ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದಕರಿಗೆ ವಿವಿಧ ರೀತಿಯ ಆರ್ಥಿಕ ಪ್ರೋತ್ಸಾಹ ನೀಡುವ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜಬೊಮ್ಮಾಯಿ ಈ ವಿಷಯ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಅಮ್ಲಜನಕದ ಕೊರತೆ ಎದುರಿಸಿದ್ದೆವು. ರಾಜ್ಟಯದಲ್ಲಿ 9 ಉತ್ಪಾದನಾ ಘಟಕಗಳಿವೆ. 815 ಮೆ.ಟನ್ ಉತ್ಪಾದನಾ ಸಾಮರ್ಥ್ಯವಿದ್ದು, 5,700 ಮೆ.ಟನ್ ದಾಸ್ತಾನು ಸಾಮರ್ಥ್ಯವಿದೆ. ಇವೆರಡನ್ನೂ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಹೂಡಿಕೆ ಮಾಡಲು ಬರುವ ಉದ್ಯಮಿಗಳಿಗೆ ಹಲವು ರಿಯಾಯ್ತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಇದರಲ್ಲಿ ಹೂಡಿಕೆ ಮಾಡುವ ಉದ್ಯಮಿಗೆ ಘಟಕ ಸ್ಥಾಪನೆಗೆ ಬಂಡವಾಳ ಹೂಡುವ ವೆಚ್ಚದ ಮೇಲೆ ಶೇ 25 ರಷ್ಟು ಸಹಾಯಧನ ನೀಡಲಾಗುವುದು. ಹೂಡಿಕೆದಾರರು ಕನಿಷ್ಠ ₹10 ಕೋಟಿ ಬಂಡವಾಳ ಹೂಡಬೇಕು. ಘಟಕ ಸ್ಥಾಪಿಸಿ ಮೂರು ವರ್ಷಗಳವರೆಗೆ ವಿದ್ಯುತ್ ಮೇಲಿನ ಸುಂಕ ಶೇ100 ರಷ್ಟು ವಿನಾಯ್ತಿ ನೀಡಲಾಗುತ್ತದೆ. ವಿದ್ಯುತ್ ದರ ಪಾವತಿಯ ಮೇಲೆ ಪ್ರತಿ ಟನ್ ಆಮ್ಲಜನಕ ಉತ್ಪಾದನೆ ಮೇಲೆ ₹1000 ಸಬ್ಸಿಡಿ ನೀಡಲಾಗುವುದು. ನೋಂದಣಿ ಮತ್ತು ಮುದ್ರಾಂಕದ ಸ್ಟಾಂಪ್ ಡ್ಯೂಟಿಯಲ್ಲಿ ಶೇ 100 ರಷ್ಟು ವಿನಾಯ್ತಿ, ಭೂಪರಿವರ್ತನೆಗಾಗಿ ಪಾವತಿಸುವ ಶುಲ್ಕವನ್ನು ಶೇ 100 ರಷ್ಟು ಮರುಪಾವತಿ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.
ಬಡ್ತಿಗಾಗಿ ಸಾಮಾನ್ಯ ಹಿರಿತನ ಪಟ್ಟಿ: ಕಂದಾಯ ಇಲಾಖೆಯಲ್ಲಿ ಬಡ್ತಿಗಾಗಿ ಸಾಮಾನ್ಯ ಹಿರಿತನ ಪಟ್ಟಿ ಸಿದ್ಧಪಡಿಸಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ಈ ಮೊದಲು ನೇರವಾಗಿ ಶೇ 30, ಎಸ್‌ಡಿಎಯಿಂದ ಶೇ 30 ಮತ್ತು ಗ್ರಾಮಲೆಕ್ಕಿಗರಿಂದ ಶೇ 40 ಬಡ್ತಿ ನೀಡಲಾಗುತ್ತಿತ್ತು. ಸಾಮಾನ್ಯ ಹಿರಿತನ ಪಟ್ಟಿ ಮಾಡಬೇಕು ಎಂದು ಕಂದಾಯ ಇಲಾಖೆಯ ಸಿಬ್ಬಂದಿಯ ವಿವಿಧ ಸಂಘಟನೆಗಳು ಬೇಡಿಕೆ ಮಂಡಿಸಿದ್ದವು. ಅದಕ್ಕೆ ಒಪ್ಪಿಗೆ ನೀಡಿದೇವೆ ಎಂದರು.
ಇದರ ಪರಿಣಾಮ 3059 ಎಸ್‌ಡಿಎ, 3847 ಗ್ರಾಮ ಲೆಕ್ಕಿಗ ಮತ್ತು 2400 ಎಫ್‌ಡಿಎ ಹುದ್ದೆಗಳ ಸಾಮಾನ್ಯ ಹಿರಿತನ ಪಟ್ಟಿ ತಯಾರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಇತರ ತೀರ್ಮಾನಗಳು: * ಕರ್ನಾಟಕ ರಾಜ್ಯ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು(ಜೆಒಸಿ), ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಲು ತೀರ್ಮಾನ
* 139 ಕೈದಿಗಳಿಗೆ ಸನ್ನಡತೆ ಬಿಡುಗಡೆಗೆ ಶಿಫಾರಸು
*ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಿಸಲು ₹58 ಕೋಟಿ ಆಡಳಿತಾತ್ಮಕ ಅನುಮೋದನೆ
*ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಗಾಗಿ ₹31.66 ಕೋಟಿ ವೆಚ್ಚದಲ್ಲಿ ಬೆಳಗಾವಿ ಮತ್ತು ಮಂಗಳೂರಿನಲ್ಲಿ ಕಟ್ಟಡವನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ
*ಮೈಸೂರಿನ ಲಲಿತ ಮಹಲ್ ಪ್ಯಾಲೆಸ್ ಹೊಟೇಲ್ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಲಿಮಿಟೆಡ್‌ಗೆ ನೀಡಲು ಒಪ್ಪಿಗೆ
* ಸಿರಗುಪ್ಪಾ ಪಟ್ಟಣಕ್ಕೆ 2500 ಎಂಎಲ್ ಸಾಮರ್ಥ್ಯದ ಜಲಾಶಯ ನಿರ್ಮಿಸಲು ಯೋಜನಾ ಪರಿಷ್ಕೃತ ವೆಚ್ಚ ₹45.46 ಕೋಟಿಗೆ ಒಪ್ಪಿಗೆ
* ದಾಸನಪುರ ಎಪಿಎಂಸಿ, 93 ಶಾಪ್, 54 ತಿಂಗಳ ಬಾಡಿಗೆ, ಲೀಸ್ ಕಂ ಸೇಲ್‌ನಲ್ಲಿ 24 ಲಕ್ಷ ಇತ್ತು, 20 ಲಕ್ಷ ಕ್ಕೆ ಇಳಿಸಬೇಕು. ತಿಂಗಳ ಬಾಡಿಗೆ 20 ಸಾವಿರ ಇದ್ದದ್ದು 15 ಸಾವಿರಕ್ಕೆ ಇಳಿಸಲಾಗಿದೆ.
*2019 ರ ಪ್ರವಾಹದ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಲು ಆರ್ಥಿಕ ನೆರವು ನೀಡುವ ಸಂಬಂಧ ಆದೇಶ ಹೊರಡಿಸಲಾಗಿತ್ತು. ಅದಕ್ಕೆ ಒಪ್ಪಿಗೆ ನೀಡಲಾಗಿದೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.