬಗಳಲ್ಲಿ ಹೀಗಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೋಹನರಾಜ್ ತಿಳಿಸಿದರು.

ಕೋವಿಡ್‌ನಿಂದ ಅನಾಥರಾದ ಮಕ್ಕಳ ಆರೈಕೆ ಮತ್ತು ಪೋಷಣೆ ಸಂಬಂಧ ನೋಡಲ್ ಅಧಿಕಾರಿಯನ್ನಾಗಿ ಇವರನ್ನು ರಾಜ್ಯ ಸರ್ಕಾರ ನಿಯುಕ್ತಿಗೊಳಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇಂಥ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯ ನೆರವು ನೀಡಲಾಗುತ್ತಿದೆ. ಶನಿವಾರದ ಮಾಹಿತಿಯಂತೆ ರಾಯಚೂರು ಜಿಲ್ಲೆಯಲ್ಲಿ ನಾಲ್ವರು, ಬಾಗಲಕೋಟೆ ಜಿಲ್ಲೆಯಲ್ಲಿ ಮೂವರು, ಬೆಳಗಾವಿ, ಬೆಂಗಳೂರು ನಗರ, ಬೀದರ್, ಗದಗ, ಹಾಸನ, ಕೊಡಗು, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ತಲಾ ಇಬ್ಬರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಕೋಲಾರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ತಲಾ ಒಬ್ಬರು ಅನಾಥರಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT