ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯಗೆ ಉಗುರು, ಹಲ್ಲು ಇಲ್ಲದ ಹುಲಿಯ ಪರಿಸ್ಥಿತಿ: ಬಿಜೆಪಿ

Last Updated 22 ಅಕ್ಟೋಬರ್ 2020, 11:40 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು 'ಕಾಡು ಮನುಷ್ಯ' ಎಂದು ಕರೆದಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ 'ನಿಮ್ಮ ಮಾತುಗಳೇ ಕಾಂಗ್ರೆಸ್‌ ಸಂಸ್ಕೃತಿಯನ್ನು ಬಿಂಬಿಸುತ್ತಿದೆ' ಎಂದು ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದೆ.

‘ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ನಳಿನ್ ಕುಮಾರ್ ಕಟೀಲ್ ಎಂಬ ಪೋಕರಿಯನ್ನು ಯಾರೋ ತಮ್ಮ ‘ಸಂತೋಷ’ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್.ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ’ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಅದಕ್ಕೆ ಪ್ರತಿಯಾಗಿ 'ಜನರ ಭಾವನೆಗೆ ಸ್ಪಂದಿಸದ ನಿಮ್ಮನ್ನು ಸ್ವಕ್ಷೇತ್ರ ಚಾಮುಂಡೇಶ್ವರಿಯ ಮತದಾರರು 'ಬೀದಿಯಲ್ಲಿ ಅಲೆಯುವಂತೆ' ಮಾಡಿದ್ದಾರೆ ಎಂಬುದನ್ನು ಮರೆಯಬೇಡಿ. ಕಾಂಗ್ರೆಸ್‌ ಪಕ್ಷದಲ್ಲಿ ನಿಮ್ಮ ಸ್ಥಿತಿ ಉಗುರು ಮತ್ತು ಹಲ್ಲು ಇಲ್ಲದ ಹುಲಿಯ ಪರಿಸ್ಥಿತಿಯಂತಾಗಿದೆ' ಎಂದು ಬಿಜೆಪಿ ಟ್ವೀಟಿಸಿದೆ.

ನೀವು ಬಳಸುತ್ತಿರುವ ಪದಗಳೇ ಯಾರು 'ಕಾಡು ಮನುಷ್ಯ' ಎಂಬುದನ್ನು ಸಾಬೀತು ಪಡಿಸುತ್ತಿದೆ. ಕಾಡುಮನುಷ್ಯ, ನಾಲಾಯಕ್‌, ಬೀದಿ ಅಲೆಯುತ್ತಿದ್ದವ, ಎಲುಬಿಲ್ಲದವ ಎಂಬ ನಿಮ್ಮ ಮಾತುಗಳೇ ಕಾಂಗ್ರೆಸ್‌ ಸಂಸ್ಕೃತಿಯನ್ನು ಬಿಂಬಿಸುತ್ತಿದೆ ಎಂದು ಪ್ರತಿಕ್ರಿಯಿಸಿದೆ.

ಕಾಂಗ್ರೆಸ್ ಸೇರುವುದುಕ್ಕೂ ಮುನ್ನ ಮೊದಲು ಜೆಡಿಎಸ್‌ನಲ್ಲಿ ಸಕಲ ಅಧಿಕಾರ ಭಾಗ್ಯಗಳನ್ನು ಅನುಭವಿಸಿ, ಅವರಿಗೇ ನಾಮ ಹಾಕಿದ ಮಹಾನುಭಾವರು ನೀವೇ ಅಲ್ಲವೇ? ಬಿಜೆಪಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಉನ್ನತ ಸ್ಥಾನ ಸಿಗುವುದೆಂದು ನೀವೇ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು. ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ಕಟೀಲ್‌ ಅವರು 2019 ರಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದರು. ಜನತೆ ನಿಮ್ಮ ಬೆನ್ನುಮೂಳೆ ಮುರಿದ ಇತಿಹಾಸ ನೆನಪಿಸಿಕೊಳ್ಳಿ, ಗೆದ್ದದ್ದು ಕೇವಲ 1,696 ಮತಗಳಿಂದ. ಸ್ವಲ್ಪ ವ್ಯತ್ಯಾಸ ಆಗಿದ್ದರೂ ನೀವು ಕಾಡುಮನುಷ್ಯರಂತೆ ಜೀವನ ಮಾಡಬೇಕಿತ್ತು ಎಂದು ಬಿಜೆಪಿ ಟೀಕಿಸಿದೆ.

ಚುನಾವಣೆಯಲ್ಲಿ ಸ್ವಾರ್ಥಕ್ಕಾಗಿ ಪರಮೇಶ್ವರರನ್ನೇ ಸೋಲಿಸಿದ ಕುತಂತ್ರಿ ನೀವಲ್ಲವೇ? ಈ ಹಿಂದಿನ ಉಪಚುನಾವಣೆಯಲ್ಲಿ ನಳೀನ್‌ ಕುಮಾರ್ ಕಟೀಲ್‌ ಅವರ ನಾಯಕತ್ವದಲ್ಲಿ 15 ಕ್ಷೇತ್ರಗಳಲ್ಲಿ 12 ಸ್ಥಾನ ಗೆದ್ದು ಬಿ.ಎಸ್‌.ಯಡಿಯೂರಪ್ಪ ಅವರ ಗದ್ದುಗೆ ಬಲಪಡಿಸಿದ್ದೇವೆ. ಈ ಉಪಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ. ಡಿ.ಜೆ ಹಳ್ಳಿ ಗಲಭೆ ನಡೆಸಿದವರ ಪರವಾಗಿ ನೀವು ಯಾಕೆ ವಕಾಲತ್ತು ವಹಿಸಿದ್ದೀರಿ? ಆರೋಪಿಗಳನ್ನು ಅಮಾಯಕರು ಎಂದು ಬಿಂಬಿಸಿದ ನೀವು, ಈಗ ಗಲಭೆಯ ರೂವಾರಿ ಸಂಪತ್‌ ರಾಜ್‌ ಅವರಿಗೆ ಚುನಾವಣಾ ಜವಾಬ್ದಾರಿ ಹೊರಿಸಿದ್ದೀರಿ. ನಿಮ್ಮದೇ ದಲಿತ ಶಾಸಕರ ಪರ ನಿಲ್ಲುವ ತಾಕತ್ತು ನಿಮಗಿಲ್ಲವೇ? ಎಂದು ಉಪಚುನಾವಣೆ ಜಿದ್ದಾಜಿದ್ದಿಯ ಸವಾಲು ಹೊರಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT